Advertisement

ಬೆಂಗಳೂರಲ್ಲಿ ಇತ್ಯರ್ಥವಾಗಲಿದೆ ಟಿ20 ಸರಣಿ

09:57 AM Sep 23, 2019 | mahesh |

ಬೆಂಗಳೂರು: ಮೊಹಾಲಿಯಲ್ಲಿ ಹರಿಣಗಳನ್ನು ಬೇಟೆಯಾಡಿದ ಹುರುಪಿನಲ್ಲಿರುವ ಟೀಮ್‌ ಇಂಡಿಯಾ ಈಗ ಟಿ20 ಸರಣಿಯನ್ನು ವಶಪಡಿಸಿಕೊಳ್ಳುವ ಹೆಚ್ಚಿನ ಅವಕಾಶ ಹೊಂದಿದೆ. ರವಿವಾರ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಇತ್ತಂಡಗಳ ನಡುವೆ 3ನೇ ಹಾಗೂ ಅಂತಿಮ ಮುಖಾಮುಖೀ ಏರ್ಪಡಲಿದ್ದು, ಇದನ್ನು ಗೆದ್ದರೆ ಸರಣಿ ಭಾರತದ್ದಾಗಲಿದೆ.

Advertisement

ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಸೇಡು ತೀರಿಸಿಕೊಳ್ಳುವ ಹವಣಿಕೆಯಲ್ಲಿದ್ದು, ಗೆದ್ದು ಸರಣಿಯನ್ನು ಸಮಬಲಕ್ಕೆ ತರಲು ಶಕ್ತಿಮೀರಿ ಪ್ರಯತ್ನಿಸುವುದರಲ್ಲಿ ಅನು ಮಾನವಿಲ್ಲ. ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಮೊದಲ ಟಿ20 ಪಂದ್ಯ ಮಳೆಯಿಂದ ಸಂಪೂರ್ಣ ಕೊಚ್ಚಿ ಹೋಗಿದ್ದ‌ರಿಂದ ಇಲ್ಲಿ ಸಮಬಲಕ್ಕೆ ಬಾಗಿಲು ತೆರೆಯಲ್ಪಟ್ಟಿದೆ.

2015ರ ಪ್ರವಾಸದ ವೇಳೆ ಮೊದಲ 2 ಪಂದ್ಯಗಳನ್ನು ಗೆದ್ದ ದಕ್ಷಿಣ ಆಫ್ರಿಕಾ 2-0 ಅಂತರದಿಂದ ಸರಣಿ ಮೇಲೆ ಹಕ್ಕು ಚಲಾಯಿಸಿತ್ತು. ಅಂದು ಕೋಲ್ಕತಾ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಹೀಗಾಗಿ 4 ವರ್ಷಗಳ ಹಿಂದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಬೇಕಾದ ಸವಾಲು ಕೂಡ ಟೀಮ್‌ ಇಂಡಿಯಾ ಮುಂದಿದೆ.

ಇದು ಬೆಂಗಳೂರಿನಲ್ಲಿ ನಡೆಯಲಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಚುಟುಕು ಕ್ರಿಕೆಟ್‌ ಸಮರ. ಉಳಿದಂತೆ ಇಲ್ಲಿ 4 ಪಂದ್ಯಗಳನ್ನಾಡಿರುವ ಭಾರತ 2-2 ಸಮಬಲದ ದಾಖಲೆ ಹೊಂದಿದೆ.

ಹರಿದೀತು ರನ್‌ ಮಳೆ…
ಬೆಂಗಳೂರು ಟ್ರ್ಯಾಕ್‌ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆ ಇರುವುದರಿಂದ ಇದು ಎರಡೂ ತಂಡಗಳ ಬೌಲರ್‌ಗಳಿಗೆ ಅಗ್ನಿಪರೀಕ್ಷೆ ಆಗಲಿದೆ. ಆಸ್ಟ್ರೇಲಿಯ ವಿರುದ್ಧ ಕಳೆದ ಫೆ. 27ರಂದು ಇಲ್ಲಿ ಕೊನೆಯ ಟಿ20 ಪಂದ್ಯ ನಡೆದಾಗ ಭಾರತ 4ಕ್ಕೆ 190 ರನ್‌ ಪೇರಿಸಿಯೂ ಇದನ್ನು ಉಳಿಸಿಕೊಳ್ಳುವಲ್ಲಿ ವಿಫ‌ಲವಾಗಿತ್ತು. ಗ್ಲೆನ್‌ ಮ್ಯಾಕ್ಸ್‌ವೆಲ್‌ 55 ಎಸೆತಗಳಿಂದ ಅಜೇಯ 113 ರನ್‌ ಬಾರಿಸಿ ಕಂಟಕವಾಗಿ ಕಾಡಿದ್ದನ್ನು ಬಹುಶಃ ಕೊಹ್ಲಿ ಪಡೆ ಮರೆತಿರಲಿಕ್ಕಿಲ್ಲ!

Advertisement

ಬದಲಾವಣೆ ಅನುಮಾನ
ಭಾರತ ಈ ನಿರ್ಣಾಯಕ ಪಂದ್ಯಕ್ಕಾಗಿ ಆಡುವ ಬಳಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ವಿಜೇತ ತಂಡವನ್ನೇ ಕಣಕ್ಕಿಳಿಸುವ ಬಗ್ಗೆ ಯೋಚಿಸಲಾಗುತ್ತಿದೆ. ಹೆಚ್ಚೆಂದರೆ ಒಂದು ಪರಿವರ್ತನೆ ಆದೀತು. ವಾಷಿಂಗ್ಟನ್‌ ಸುಂದರ್‌ ಬದಲು ಸ್ಪಿನ್ನರ್‌ ರಾಹುಲ್‌ ಚಹರ್‌ ಆಡಬಹುದು. ಆಗ ಕೆ.ಎಲ್‌. ರಾಹುಲ್‌, ಮನೀಷ್‌ ಪಾಂಡೆ ಅವರ ಆಟವನ್ನು ಕಾಣುವ ಅವಕಾಶದಿಂದ ತವರಿನ ವೀಕ್ಷಕರು ವಂಚಿತರಾಗುತ್ತಾರೆ.

ಆಫ್ರಿಕಾ ಬೌಲಿಂಗ್‌ ವೈಫ‌ಲ್ಯ
ದ. ಆಫ್ರಿಕಾ ಟಿ20 ಸ್ಪೆಷಲಿಸ್ಟ್‌ಗಳನ್ನೇ ಹೊಂದಿರುವ ತಂಡ. ಬ್ಯಾಟಿಂಗ್‌ ವಿಭಾಗದಲ್ಲಿ ಡಿ ಕಾಕ್‌, ಮಿಲ್ಲರ್‌, ಹೆಂಡ್ರಿಕ್ಸ್‌ ಅವರನ್ನೇ ನೆಚ್ಚಿಕೊಂಡಿದೆ. ಮೊಹಾಲಿಯಲ್ಲಿ ತಂಡದ ಬೌಲಿಂಗ್‌ ಯೂನಿಟ್‌ ಸಂಪೂರ್ಣ ವೈಫ‌ಲ್ಯ ಕಂಡದ್ದು ಪ್ರವಾಸಿಗರಿಗೆ ಎದುರಾದ ಭಾರೀ ಹಿನ್ನಡೆ ಆಗಿದೆ.

ಯುವ ಆಟಗಾರರ ದರ್ಬಾರು
ಎರಡೂ ತಂಡಗಳು ಕೆಲವೇ ಮಂದಿ ಅನುಭವಿಗಳನ್ನು ಹೊಂದಿದ್ದು, ಉಳಿದಂತೆ ಯುವ ಕ್ರಿಕೆಟಿಗರದೇ ದರ್ಬಾರಾಗಿರುವುದು ಈ ಸರಣಿಯ ವಿಶೇಷ. ಆದರೆ ಮೊಹಾಲಿ ಮೇಲಾಟದಲ್ಲಿ ಅನುಭವಿಗಳಾದ ಕ್ವಿಂಟನ್‌ ಡಿ ಕಾಕ್‌, ವಿರಾಟ್‌ ಕೊಹ್ಲಿಯೇ ಬ್ಯಾಟಿಂಗ್‌ನಲ್ಲಿ ಮಿಂಚಿದ್ದು ವಿಶೇಷ. ನಾಯಕತ್ವದ ವಿಚಾರದಲ್ಲಿ ಮಾತ್ರ ಡಿ ಕಾಕ್‌ ಅನನುಭವಿಯೇ ಆಗಿದ್ದರು. ಅವರು ಟಿ20 ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಮುನ್ನಡೆಸಿದ್ದು ಇದೇ ಮೊದಲಾಗಿತ್ತು.

ಬೌಲಿಂಗ್‌ನಲ್ಲಿ ಭಾರತದ ಪ್ರದರ್ಶನ ಅಮೋಘ ಮಟ್ಟದಲ್ಲಿತ್ತು. ಡಿ ಕಾಕ್‌-ಬವುಮ ಭರ್ಜರಿ ಪ್ರಹಾರವಿಕ್ಕುತ್ತಿದ್ದಾಗ ಡೆತ್‌ ಓವರ್‌ಗಳಲ್ಲಿ ಹರಿಣಗಳ ಓಟಕ್ಕೆ ಬ್ರೇಕ್‌ ಹಾಕಿದ್ದೇ ಇದಕ್ಕೆ ಸಾಕ್ಷಿ. ಭುವನೇಶ್ವರ್‌, ಬುಮ್ರಾ ಗೈರಲ್ಲಿ ಯುವ ಬೌಲರ್‌ಗಳಾದ ದೀಪಕ್‌ ಚಹರ್‌, ವಾಷಿಂಗ್ಟನ್‌ ಸುಂದರ್‌, ನವದೀಪ್‌ ಸೈನಿ ಧಾರಾಳ ಯಶಸ್ಸು ಕಂಡಿದ್ದರು. ಜತೆಗೆ ಪಾಂಡ್ಯಾಸ್‌, ಜಡೇಜ ಕೂಡ ಉತ್ತಮ ಪ್ರದರ್ಶನ ನೀಡಿದ್ದರು.

ಸಂಭಾವ್ಯ ತಂಡಗಳು
ಭಾರತ: ರೋಹಿತ್‌ ಶರ್ಮ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ಕೃಣಾಲ್‌ ಪಾಂಡ್ಯ, ರವೀಂದ್ರ ಜಡೇಜ, ರಾಹುಲ್‌ ಚಹರ್‌, ದೀಪಕ್‌ ಚಹರ್‌, ನವದೀಪ್‌ ಸೈನಿ.

ದಕ್ಷಿಣ ಆಫ್ರಿಕಾ: ಕ್ವಿಂಟನ್‌ ಡಿ ಕಾಕ್‌ (ನಾಯಕ), ರೀಝ ಹೆಂಡ್ರಿಕ್ಸ್‌, ರಸ್ಸಿ ವಾನ್‌ ಡರ್‌ ಡುಸೆನ್‌, ಡೇವಿಡ್‌ ಮಿಲ್ಲರ್‌, ಡ್ವೇನ್‌ ಪ್ರಿಟೋರಿಯಸ್‌, ಆ್ಯಂಡಿಲ್‌ ಫೆಲುಕ್ವಾಯೊ, ಬೊರ್ನ್ ಫಾರ್ಟಿನ್‌, ಕಾಗಿಸೊ ರಬಾಡ, ಅನ್ರಿಚ್‌ ನೋರ್ಜೆ,  ತಬ್ರೇಜ್‌ ಶಂಸಿ.

Advertisement

Udayavani is now on Telegram. Click here to join our channel and stay updated with the latest news.

Next