Advertisement

ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ ಭಾರತ.!

04:03 PM Sep 09, 2021 | Team Udayavani |

ಕೋವಿಡ್ ಕರಿಛಾಯೆಯ ನಡುವಿನಲ್ಲೂ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಕೂಟವನ್ನು ಜಪಾನ್ ದೇಶವು ಯಶಸ್ವಿಯಾಗಿ ನಡೆಸಿದೆ. ಎರಡೂ ಕೂಟವೂ ಭಾರತದ ಪಾಲಿಗೆ ಅವಿಸ್ಮರಣೀಯವಾಗಿರುವುದು ವಿಶೇಷ. ಒಲಿಂಪಿಕ್ಸ್ ನಲ್ಲಿ ಕೂಟದ ಇತಿಹಾಸದಲ್ಲೇ ಅತ್ಯಧಿಕ ಪದಕಗಳನ್ನು (7) ಗೆದ್ದ ಭಾರತದ ಕ್ರೀಡಾಪಟುಗಳು, ನಾವೂ ಏನೂ ಕಮ್ಮಿ ಇಲ್ಲ ಎಂದು ದೇಶದ ಪ್ಯಾರಾ ಅಥ್ಲಿಟ್‌ ಗಳು ತೋರಿಸಿಕೊಟ್ಟಿದ್ದಾರೆ.

Advertisement

ಛಲವೊಂದಿದ್ದರೆ ಏನ್ನನೂ ಸಾಧಿಸಲು ಸಾಧ್ಯ. ದೈಹಿಕ ದೌರ್ಬಲ್ಯ ಇದೆ ಎಂದ ಮಾತ್ರಕ್ಕೆ ಸಾಧನೆ ದೂರದ ಮಾತಲ್ಲ. ಇದನ್ನು ತೋರಿಸಿಕೊಟ್ಟವರೇ ಪ್ಯಾರಾ ಅಥ್ಲಿಟ್‌ ಗಳು. ಅದರಲ್ಲೂ ಭಾರತದ ಪ್ಯಾರಾ ಅಥ್ಲಿಟ್‌ ಗಳು ಈ ಬಾರಿಯ ಪ್ಯಾರಾಲಿಂಪಿಕ್ಸ್ ನಲ್ಲಿ ಹಲವಾರು ದಾಖಲೆಗಳನ್ನು ರಚಿಸಿದ್ದಾರೆ. ದೇಶ ಮಾತ್ರವಲ್ಲ, ಕೆಲವೊಂದು ವಿಶ್ವ ದಾಖಲೆಯಿಂದಾಗಿ, ಇಡೀ ಜಗತ್ತೇ ಭಾರತದ ಅಥ್ಲಿಟ್‌ ಗಳತ್ತ ನೋಡುವಂತೆ ಮಾಡಿದ್ದಾರೆ.

ಇದನ್ನೂ ಓದಿ :  ಟಿ20 ವಿಶ್ವಕಪ್ ಗೆ ಯುಜಿ ಚಾಹಲ್ ಆಯ್ಕೆ ಯಾಕಿಲ್ಲ: ಕಾರಣ ಹೇಳಿದ ಆಯ್ಕೆ ಸಮಿತಿ ಮುಖ್ಯಸ್ಥ

ದೃಷ್ಟಿ ದುರ್ಬಲತೆ, ದೈಹಿಕ ಹಾಗೂ ಮಾನಸಿಕ ನ್ಯೂನತೆ ಇರುವ ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸುವ ಸಲುವಾಗಿ 1960ರಲ್ಲಿ ಮೊದಲ ಪ್ಯಾರಾ ಒಲಿಂಪಿಕ್ಸ್ ಕೂಟವನ್ನು ಆಯೋಜಿಸಲಾಗಿತ್ತು. 1968ರಲ್ಲಿ ಮೊದಲ ಬಾರಿಗೆ ಭಾರತವು ಪ್ಯಾರಾಲಿಂಪಿಕ್ಸ್ ನಲ್ಲಿ ಭಾಗವಹಿಸಿತ್ತು. ಬಳಿಕ, 1976 ಹಾಗೂ 1980 ಹೊರತು ಪಡಿಸಿದರೆ, ಪ್ರತಿ ಬಾರಿಯೂ ಭಾರತದ ಕ್ರೀಡಾಪಟುಗಳು ಸ್ಪರ್ಧಿಸಿದ್ದರು. ಪ್ಯಾರಾಲಿಂಪಿಕ್ ಇತಿಹಾಸದಲ್ಲಿ, 2020 ರ ಹಿಂದಿನವರೆಗೆ, ಭಾರತದ ಕ್ರೀಡಾಪಟುಗಳು 12 ಪದಕಗಳನ್ನು ಗೆದ್ದಿದ್ದರು (ತಲಾ 4 ಚಿನ್ನ, ಬೆಳ್ಳಿ ಹಾಗೂ ಕಂಚು). ಆದರೆ, ಈ ಬಾರಿಯ ಕೂಟದಲ್ಲಿ ಭಾರತದ ಕ್ರೀಡಾಪಟುಗಳು ಒಟ್ಟು 19 ಪದಕಗಳನ್ನು (5 ಚಿನ್ನ, 8 ಬೆಳ್ಳಿ, 6 ಕಂಚು) ಗೆದ್ದು, ಇತಿಹಾಸದ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದ್ದಾರೆ.

ಈ ಹಾದಿಯಲ್ಲಿ ಇಬ್ಬರು ಕ್ರೀಡಾಪಟುಗಳು ವಿಶ್ವದಾಖಲೆಯನ್ನು ರಚಿಸಿದ್ದಾರೆ. ಅವನಿ ಲೇಖರ, 10 ಮೀ ಏರ್ ರೈಫಲ್ ಎಸ್‌ ಎಚ್ 1 ವಿಭಾಗದ ಫೈನಲ್‌ ನಲ್ಲಿ 249.6 ಅಂಕಗಳನ್ನು ಪಡೆದು ಪ್ಯಾರಾಲಿಂಪಿಕ್ ಕೂಟ ದಾಖಲೆಯೊದಿಗೆ, ವಿಶ್ವದಾಖಲೆಯನ್ನು ಸರಿಗಟ್ಟಿದರು. ಇವರೊಂದಿಗೆ, ಪುರುಷರ ಎಫ್ 64 ವಿಭಾಗದ ಜ್ಯಾವೆಲಿನ್ ಎಸೆತದಲ್ಲಿ ಭಾರತದ ಸುಮಿತ್ ಅಂತಿಲ್, 68.55 ಮೀ ದೂರ ಎಸೆದು, ವಿಶ್ವದಾಖಲೆ ರಚಿಸಿದರು. ವಿಶೇಷವೆಂದರೆ, 5 ಎಸೆತಗಳಲ್ಲಿ ಮೂರು ಬಾರಿ ವಿಶ್ವ ದಾಖಲೆಯನ್ನು ಮುರಿದು, ಇತಿಹಾಸ ಬರೆದರು.

Advertisement

ಟೋಕಿಯೋದಲ್ಲಿ ಇಬ್ಬರು ಮಾಜಿ ಚಾಂಪಿಯನ್‌ ಗಳಾಗಿ ಕಣಕ್ಕಿಳಿದಿದ್ದರು. ಜ್ಯಾವೆಲಿನ್ ಎಸೆತದಲ್ಲಿ ದೇವೇಂದ್ರ ಜಝಾರಿಯಾ ಮತ್ತು ಹೈಜಂಪ್‌ ನಲ್ಲಿ ಮರಿಯಪ್ಪನ್ ತಂಗವೇಲು. ಇಬ್ಬರೂ ಕ್ರೀಡಾಪಟುಗಳು, ಈ ಬಾರಿಯೂ ಪದಕ ಗೆದ್ದರೂ, ಚಿನ್ನವನ್ನು ಗೆಲ್ಲುವಲ್ಲಿ ವಿಫಲರಾದರು. ಇಬ್ಬರೂ ತಮ್ಮ ತಮ್ಮ ಕ್ರೀಡೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದರು.

ಈ ಬಾರಿಯ ಪ್ಯಾರಾಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ಸೇರ್ಪಡೆಗೊಂಡಿದ್ದು ಸಹ ಭಾರತೀಯ ಕ್ರೀಡಾಪಟುಗಳಿಗೆ ಬಂಪರ್ ಆಗಿತ್ತು. ಪ್ಯಾರಾ ಬ್ಯಾಡ್ಮಿಂಟನ್ ಕ್ರೀಡೆಯ ವಿವಿಧ ವಿಭಾಗದಲ್ಲಿ ಭಾರತೀಯ ಕ್ರೀಡಾಪಟುಗಳು 2 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆದ್ದು ಬೀಗಿದ್ದಾರೆ. ವಿಶೇಷವೆಂದರೆ, ಕನ್ನಡಿಗ, 2007ರ ಬ್ಯಾಚ್‌ನ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್, ಎಸ್‌ಎಲ್3 ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದು, ಸಾಧನೆಗೆ ಏನೂ ಅಡ್ಡಿಯಾಗಲ್ಲ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ :  ಸಾವಿಗೆದುರಾಗಿ ನಿಂತ ‘ಮರುಭೂಮಿಯ ಹೂ’ವಿನ ಘಮ…!

ಈ ಬಾರಿ, ಮೂರು ಕ್ರೀಡೆಯಲ್ಲಿ ಎರಡೆರಡು ಪದಕಗಳನ್ನು ಭಾರತ ಗೆದ್ದು ಬೀಗಿದೆ. ಜ್ಯಾವೆಲಿನ್ ಎಸೆತದ ಟಿ 63 ವಿಭಾಗದಲ್ಲಿ ದೇವೇಂದ್ರ ಜಝಾರಿಯಾ ಹಾಗೂ ಸುಂದರ್ ಸಿಂಗ್ ಗುರ್ಜರ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು, ಹೈಜಂಪ್ ಟಿ 63 ವಿಭಾಗದಲ್ಲಿ ಮರಿಯಪ್ಪನ್ ತಂಗವೇಲು ಹಾಗೂ ಶರದ್ ಕುಮಾರ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ, ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್‌ ಎಲ್ 3 ವಿಭಾಗದಲ್ಲಿ ಪ್ರಮೋದ್ ಭಗತ್ ಹಾಗೂ ಮನೋಜ್ ಸರ್ಕಾರ್ ಕ್ರಮವಾಗಿ ಚಿನ್ನ ಹಾಗೂ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದೇ ಮೊದಲ ಬಾರಿಗೆ, ಭಾರತದ ಕ್ರೀಡಾಪಟುಗಳು ಒಂದೇ ಕೂಟದಲ್ಲಿ ಒಂದಕ್ಕಿಂತ ಹೆಚ್ಚಿನ ಪದಕವನ್ನು ಗೆದ್ದಿದ್ದಾರೆ. ಅವನಿ ಲೇಖರಾ ಶೂಟಿಂಗ್ ಕ್ರೀಡೆಯ 10ಮೀ ಹಾಗೂ 50ಮೀ ಸ್ಟ್ಯಾಂಡಿಂಗ್ ಎಸ್‌ ಎಚ್ 1 ವಿಭಾಗದಲ್ಲಿ ಕ್ರಮವಾಗಿ ಚಿನ್ನ ಮತ್ತು ಕಂಚಿನ ಪದಕವನ್ನು ಗೆದ್ದು, ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪರ ಚಿನ್ನ ಹಾಗೂ 2 ಪದಕಗಳನ್ನು ಗೆದ್ದ ಮೊದಲ ಮಹಿಳಾ ಕ್ರೀಡಾಪಟು ಅನ್ನಿಸಿಕೊಂಡಿದ್ದಾರೆ. ಶೂಟಿಂಗ್ ಕ್ರೀಡೆಯ ಪುರುಷರ ಮಿಕ್ಸೆಡ್ 50 ಮೀ ಹಾಗೂ ಸಿಂಗಲ್ 10 ಮೀ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಗೆದ್ದಿದ್ದಾರೆ.

ಈ ಹಿಂದೆ ಭಾರತವು ಪ್ಯಾರಾಲಿಂಪಿಕ್ಸ್ ನಲ್ಲಿ ಗೆದ್ದ ಬಹುತೇಕ ಪದಕಗಳು ಅಥ್ಲೆಟಿಕ್ಸ್ ನಲ್ಲೇ ಬಂದಿದ್ದವು. ಆದರೆ, ಟೋಕಿಯೋದಲ್ಲಿ ಭಾರತವು ಬ್ಯಾಟ್ಮಿಂಟನ್, ಆರ್ಚರಿ, ಟೇಬಲ್ ಟೆನ್ನಿಸ್, ಶೂಟಿಂಗ್ ಕ್ರೀಡೆಯಲ್ಲಿ ತನ್ನ ಮೊಟ್ಟ ಮೊದಲ ಪ್ಯಾರಾಲಿಂಪಿಕ್ಸ್ ಪದಕವನ್ನು ಗೆದ್ದಿದೆ.

2016 ರ ರಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತವು ಒಟ್ಟು 19 ಕ್ರೀಡಾಪಟುಗಳು ಸ್ಪರ್ಧಿಸಿದ್ದರು. ಈ ಬಾರಿ, ಭಾರತ ಗೆದ್ದ ಪದಕಗಳ ಸಂಖ್ಯೆಯೇ 19..! ಭಾಗವಹಿಸಿದ 54 ಪ್ಯಾರಾ ಕ್ರೀಡಾಪಟುಗಳ ಪೈಕಿ, 17 ಮಂದಿ 19 ಪದಕಗಳನ್ನು ಗೆದ್ದು, ಹೊಸ ಭಾಷ್ಯವನ್ನು ಬರೆದಿದ್ದಾರೆ. ಭಾರತ ಕೇವಲ ಕ್ರಿಕೆಟ್ ಆಡುವ ದೇಶವಲ್ಲ ಎಂಬ ಸಂದೇಶವನ್ನು ಸ್ಪಷ್ಟವಾಗಿ ಸಾರಿದ್ದಾರೆ. ಇದೇ ರೀತಿ, ಮುಂದೆ ನಡೆಯುವ ಅನೇಕ ಅಂತಾರಾಷ್ಟೀಯ ಕ್ರೀಡೆಗಳಲ್ಲಿ ಭಾರತದ ಕ್ರೀಡಾಪಟುಗಳು ಮಿಂಚುತ್ತಿರಲಿ ಎಂಬುವುದೇ ನಮ್ಮ ಆಶಯ..!

-ಇಂದುಧರ ಹಳೆಯಂಗಡಿ

ಇದನ್ನೂ ಓದಿ : ಪಟ್ಟದ ಲೆಕ್ಕಾಚಾರ; ಯಾರಾಗುತ್ತಾರೆ ಹುಬ್ಬಳ್ಳಿ-ಧಾರವಾಡ ಮಹಾಪೌರ?  

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next