ಹೊಸದಿಲ್ಲಿ: ಪ್ರತಿ ವರ್ಷದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯೂ ದೀಪಾವಳಿ ಹಬ್ಬವನ್ನು ಯೋಧರೊಂದಿಗೆ ಆಚರಿಸುತ್ತಿದ್ದಾರೆ. ಈ ಬಾರಿ ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ನರೇಂದ್ರ ಮೋದಿ ಅವರು ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದಾರೆ.
ಅಲ್ಲಿನ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನಮ್ಮ ಸೇನೆಯು ತನ್ನ ಗಡಿಯಲ್ಲಿ ಹಿಮಾಲಯದಂತೆ ಅಚಲವಾಗಿ ನಿಂತಿರುವವರೆಗೂ ಭಾರತ ಸುರಕ್ಷಿತವಾಗಿದೆ” ಎಂದು ಹೇಳಿದರು.
ಪ್ರಪಂಚದಾದ್ಯಂತದ ಘರ್ಷಣೆಗಳ ನಡುವೆ ಗಡಿಗಳನ್ನು ಭದ್ರಪಡಿಸುವಲ್ಲಿ ಸೇನೆಯ ಪಾತ್ರವನ್ನು ಪ್ರಧಾನಿ ಶ್ಲಾಘಿಸಿದರು. “ಪ್ರಪಂಚದ ಪರಿಸ್ಥಿತಿಯನ್ನು ಗಮನಿಸಿದರೆ, ಭಾರತದಿಂದ ನಿರೀಕ್ಷೆಗಳು ನಿರಂತರವಾಗಿ ಹೆಚ್ಚುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ಗಡಿಗಳು ಸುರಕ್ಷಿತವಾಗಿರುವುದು ಮುಖ್ಯ. ನಾವು ದೇಶದಲ್ಲಿ ಶಾಂತಿಯ ವಾತಾವರಣವನ್ನು ನಿರ್ಮಿಸುತ್ತಿದ್ದೇವೆ ಮತ್ತು ಇದರಲ್ಲಿ ನಿಮ್ಮ ಪಾತ್ರ ದೊಡ್ಡದಾಗಿದೆ” ಎಂದು ಅವರು ಸೈನಿಕರಿಗೆ ಹೇಳಿದರು.
ಭಾರತದ ಸೇನೆ ಮತ್ತು ಭದ್ರತಾ ಪಡೆಗಳು ರಾಷ್ಟ್ರ ನಿರ್ಮಾಣಕ್ಕೆ ನಿರಂತರವಾಗಿ ಕೊಡುಗೆ ನೀಡಿವೆ ಎಂದು ಅವರು ಹೇಳಿದರು.
ಸೇನಾ ಯೋಧರೊಂದಿಗೆ ದೀಪಾವಳಿ ಆಚರಿಸುವ ತಮ್ಮ ಸಂಪ್ರದಾಯದ ಬಗ್ಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಕಳೆದ 30 ರಿಂದ 35 ವರ್ಷಗಳಿಂದ ದೀಪಾವಳಿಯನ್ನು ಆಚರಿಸುತ್ತಾ ಬಂದಿದ್ದೇನೆ. ಗುಜರಾತ್ ನ ಮುಖ್ಯಮಂತ್ರಿಯಾಗುವ ಅಥವಾ ಪ್ರಧಾನಿಯಾಗುವುದಕ್ಕಿಂತ ಮುಂಚೆಯೇ ಇದನ್ನು ಆಚರಿಸಿಕೊಂಡು ಬಂದಿರುವ ಸಂಪ್ರದಾಯ ಹೊಂದಿದ್ದೇನೆ ಎಂದು ಹೇಳಿದರು.
ಅವರಿಗೆ ಭದ್ರತಾ ಪಡೆಗಳನ್ನು ನಿಯೋಜಿಸುವ ಸ್ಥಳವು ದೇವಾಲಯಕ್ಕಿಂತ ಕಡಿಮೆಯಿಲ್ಲ ಎಂದು ಮೋದಿ ಹೇಳಿದರು.
ದೀಪಾವಳಿ ಹಬ್ಬದಲ್ಲಿ ಕುಟುಂಬದಿಂದ ದೂರವಿರುವ ಸೈನಿಕರನ್ನು ಶ್ಲಾಘಿಸಿದ ಅವರು, “ಕುಟುಂಬ ಇರುವಲ್ಲಿ ಮಾತ್ರ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ, ಆದರೆ ಇಂದು ನೀವು ಕುಟುಂಬದಿಂದ ದೂರವಿದ್ದು ಗಡಿಯಲ್ಲಿ ಠಿಕಾಣಿ ಹೂಡಿದ್ದೀರಿ. ಇದು ಕರ್ತವ್ಯದ ಮೇಲಿನ ನಿಮ್ಮ ಭಕ್ತಿಯ ಪರಾಕಾಷ್ಠೆಯನ್ನು ತೋರಿಸುತ್ತದೆ” ಎಂದರು.