ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1.65 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 3,460 ಮಂದಿ ಕೋವಿಡ್ ಕಾರಣದಿಂದ ಪ್ರಾಣ ತ್ಯಜಿಸಿದ್ದಾರೆ. ಕಳೆದ 6 ವಾರಗಳಲ್ಲಿ ಪತ್ತೆಯಾದ ಅತೀ ಕಡಿಮೆ ಕೋವಿಡ್ ಪ್ರಕರಣಗಳು ಇವು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕಳೆದ ಒಂದು ದಿನದಲ್ಲಿ 1,65,553 ಮಂದಿ ಕೋವಿಡ್ ಗೆ ತುತ್ತಾಗಿದ್ದು, ದೇಶದಲ್ಲಿ ಒಟ್ಟಾರೆ ಸೋಂಕಿತರ ಪ್ರಮಾಣ 2,78,94,800ಕ್ಕೆ ಏರಿಕೆಯಾಗಿದೆ. ಸುಮಾರು 21,14,508 ಸಕ್ರಿಯ ಪ್ರಕರಣಗಳಿದ್ದು, 2.54 ಕೋಟಿ ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದೇ ವೇಳೆ ಈವರೆಗೂ ಸುಮಾರು 3.25 ಲಕ್ಷ ಜನರು ಮೃತಪಟ್ಟಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ವರದಿ ಪ್ರಕಾರ ಈವರೆಗೂ 34,31,83,748 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಮೇ 29 ರಂದು ಸುಮಾರು 20,63,839 ಜನರ ಗಂಟಲು ದ್ರವ ಮಾದರಿಯ ಪರೀಕ್ಷೆ ನಡೆಲಾಗಿದೆ.
ಏತನ್ಮಧ್ಯೆ ಕೋವಿಡ್ 19 ಸೋಂಕಿನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಎಲ್ಲಾ ಮಕ್ಕಳಿಗೆ “PM-CARES ಯೋಜನೆಯಡಿ ನೆರವು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ(ಮೇ 29) ಘೋಷಿಸಿದ್ದಾರೆ.
ಮಕ್ಕಳು ದೇಶದ ಭವಿಷ್ಯದ ಪ್ರಜೆಗಳು ಮತ್ತು ಈ ಮಕ್ಕಳನ್ನು ಬೆಂಬಲಿಸಲು ಮತ್ತು ರಕ್ಷಿಸಲು ದೇಶವು ಎಲ್ಲಾ ರೀತಿಯ ಬೆಂಬಲ ನೀಡಲಿದೆ. ಇದರಿಂದ ದೇಶದ ಬಲಿಷ್ಠ ಪ್ರಜೆಗಳಾಗಿ ಅಭಿವೃದ್ಧಿ ಹೊಂದಲು ಉಜ್ವಲ ಭವಿಷ್ಯ ಕಲ್ಪಿಸಿಕೊಡಲಿದೆ ಎಂದು ಪ್ರಧಾನಿ ಹೇಳಿದರು.