Advertisement

ಭಾರತವು ಚೀನಾ ನೋಡಿ ಕಲಿಯಬೇಕು: ರಾಹುಲ್‌ 

12:30 AM Jan 26, 2019 | Team Udayavani |

ಭುವನೇಶ್ವರ: ಉದ್ಯೋಗಾವಕಾಶ ಸೃಷ್ಟಿಯ ವಿಚಾರದಲ್ಲಿ ಭಾರತವು ಚೀನಾವನ್ನು ನೋಡಿ ಕಲಿಯಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

Advertisement

ಒಡಿಶಾದ ಭುವನೇಶ್ವರದಲ್ಲಿ ಶುಕ್ರವಾರ ಸಂವಾದ ಕಾರ್ಯಕ್ರಮ ಹಾಗೂ ರ್ಯಾಲಿ ನಡೆಸಿದ ರಾಹುಲ್‌, “ಮೋದಿಯವರು ಮೇಕ್‌ ಇನ್‌ ಇಂಡಿಯಾ ಬಗ್ಗೆ ಮಾತನಾಡುತ್ತಾರೆ. ಆದರೆ ಫ‌ಲಿತಾಂಶ ವೇನು? ಚೀನಾದಲ್ಲಿ 24 ಗಂಟೆಗಳಲ್ಲಿ 15 ಸಾವಿರ ಉದ್ಯೋಗ ಸೃಷ್ಟಿಯಾಗುತ್ತದೆ. ಆದರೆ, ಭಾರತದಲ್ಲಿ ಇದೇ ಅವಧಿಯಲ್ಲಿ 450 ಉದ್ಯೋಗ ಮಾತ್ರ ಸೃಷ್ಟಿಯಾಗುತ್ತದೆ. ಭಾರತವು ಚೀನಾವನ್ನು ನೋಡಿ ಕಲಿಯಬೇಕಿದೆ. ಚೀನಾ ಹಾಕುವ ಸವಾಲುಗಳನ್ನು ಎದುರಿಸುವ ಶಕ್ತಿ ಭಾರತಕ್ಕೆ ಮಾತ್ರವೇ ಇರುವುದು’ ಎಂದು ಹೇಳಿದ್ದಾರೆ. ಇದೇ ವೇಳೆ, ಪ್ರಿಯಾಂಕಾ ಅವರ ಸಕ್ರಿಯ ರಾಜಕಾರಣ ಪ್ರವೇಶವು ನಿನ್ನೆ -ಮೊನ್ನೆ ಕೈಗೊಂಡ ದಿಢೀರ್‌ ನಿರ್ಧಾರವಲ್ಲ. ಮಕ್ಕಳು ದೊಡ್ಡವರಾದ ನಂತರ ಪಕ್ಷದಲ್ಲಿ ಸಕ್ರಿಯಳಾಗುತ್ತೇನೆ ಎಂದು ಪ್ರಿಯಾಂಕಾ ಈ ಹಿಂದೆಯೇ ಹೇಳಿದ್ದರು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ಗಾಂಧಿ ಹೇಳಿದ್ದಾರೆ. ಇದೇ ವೇಳೆ, ಬಿಜೆಪಿ ಸಂಸದ ವರುಣ್‌ ಗಾಂಧಿ ಅವರು ಕಾಂಗ್ರೆಸ್‌ಗೆ ಸೇರುತ್ತಾರೆಂಬ ವದಂತಿ ಬಗ್ಗೆ ತಮಗೆ ಮಾಹಿತಿಯಿಲ್ಲ ಎಂದಿದ್ದಾರೆ ರಾಹುಲ್‌. ಇದಕ್ಕೂ ಮುನ್ನ, ಭುವನೇಶ್ವರ ಏರ್‌ಪೋರ್ಟ್‌ನಲ್ಲಿ ಫೋಟೋ ಕ್ಲಿಕ್ಕಿಸುತ್ತಿದ್ದ ವೇಳೆ ಕೆಳಕ್ಕೆ ಬಿದ್ದ ಫೋಟೋಗ್ರಾಫ‌ರ್‌ ಅನ್ನು ರಾಹುಲ್‌ ಅವರೇ ಸ್ವತಃ ಓಡಿಬಂದು ಮೇಲೆತ್ತಿದ ವಿಡಿಯೋವೊಂದು ಈಗ ವೈರಲ್‌ ಆಗಿದೆ.

ಪ್ರಿಯಾಂಕಾಗೆ ಅವಹೇಳನ: ಈ ನಡುವೆ ಬಿಹಾರದ ಸಚಿವ, ಬಿಜೆಪಿ ನಾಯಕ ವಿನೋದ್‌ ನಾರಾಯಣ ಝಾ ಅವರು ಪ್ರಿಯಾಂಕಾ ಗಾಂಧಿ ಬಗ್ಗೆ ಅವಹೇಳನಕಾರಿ ಪದಪ್ರಯೋಗ ಮಾಡಿ ವಿವಾದ ಸೃಷ್ಟಿಸಿದ್ದಾರೆ. ಪ್ರಿಯಾಂಕಾಗಾ ಸೌಂದರ್ಯವೊಂದು ಬಿಟ್ಟರೆ, ಬೇರೆ ಯಾವ ಅರ್ಹತೆಯೂ ಇಲ್ಲ ಎಂದಿದ್ದಾರೆ.

ಕಾಂಗ್ರೆಸ್‌ಗೆ ಮಂಜು ವಾರಿಯರ್‌?
ತ್ರಿಶೂರ್‌:
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಮಲಯಾಳಂ ಖ್ಯಾತ ನಟಿ ಮಂಜು ವಾರಿಯರ್‌ ಅವರು ಕಾಂಗ್ರೆಸ್‌ ಸೇರ್ಪಡೆಯಾಗುವ ಸಾಧ್ಯತೆಯಿದೆ. ಈಗಾಗಲೇ ಅವರು ಕಾಂಗ್ರೆಸ್‌ ಸೇರುವ ಇಚ್ಛೆ ವ್ಯಕ್ತಪಡಿಸಿ, ಈ ಬಗ್ಗೆ ಹಿರಿಯ ನಾಯಕರೊಂದಿಗೆ ಮಾತುಕತೆಯನ್ನೂ ನಡೆಸಿದ್ದಾರೆ. ಆದರೆ, ಲೋಕಸಭೆ ಚುನಾವಣೆ ವೇಳೆ ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಕಡಿಮೆಯಿದೆ. ಆದರೆ, ಅವರನ್ನು ಸ್ಟಾರ್‌ ಪ್ರಚಾರಕರನ್ನಾಗಿ ನೇಮಕ ಮಾಡಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next