Advertisement
ಜಗತ್ತಿನ ಪ್ರಮುಖ ನಾಯಕರನ್ನು ಸಂಪರ್ಕಿಸಿರುವ ವಿದೇಶಾಂಗ ಇಲಾಖೆ, ಹೊಸ ಪೌರತ್ವ ಕಾಯ್ದೆ ಮತ್ತು ಪ್ರಸ್ತಾವಿತ ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತು ಸೂಕ್ತ ವಿವರಣೆಯನ್ನು ನೀಡಿದೆ. ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಎನ್ನುವುದು ಧರ್ಮದ ಕಾರಣಕ್ಕಾಗಿ ದೇಶದಿಂದ ಹೊರದಬ್ಬಲ್ಪಟ್ಟ ಅಲ್ಪಸಂಖ್ಯಾಕರಿಗೆ ಪೌರತ್ವ ನೀಡುವಂಥ ಕಾಯ್ದೆಯಾಗಿದೆ. ಇದರಿಂದ ಸಂವಿಧಾನದ ಆಶಯಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ.
Related Articles
Advertisement
ಪೊಲೀಸರ ಎಡವಟ್ಟು: ಉತ್ತರಪ್ರದೇಶದ ಫಿರೋಜಾಬಾದ್ ಪೊಲೀಸರಿಗೆ ಅತಿದೊಡ್ಡ ಮುಖಭಂಗವಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ಬಳಿಕ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಗೆ ಭಂಗ ತರುವವರ ಪಟ್ಟಿಯೊಂದನ್ನು ಪೊಲೀಸರು ಸಿದ್ಧಪಡಿಸಿದ್ದಾರೆ. ಆ ಪಟ್ಟಿಯಲ್ಲಿ 200 ಮಂದಿಯ ಹೆಸರಿದೆ.
ಅಚ್ಚರಿಯೆಂದರೆ, 6 ವರ್ಷಗಳ ಹಿಂದೆಯೇ ಮೃತಪಟ್ಟಿರುವ ವ್ಯಕ್ತಿ, ಅನಾರೋಗ್ಯಪೀಡಿತರಾಗಿ ಹಾಸಿಗೆ ಹಿಡಿದಿರುವ 93ರ ವೃದ್ಧ, 90 ವರ್ಷ ವಯಸ್ಸಿನ ಮತ್ತೂಬ್ಬ ಹಿರಿಯ ವ್ಯಕ್ತಿಯ ಹೆಸರುಗಳೂ ಈ ಪಟ್ಟಿಯಲ್ಲಿವೆ. ಇವರ ಮನೆಗಳಿಗೆ ನೋಟಿಸ್ ಹೋಗಿದ್ದು, 10 ಲಕ್ಷ ರೂ. ಬಾಂಡ್‌ಗೆ ಸಹಿ ಮಾಡುವಂತೆ, ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.
58 ಮಂದಿಗೆ ಜಾಮೀನು: ಸಿಎಎ ವಿರುದ್ಧ ಪ್ರತಿಭಟಿಸಿ ಬಂಧನಕ್ಕೊಳಗಾಗಿದ್ದ 58 ಮಂದಿಗೆ ಉತ್ತರಪ್ರದೇಶದ ಕೋರ್ಟ್ ಜಾಮೀನು ನೀಡಿದ್ದು, ಗುರುವಾರ ಅವರು ಬಿಡುಗಡೆಗೊಂಡಿದ್ದಾರೆ. ಈ ಪೈಕಿ ಎನ್‌ಜಿಒವೊಂದನ್ನು ನಡೆಸುತ್ತಿರುವ ಏಕ್ತಾ ಮತ್ತು ರವಿಶೇಖರ್ ದಂಪತಿಯೂ ಸೇರಿದ್ದು, ಇವರು ತಮ್ಮ 14 ತಿಂಗಳ ಕೂಸನ್ನು ಮತ್ತೆ ಸೇರಿದ್ದಾರೆ. ಹೆತ್ತವರ ಬಂಧನದಿಂದಾಗಿ ಕೂಸು ಏಕಾಂಗಿಯಾಗಿದ್ದರ ಕುರಿತು ಭಾರೀ ಸುದ್ದಿಯಾಗಿತ್ತು.
ಇಂದು ಟೋಲ್ ಫ್ರೀ ಸಂಖ್ಯೆಗೆ ಚಾಲನೆಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ದೇಶಾದ್ಯಂತ ಜ. 5ರಿಂದ ಜನಜಾಗೃತಿ ಅಭಿಯಾನ ಆರಂಭಿಸಲಿರುವ ಬಿಜೆಪಿ, ಅದರ ಭಾಗವಾಗಿ ಟೋಲ್ ಫ್ರೀ ಸಂಖ್ಯೆಯೊಂದನ್ನು ಪರಿಚಯಿಸಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶುಕ್ರವಾರ ಈ ಟೋಲ್ ಫ್ರೀ ಸಂಖ್ಯೆಗೆ ಚಾಲನೆ ನೀಡಲಿದ್ದಾರೆ. ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಸಾರ್ವಜನಿಕರು, ಪೌರತ್ವ ತಿದ್ದುಪಡಿ ಕಾಯ್ದೆಗೆ ತಮ್ಮ ಬೆಂಬಲ ಸೂಚಿಸಬಹುದಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಜೈನ್ ತಿಳಿಸಿದ್ದಾರೆ. ಮುಂದಿನ ರವಿವಾರ ಅಮಿತ್ ಶಾ ಅವರು ದಿಲ್ಲಿಯ ಕೆಲ ಮನೆಗಳಿಗೆ ಭೇಟಿ ನೀಡಿ, 10 ದಿನಗಳ ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ. ಕೇಂದ್ರ ಸಚಿವರಿಂದ ಹಿಡಿದು ಸಂಘಟನಾತ್ಮಕ ಮಟ್ಟದ ನಾಯಕರವರೆಗೆ ಎಲ್ಲರೂ ದೇಶದ ಮೂಲೆಮೂಲೆಗಳಿಗೆ ತೆರಳಿ ಜ.5ರಿಂದ 15ರವರೆಗೆ ಸಿಎಎ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಗೋವಾದಲ್ಲಿ ಕಾಂಗ್ರೆಸ್‌ಗೆ ಆಘಾತ
ಪೌರತ್ವ ಕಾಯ್ದೆ ವಿಚಾರಕ್ಕೆ ಸಂಬಂಧಿಸಿ ಗೋವಾದಲ್ಲಿ ಕಾಂಗ್ರೆಸ್‌ಗೆ ಮಹಾ ಆಘಾತ ಎದುರಾಗಿದೆ. ಕಾಯ್ದೆ ಕುರಿತ ಪಕ್ಷದ ನಿಲುವನ್ನು ಖಂಡಿಸಿ ನಾಲ್ವರು ಕಾಂಗ್ರೆಸ್ ನಾಯಕರು ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ. ಈ ಪೈಕಿ ಮೂವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಣಜಿ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಪ್ರಸಾದ್ ಅಮೋನ್ಕರ್, ಬ್ಲಾಕ್ ಸಮಿತಿ ಮಾಜಿ ಕಾರ್ಯದರ್ಶಿ ದಿನೇಶ್ ಕುಬಾಲ್, ಮಾಜಿ ಯುವ ನಾಯಕ ಶಿವರಾಜ್ ಟಾರ್ಕರ್, ಉತ್ತರ ಗೋವಾ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಜಾವೇದ್ ಶೇಖ್ ರಾಜೀನಾಮೆ ಸಲ್ಲಿಸಿದವರು. ಇವರಲ್ಲಿ ಅಮೋನ್ಕರ್, ಕುಬಾಲ್, ಟಾರ್ಕರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.