ವಿಶ್ವಸಂಸ್ಥೆ/ನವದೆಹಲಿ: ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಉಗ್ರ ಅಬ್ದುಲ್ ರೆಹಮಾನ್ ಮಕ್ಕಿಯನ್ನು “ವಿಶ್ವಸಂಸ್ಥೆಯ ಘೋಷಿತ ಭಯೋತ್ಪಾದಕ’ ಪಟ್ಟಿಗೆ ಸೇರಿಸುವ ಭಾರತ ಮತ್ತು ಅಮೆರಿಕದ ಪ್ರಯತ್ನಕ್ಕೆ ಕೊನೇ ಕ್ಷಣದಲ್ಲಿ ಚೀನ ಕಲ್ಲು ಹಾಕಿದೆ.
ಅಮೆರಿಕವು ಈಗಾಗಲೇ ಆತನನ್ನು ಭಯೋತ್ಪಾದಕ ಎಂದು ಘೋಷಿಸಿದೆ. 26/11ರ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ನ ಸೋದರ ಸಂಬಂಧಿಯಾಗಿರುವ ಮಕ್ಕಿ (74) ಲಷ್ಕರ್ ಸಂಘಟನೆಯಲ್ಲಿ ಹಲವು ವಿಭಾಗಗಳ ಮುಖ್ಯಸ್ಥನಾಗಿದ್ದ. ಈತನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರ್ಪಡೆ ಮಾಡುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಭಾರತ ಮತ್ತು ಅಮೆರಿಕವು ಜಂಟಿ ಪ್ರಸ್ತಾಪವನ್ನು ಸಲ್ಲಿಸಿದ್ದವು. ಆದರೆ, ಪಾಕಿಸ್ತಾನದ ಮಿತ್ರರಾಷ್ಟ್ರವಾದ ಚೀನ ಕೊನೇ ಹಂತದಲ್ಲಿ ಈ ಪ್ರಸ್ತಾಪಕ್ಕೆ ತಡೆ ತಂದಿದೆ.
ಈ ಹಿಂದೆಯೂ, ಪಾಕ್ ಮೂಲದ ಭಯೋತ್ಪಾದಕರನ್ನು ಪಟ್ಟಿಗೆ ಸೇರ್ಪಡೆ ಮಾಡುವ ಭಾರತದ ಪ್ರಯತ್ನಕ್ಕೆ ಚೀನಾ ಇದೇ ರೀತಿ ಅಡ್ಡಗಾಲು ಹಾಕುತ್ತಾ ಬಂದಿದೆ. ಆದರೆ, 2019ರ ಮೇ ತಿಂಗಳಲ್ಲಿ ಜೈಶ್ ಉಗ್ರ ಮಸೂದ್ ಅಜರ್ನನ್ನು ಘೋಷಿತ ಭಯೋತ್ಪಾದಕರ ಪಟ್ಟಿಗೆ ಸೇರ್ಪಡೆ ಮಾಡುವಲ್ಲಿ ಭಾರತ ಯಶಸ್ವಿಯಾಗಿತ್ತು.
ಭಾರತ ಕಿಡಿ:
ಭಯೋತ್ಪಾದನೆಯನ್ನು ಹತ್ತಿಕ್ಕುತ್ತೇವೆ ಎಂದು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೇಳಿಕೊಂಡು ಬರುತ್ತಿರುವ ಚೀನದ ನಿಜ ಬಣ್ಣವು ಈಗ ಜಗಜ್ಜಾಹೀರಾದಂತಾಗಿದೆ. ಆ ದೇಶದ ಇಬ್ಬಗೆಯ ನೀತಿಗೆ ಇದು ಸಾಕ್ಷಿ ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿವೆ. ಆದರೆ, ಚೀನಾವು ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದು, ಸೂಕ್ತ ಪ್ರಕ್ರಿಯೆಗಳು ಹಾಗೂ ನಿಯಮಗಳ ಅನ್ವಯವೇ ನಾವು ಮುಂದುವರಿದಿದ್ದೇವೆ ಎಂದಿದೆ.