Advertisement

ಅಹಿಂಸಾ ತತ್ವಕ್ಕೆ ಭಾರತ ತವರು; ವೆಂಕಯ್ಯ ನಾಯ್ಡು ಅಭಿಮತ

06:00 AM Feb 11, 2018 | |

ಹಾಸನ: ಧರ್ಮಾಚರಣೆ ಭಾರತೀಯರ ಜೀವನ ಪದ್ದತಿಯಾಗಿದ್ದು, ವಿಶ್ವದಲ್ಲಿ ಭಾರತ ಅಧ್ಯಾತ್ಮಿಕ ರಾಜಧಾನಿಯಾಗಿ ಗುರುತಿಸಿಕೊಂಡಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಅಭಿಪ್ರಾಯಪಟ್ಟರು.

Advertisement

ಶ್ರವಣಬೆಳಗೊಳದ ಪಂಚಕಲ್ಯಾಣ ನಗರದ ಚಾವುಂಡರಾಯ ಮಂಟಪದಲ್ಲಿ ನಡೆದ ಪ್ರಥಮ ತೀರ್ಥಂಕರ ಆದಿನಾಥರ ಪಂಚಕಲ್ಯಾಣ ಕಾರ್ಯಕ್ರಮದ ಮೂರನೇ ದಿನ ಪಟ್ಟಾಭಿಷೇಕ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತದ ಮೇಲೆ ಡಚ್ಚರು, ಫ್ರೆಂಚರು, ಇಂಗ್ಲಿಷರು ದಾಳಿ ಮಾಡಿ ಸಂಪತ್ತು ದೋಚಿದರು. ಆದರೆ ಇದುವರೆಗೂ ಭಾರತ ಯಾವುದೇ ದೇಶದ ಮೇಲೆ ದಾಳಿ ಮಾಡಿಲ್ಲ. ಇದಕ್ಕೆ ಕಾರಣ ನಮ್ಮ ಗುರು- ಹಿರಿಯರು, ಸಾಧು – ಸಂತರು ನೀಡಿದ ಸಂದೇಶಗಳಿಂದ ಭಾರತ ಆಧ್ಯಾತ್ಮಿಕ ತಳಹದಿಯ ಸಂಸ್ಕೃತಿಯನ್ನು ರೂಪಿಸಿಕೊಂಡಿದೆ ಎಂದು ಹೇಳಿದರು.

ನಮ್ಮ ಪೂರ್ವಿಕರು, ಮಹಾಪುರುಷರು ಎಂದೂ ಸಂಘರ್ಷದ ಬದುಕನ್ನು ಪ್ರತಿಪಾದಿಸಿದವರಲ್ಲ. ಬೇರೊಬ್ಬರ ಮೇಲೆ ದಾಳಿ ಮಾಡುವ ಸಂದೇಶ ನೀಡಿದವರಲ್ಲ. ಹಾಗಾಗಿ ಧರ್ಮ, ಸಂಸ್ಕೃತಿ, ಪರಂಪರೆಯನ್ನು ಅನುಸರಿಸಿಕೊಂಡು ಅಹಿಂಸೆ, ಶಾಂತಿಯ ಸಂದೇಶಗಳನ್ನು ಭಾರತ ಅನುಸರಿಸುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮಗಾಂಧಿಯವರು ಕೂಡ ಅಹಿಂಸಾ ತತ್ವವನ್ನು ಅನುಸರಿಸಿದರು. ಹಾಗಾಗಿ ಭಾರತವು ಅಹಿಂಸೆ,ಶಾಂತಿ ಪ್ರತಿಪಾದಿಸುವ ವಿಶ್ವದ ಸಾಂಸ್ಕೃತಿಕ ರಾಜಧಾನಿ ಎಂಬ ಹೆಗ್ಗಳಿಕೆ ಪಡೆದಿದೆ. ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ ಎಂದರು.

ವಿಶ್ವದಲ್ಲಿ ಈಜಿಪ್ಟ್, ಬ್ಯಾಬಿಲೋನಿಯಾ ಮತ್ತಿತರ ದೇಶಗಳಲ್ಲಿ ಪ್ರಾಚೀನ ಸಂಸ್ಕೃತಿಯನ್ನು  ಉಲ್ಲೇಖೀಸುವಾಗಲೂ ಭಾರತದ ಸಂಸ್ಕೃತಿಯ ಹಿರಿಮೆ ಹೆಚ್ಚು. ಭಾರತ ಎಂದೂ ಕಿತ್ತು ತಿನ್ನುವ ಸಂಸ್ಕೃತಿಯನ್ನು ಅನುಸರಿಸಿಲ್ಲ. ಭಾರತದ್ದು ಹಂಚಿಕೊಳ್ಳುವ ಸಂಸ್ಕೃತಿ. ಇರುವುದನ್ನು ಹಂಚಿ ತಿನ್ನುವುದು ಧರ್ಮ. ಹಾಗಾಗಿ ನಮ್ಮ ಅನ್ನವನ್ನು  ನಾವು ತಿನ್ನುವುದು ಪ್ರಕೃತಿ, ಬೇರೊಬ್ಬರ ಅನ್ನವನ್ನು ಕಿತ್ತು ತಿನ್ನುವುದು ವಿಕೃತಿ, ನಮ್ಮಲ್ಲಿರುವುದನ್ನು  ಇಲ್ಲದವರಿಗೆ ಹಂಚುವುದು ಸಂಸ್ಕೃತಿ. ಇಂತಹ ಪರಂಪರೆಯನ್ನು ಹೊಂದಿರುವ ಭಾರತದ ಇಂದಿನ ಯುವ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೆ ಭಾರತದ ಸಂಸ್ಕೃತಿಯನ್ನು ಅನುಸರಿಸುಬೇಕು ಎಂದು ಕಿವಿಮಾತು ಹೇಳಿದರು.

ಶ್ರವಣಬೆಳಗೊಳದಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ದೇಶದ ವಿವಿಧೆಡೆಯಿಂದ ಜೈನ ಮುನಿಗಳು, ಮಾತೆಯರು ಸಾವಿರಾರು ಕಿ.ಮೀ. ಪಾದಯಾತ್ರೆಯಲ್ಲಿ  ಶ್ರವಣಬೆಳಗೊಳಕ್ಕೆ ಆಗಮಿಸಿ ಶಾಂತಿಯ ಸಂದೇಶ ನೀಡುತ್ತಿದ್ದಾರೆ. ಇಂತಹ ಮಹೋತ್ಸವದಲ್ಲಿ ಪಾಲ್ಗೊಳ್ಳುವುದು ಜೀವನವನ್ನು ಪಾವನಗೊಳಿಸಿಕೊಳ್ಳುವ ಸಂದರ್ಭವಾಗಿದೆ. ಅಹಿಂಸೆ ಸಾರ್ವಕಾಲಿಕ ಸಂದೇಶ. ಸಂಯುಕ್‌ ಜ್ಞಾನ, ಸಂಯುಕ್‌ ದರ್ಶನ, ಸಂಯುಕ್‌ ಆಚರಣೆ ಈ ಮೂರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮಹತ್ವದ ಸಂದೇಶಗಳಾಗಿವೆ ಎಂದರು.

Advertisement

ಕರ್ನಾಟಕವು ಸಾಂಸ್ಕೃತಿಕ ಶ್ರೀಮಂತಿಕೆ, ಐತಿಹಾಸಿಕ ಪರಂಪರೆಯನ್ನು ಹೊಂದಿದ ರಾಜ್ಯ. ಶ್ರವಣಬೆಳಗೊಳವು ಅದರ ಪ್ರತೀಕವಾಗಿದೆ. ಶ್ರವಣಬೆಳ ಗೊಳದಲ್ಲಿ ನೆಲೆ ನಿಂತಿರುವ ಬಾಹುಬಲಿ ಸ್ವಾಮಿಯ ಸಂದೇಶವು ಜಗತ್ತಿಗೆ ಎಂದೆಂದಿಗೂ ಪ್ರಸ್ತುವಾಗಿರುತ್ತದೆ ಎಂದು ಅವರು ಹೇಳಿದರು.

ಕನ್ನಡದ ಪ್ರೀತಿ ಮೆರೆದ ಉಪ ರಾಷ್ಟ್ರಪತಿ
ಕನ್ನಡದಲ್ಲಿಯೇ ಭಾಷಣ ಆರಂಭಿಸಿ ಕೆಲ ನಿಮಿಷ ಮಾತನಾಡಿದ ಎಂ.ವೆಂಕಯ್ಯ ನಾಯ್ಡು ಅವರು, ನನಗೆ ಕನ್ನಡ ಚನ್ನಾಗಿ ಅರ್ಥವಾಗುತ್ತದೆ. ಆದರೆ ಸುಲಲಿತವಾಗಿ ಮಾತನಾಡಲು ಬರುವುದಿಲ್ಲ.  ಕರ್ನಾಟಕದೊಂದಿಗೆ ತಾವು ಎರಡು ದಶಕಳಿಂದಲೂ ಅವಿನಾಭಾವ ಸಂಬಂಧ ಹೊಂದಿದ್ದೇನೆ. ಕರ್ನಾಟಕದ ಜನರೆಂದರೆ ನನಗೆ ಪ್ರೀತಿ ಎಂದ ವೆಂಕಯ್ಯನಾಯ್ಡು ಅವರು ಕರ್ನಾಟಕವು ಸಾಂಸ್ಕೃತಿಕ ಶ್ರೀಮಂತ ರಾಜ್ಯ ಎಂದು ಬಣ್ಣಿಸಿದರು.

ನಾನು ಈಗ ರಾಜಕೀಯದಿಂದ ನಿವೃತ್ತನಾಗಿದ್ದೇನೆ. ಆದರೆ ಸಾರ್ವಜನಿಕ ಜೀವನದಿಂದ ದೂರವಾಗಿಲ್ಲ ಎಂದು ಸ್ಪ$ಷ್ಟಪಡಿಸಿದ ಅವರು, ಶ್ರವಣಬೆಳಗೊಳಕ್ಕೆ ನಾನು ಹಲವು ಬಾರಿ ಬಂದಿದ್ದೇನೆ. ಮಹಾಮಸ್ತಕಾಭಿಷೇಕದ ಸಮಾರಂಭಗಳಲ್ಲೂ  ಕುಟುಂಬ ಸಮೇತ ಪಾಲ್ಗೊಂಡಿದ್ಧೇನೆ. ಉಪರಾಷ್ಟ್ರಪತಿಯಂತಹ ಉನ್ನತ ಹುದ್ದೆಯಲ್ಲಿರುವಾಗ ಇಂತಹ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷ ತಂದಿದೆ ಎಂದರು.

ಜೈನಮುನಿ ಶ್ರೀ ಪುಷ್ಪದಂತ ಸಾಗರ ಮಹಾರಾಜರು ಹಾಗೂ ಶ್ರವಣಬೆಳಗೊಳ ಜೈನ ಮಠದ ಪೀಠಾಧ್ಯಕ್ಷ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಕೇಂದ್ರ ಸಚಿವ ಅನಂತ್‌ಕುಮಾರ್‌, ಮುಜರಾಯಿ ಸಚಿವ ರಾಮಪ್ಪ ಲಮಾಣಿ, ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next