ನವದೆಹಲಿ/ಮಾಸ್ಕೋ: ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡುವುದನ್ನು ಮುಂದುವರಿಸಲಿದೆ. ಈ ನಿಟ್ಟಿನಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ರಷ್ಯಾ ಪ್ರವಾಸದಲ್ಲಿ ಇರುವ ಅವರು ಅಲ್ಲಿನ ವಿದೇಶಾಂಗ ಸಚಿವ ಸಗೇì ಲಾವೋ ಜತೆಗೆ ಉಕ್ರೇನ್ ಯುದ್ಧ ವಿಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ದೇಶದ ತೈಲ ಗ್ರಾಹಕರಿಗೆ ಅತ್ಯುತ್ತಮವಾದುದನ್ನು ಒದಗಿಸುವುದು ಕೇಂದ್ರ ಸರ್ಕಾರದ ಮೂಲಭೂತ ಹೊಣೆ. ಹೀಗಾಗಿ, ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಉಂಟಾಗಿರುವ ಪ್ರತಿಕೂಲ ಪರಿಣಾಮವನ್ನು ನಮ್ಮ ದೇಶದ ಗ್ರಾಹಕರ ಅನುಕೂಲಕ್ಕಾಗಿ ಸದ್ಬಳಕೆ ಮಾಡುವುದು ತಪ್ಪೇನು ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಪ್ರಶ್ನೆ ಮಾಡಿದ್ದಾರೆ.
ರಷ್ಯಾದಿಂದ ಕಚ್ಚಾ ತೈಲ ಖರೀದಿ ಮಾಡಬಾರದು ಎಂಬುದರ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳ ಒತ್ತಡವಿದೆಯೇ ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ. ಹಾಗೆಯೇ ಸದ್ಯದ ಕಾಲಸ್ಥಿತಿ ಯುದ್ಧ ಮಾಡುವಂಥದ್ದಲ್ಲ ಎಂದು ರಷ್ಯಾಗೂ ಕಿವಿಮಾತು ಹೇಳಿದ್ದಾರೆ.