Advertisement

ಟ್ರಯಂಫ್ ಖರೀದಿ ಒಪ್ಪಂದ: ಭಾರತದ ದಿಟ್ಟ ನಡೆ 

06:00 AM Oct 08, 2018 | |

ರಷ್ಯಾದಿಂದ ಅತ್ಯಾಧುನಿಕ ಕ್ಷಿಪಣಿ ಛೇದಕ ವ್ಯವಸ್ಥೆ ಟ್ರಯಂಫ್-400 ಖರೀದಿಸುವ ಒಪ್ಪಂದ ಮಾಡಿಕೊಂಡಿರುವುದು ಕೇಂದ್ರದ ಪ್ರಬುದ್ಧ ರಾಜತಾಂತ್ರಿಕ ನಡೆ ಎನ್ನಬಹುದು. ಅ.4 ಮತ್ತು 5ರಂದು ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಬಂದಿದ್ದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಜತೆಗೆ ಮೂರು ಶಸ್ತ್ರಾಸ್ತ್ರ ಪೂರೈಕೆ ಒಪ್ಪಂದ ಸೇರಿದಂತೆ ಒಟ್ಟು 10 ಬಿಲಿಯನ್‌ ಡಾಲರ್‌ಗಳ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ. ಈ ಪೈಕಿ ಟ್ರಯಂಫ್ ಖರೀದಿ ಅತ್ಯಂತ ಮಹತ್ವದ್ದು. ಅತ್ಯಾಧುನಿಕವಾಗಿರುವ ಟ್ರಯಂಫ್ ವಾಯುಪಡೆಯ ಬಲವರ್ಧನೆಗೆ ಬಹಳ ಅಗತ್ಯವಾಗಿತ್ತು. ನೆರೆ ರಾಷ್ಟ್ರವಾದ ಚೀನಾದ ಸೇನಾಪಡೆಗೆ ಈಗಾಗಲೇ ಟ್ರಯಂಫ್ ಸೇರ್ಪಡೆ ಪ್ರಕ್ರಿಯೆ ಪ್ರಾರಂಭವಾಗಿದೆ. ಇನ್ನೂ ಕೆಲವು ರಾಷ್ಟ್ರಗಳು ಟ್ರಯಂಫ್ ಖರೀದಿಗೆ ಮುಂದಾಗಿವೆ. 380 ಕಿ. ಮೀ. ದೂರದಿಂದಲೇ ಶತ್ರು ಕ್ಷಿಪಣಿಯನ್ನು ಗುರುತಿಸಿ ನಾಶ ಮಾಡುವ ಸಾಮರ್ಥ್ಯ ಹೊಂದಿರೊವುದೊಂದೇ ಟ್ರಯಂಫ್ ವೈಶಿಷ್ಟ್ಯವಲ್ಲ. 

Advertisement

ಏಕಕಾಲದಲ್ಲಿ 72 ಕ್ಷಿಪಣಿಗಳನ್ನು ಉಡಾವಣೆ ಮಾಡುವುದು ಮತ್ತು 36 ಗುರಿಗಳನ್ನು ನಾಶ ಮಾಡುವ ಸಾಮರ್ಥ್ಯ ಇದಕ್ಕಿರುವುದರಿಂದಲೇ ಈ ಅಸ್ತ್ರಕ್ಕೆ ಭಾರೀ ಬೇಡಿಕೆ. ನೆರೆಯ ದೇಶದಲ್ಲಿ ಇಂಥ ಒಂದು ಬಲಶಾಲಿ ಅಸ್ತ್ರ ಇರುವಾಗ ಅದಕ್ಕೆ ಸರಿಸಮಾನವಾದ ಅಸ್ತ್ರವನ್ನು ನಾವು ಹೊಂದಿರುವುದು ತೀರಾ ಅಗತ್ಯವಾಗಿತ್ತು.  ಇತ್ತೀಚೆಗಿನ ದಿನಗಳಲ್ಲಿ ಉಳಿದ ದೇಶಗಳ ವಿದೇಶಾಂಗ ನೀತಿಯಲ್ಲಿ ಅಗತ್ಯಕ್ಕಿಂತ ಹೆಚ್ಚೇ ಮೂಗುತೂರಿಸುತ್ತಿರುವ ಅಮೆರಿಕದ ಎಚ್ಚರಿಕೆಯಿಂದಾಗಿ ಟ್ರಯಂಫ್ ಖರೀದಿ ಬಗ್ಗೆ ಅನಿಶ್ಚಿತತೆ ಇತ್ತು. ಅಂತರಾಷ್ಟ್ರೀಯವಾಗಿ ರಷ್ಯಾವನ್ನು ಒಂಟಿಯಾಗಿಸಬೇಕೆಂಬ ಉದ್ದೇಶದಿಂದ ಆ ದೇಶದ ಜತೆಗೆ ಯಾವುದೇ ಖರೀದಿ ಒಪ್ಪಂದ ಮಾಡಿಕೊಳ್ಳಬಾರದು ಎಂದು ಭಾರತಕ್ಕೆ ಅಮೆರಿಕ ತೀಕ್ಷ್ಣ ಎಚ್ಚರಿಕೆ ನೀಡಿತ್ತು. ಒಂದು ವೇಳೆ ಒಪ್ಪಂದ ಏರ್ಪಟ್ಟದ್ದೇ ಆದರೆ ವಿರೋಧಿಗಳ ವಿರುದ್ಧ ಪ್ರಯೋಗಿಸುವ ನಿಷೇಧಗಳ ಕಾಯಿದೆಯನ್ವಯ ಆರ್ಥಿಕ ನಿಷೇಧ ಹೇರುವ ಬೆದರಿಕೆಯನ್ನೂ ಹಾಕಿತ್ತು. ಆದರೆ ಈ ಬೆದರಿಕೆಗೆ ಸೊಪ್ಪು ಹಾಕದೆ ಕೇಂದ್ರ ಟ್ರಯಂಫ್ ಖರೀದಿ ಮಾಡಿಕೊಳ್ಳುವ ಮೂಲಕ ತನ್ನ ಸಾರ್ವಭೌಮ ಹಕ್ಕಿನಲ್ಲಿ ಬೇರೆ ದೇಶಗಳ ಹಸ್ತಕ್ಷೇಪ ಮಾಡುವುದಕ್ಕೆ ಅವಕಾಶ ಕೊಡುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದೆ. 

ಈ ಸಂದೇಶ ಅಮೆರಿಕಕ್ಕೆ ಅರ್ಥವಾಗಿದೆ ಎನ್ನುವುದಕ್ಕೆ ಆ ದೇಶದ ರಾಯಭಾರಿ ಒಪ್ಪಂದದ ಬಳಿಕ ನೀಡಿರುವ ಪ್ರತಿಕ್ರಿಯೆಯೇ ಸಾಕ್ಷಿ. ನಿಷೇಧ ಕಾಯಿದೆಯಿಂದ ನಮ್ಮ ಮಿತ್ರರ ಮತ್ತು ಪಾಲುದಾರರ ಸೇನಾ ಸಾಮರ್ಥ್ಯಕ್ಕೆ ಹಾನಿ ಮಾಡುವ ಉದ್ದೇಶ ನಮಗಿಲ್ಲ ಎಂದು ಬಹಳ ಸಂಯಮದ ಪ್ರತಿಕ್ರಿಯೆ ನೀಡಿದೆ ಅಮೆರಿಕದ ದೂತವಾಸ. ಅರ್ಥಾತ್‌ ಭಾರತದ ವಿರುದ್ಧ ಆರ್ಥಿಕ ನಿಷೇಧದಂಥ ಕಠಿನ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂಬುದನ್ನು ಅಮೆರಿಕ ಪರೋಕ್ಷವಾಗಿ ಹೇಳಿದಂತಾಗಿದೆ. ಅಗತ್ಯಬಿದ್ದರೆ  ಬಲಾಡ್ಯ ದೇಶವನ್ನು ಎದುರು ಹಾಕಿಕೊಳ್ಳಲು ಹಿಂಜರಿಯುವುದಿಲ್ಲ ಎನ್ನುವುದನ್ನು ಈ ಒಪ್ಪಂದದ ಮೂಲಕ ಭಾರತ ತೋರಿಸಿಕೊಟ್ಟಿದೆ. 

ಹಾಗೇ ನೋಡಿದರೆ ಒಂದು ಕಾಲದಲ್ಲಿ ಅಮೆರಿಕಕ್ಕಿಂತಲೂ ರಷ್ಯಾವೇ ಭಾರತಕ್ಕೆ ಆಪ್ತ ರಾಷ್ಟ್ರವಾಗಿತ್ತು. ಆದರೆ ಜಾಗತಿಕ ರಾಜಕೀಯದಲ್ಲಾದ ಪಲ್ಲಟಗಳಿಂದ ಅಮೆರಿಕದ ಜತೆಗಿನ ಸಂಬಂಧ ಹೆಚ್ಚು ನಿಕಟವಾಗಿತ್ತು. ಹಾಗೆಂದು ರಷ್ಯಾವನ್ನು ಕಡೆಗಣಿಸಿರಲಿಲ್ಲ. ಆದರೆ ಇದೇ ವೇಳೆ ಚೀನಾದ ಜತೆಗಿನ ರಷ್ಯಾದ ಸಂಬಂಧ ನಿಕಟವಾಯಿತು. ಇದು ಭಾರತದ ಪಾಲಿಗೆ ತುಸು ಕಳವಳಕಾರಿ ವಿಷಯವಾಗಿತ್ತು. ಆದೇ ವೇಳೆ ತಾಲಿಬಾನ್‌ಗೆ ಸಂಬಂಧಿಸಿದಂತೆ ರಷ್ಯಾ ಹೊಂದಿದ್ದ ಮೃದು ಧೋರಣೆಗೂ ಭಾರತದ ಆಕ್ಷೇಪ ಇತ್ತು. ಈ ಹಿನ್ನೆಲೆಯಲ್ಲಿ ಬಹುಕಾಲದ ಮಿತ್ರ ದೇಶವಾಗಿರುವ ರಶ್ಯಾ ಎಲ್ಲಿ ದೂರವಾಗುತ್ತದೋ ಎನ್ನುವ ಆತಂಕ ತಲೆದೋರಿತ್ತು. ಆದರೆ ದಿಲ್ಲಿಯಲ್ಲಿ ಎರಡು ದಿನ ನಡೆದಿರುವ ದ್ವಿಪಕ್ಷೀಯ ಶೃಂಗ ಈ ಆತಂಕವನ್ನು ದೂರ ಮಾಡಿದೆ. 

ಪಾಶ್ಚಾತ್ಯ ದೇಶಗಳ ನಿಷೇಧ, ಕುಂಠಿತಗೊಂಡಿರುವ ಅಭಿವೃದ್ಧಿ ಇತ್ಯಾದಿ ಕಾರಣಗಳಿಂದಾಗಿ ರಷ್ಯಾದ ಆರ್ಥಿಕತೆಯೂ ಪ್ರಸ್ತುತ ಕುಂಟುತ್ತಿದ್ದು, ಈ ಸಂದರ್ಭದಲ್ಲಿ ಅಭಿವೃದ್ಧಿಯ ನಾಗಾಲೋಟದಲ್ಲಿರುವ ಭಾರತದ ಜತೆಗೆ ವ್ಯೂಹಾತ್ಮಕ ಪಾಲುದಾರಿಕೆ ಅದಕ್ಕೂ ಲಾಭದಾಯಕವಾಗಲಿದೆ. ಸಿರಿಯಾ ಕುರಿತಾದ ಧೋರಣೆ, ಯುರೋಪ್‌ ದೇಶಗಳ ಚುನಾವಣೆಯಲ್ಲಿ ಮೂಗುತೂರಿಸಿದಂಥ ಆರೋಪಗಳಿಂದಾಗಿ ಪುಟಿನ್‌ ಕೂಡಾ ಜಾಗತಿಕವಾಗಿ ಒಂಟಿಯಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಗೂ ಭಾರತದ ಸ್ನೇಹದ ಅಗತ್ಯವಿತ್ತು. ಈ ಒಂದು ಭೇಟಿಯಿಂದ ಈ ಉದ್ದೇಶವನ್ನೂ ಅವರು ಈಡೇರಿಸಿಕೊಂಡಿದ್ದಾರೆ. ಹೀಗೆ ಈ ದ್ವಿಪಕ್ಷೀಯ ಸಂಬಂಧ ವರ್ಧನೆ ಉಪಕ್ರಮದಿಂದ ಎರಡೂ ದೇಶಗಳಿಗೆ ಹಲವು ರೀತಿಯ ಲಾಭಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next