ಬೆಳಗಾವಿ: ಭಯೋತ್ಪಾದಕರ ಕಪಿಮುಷ್ಟಿಯಿಂದ ಒತ್ತೆಯಾಳುಗಳನ್ನು ರಕ್ಷಿಸಲು ಭಾರತ-ಜಪಾನ್ ಸೈನಿಕರು ಬೆಳಗಾವಿಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದು, ಹೆಲಿಕಾಪ್ಟರ್‌ದಿಂದ ಹಗ್ಗದ ಸಹಾಯ ಪಡೆದು ಕೆಳಗಿಳಿದು ಉಗ್ರರ ಅಡಗುತಾಣಕ್ಕೆ ಲಗ್ಗೆ ಇಟ್ಟಿದ್ದಾರೆ. ಮಾ.9ರಂದು ಒತ್ತೆಯಾಳುಗಳನ್ನು ರಕ್ಷಿಸಲು ಆಪರೇಷನ್ ನಡೆಸಲಿದ್ದಾರೆ!
ಇಲ್ಲಿನ ಮರಾಠಾ ಲಘು ಪದಾತಿ ದಳ(ಎಂಎಲ್‌ಐಆರ್‌ಸಿ) ಆವರಣದಲ್ಲಿ ಫೆ.27ರಿಂದ ಮಾ.10ರವರೆಗೆ ಭಾರತ-ಜಪಾನ್ ಸೇನೆಯ “ಧರ್ಮ ಗಾರ್ಡಿಯನ್ 2022′ ಜಂಟಿ ಸಮರಾಭ್ಯಾಸ ಆರಂಭಗೊಂಡಿದ್ದು, ಮಂಗಳವಾರದ ಜಂಟಿ ಸಮರಾಭ್ಯಾಸದ ಅಣಕು ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯಗಳಿವು. ಉಗ್ರರನ್ನು ದಮನಗೊಳಿಸಲು ಎರಡೂ ದೇಶದ ಸೈನಿಕರು ನಡೆಸಿದ ಕಾರ್ಯಾಚರಣೆ ಮೈನವಿರೇಳಿಸುವಂತಿತ್ತು.
ಬೆಳಗಾವಿ ತಾಲೂಕಿನ ಹಾಲಬಾವಿ ಐಟಿಬಿಪಿ ಆವರಣದಲ್ಲಿ ಹೆಲಿಕಾಪ್ಟರ್‌ನಿಂದ ಹಗ್ಗದ ಸಹಾಯ ಪಡೆದು ಶಸ್ತ್ರಸಜ್ಜಿತರಾಗಿ ಕೆಳಗಿಳಿದ ದೃಶ್ಯ ಮೈನವಿರೇಳಿಸುವಂತಿತ್ತು. ಭಾರತ ಮತ್ತು ಜಪಾನ ಸೇನೆಯ ಕೆಲ ಸೈನಿಕರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಹೆಲಿಪ್ಯಾಡ್ ಸುತ್ತಲೂ ಕಣ್ಗಾವಲು ಇಟ್ಟು, ಇನ್ನುಳಿದ ಯೋಧರು ಬೇರೆ ಬೇರೆ ಮಾರ್ಗಗಳ ಮೂಲಕ ಉಗ್ರರ ಅಡಗುತಾಣಕ್ಕೆ ಲಗ್ಗೆ ಇಟ್ಟರು. ಜಿಪಿಎಸ್ ಹಾಗೂ ಭೌಗೋಳಿಕ ನಕ್ಷೆಯ ಸಹಾಯದಿಂದ ಉಗ್ರರತ್ತ ತೆರಳುತ್ತಿದ್ದು, ಬುಧವಾರ ಒತ್ತೆಯಾಳುಗಳನ್ನು ರಕ್ಷಿಸುವ ಕಾರ್ಯಾಚರಣೆ ಕುತೂಹಲ ಮೂಡಿಸಿದೆ.
ಎಂಎಲ್‌ಐಆರ್‌ಸಿಯಲ್ಲಿ ಹತ್ತು ದಿನಗಳಿಂದ ಉಭಯ ದೇಶಗಳ ಸೈನಿಕರು ಸಮರಾಭ್ಯಾಸ ಮುಂದುವರಿಸಿದ್ದಾರೆ. ಭಾರತೀಯ ಸೇನೆಯ 15ನೇ ಬೆಟಾಲಿಯನ್‌ನ ಮರಾಠ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್ ಹಾಗೂ ಜಪಾನ್ ಗ್ರೌಂಡ್ ಸೆಲ್ ಡಿಫೆನ್ಸ್ ಫೋರ್ಸ್ ನ 30ನೇ ದಳದ ಯುದ್ಧ ಅನುಭವಿ ಪಡೆಗಳು ಅಭ್ಯಾಸ ನಡೆಸಿವೆ. ಎರಡೂ ಪಡೆಯಲ್ಲಿ ತಲಾ 40 ಸೈನಿಕರಿದ್ದು, ಇನ್ನೂ ಎರಡು ದಿನಗಳ ಕಾಲ ಅಣಕು ಪ್ರದರ್ಶನ ನಡೆಸಲಿದ್ದಾರೆ.
ಎಂಎಲ್‌ಐಆರ್‌ಸಿ ಆವರಣದಲ್ಲಿ ಮಂಗಳವಾರ ಬೆಳಗ್ಗೆ ಉಭಯ ದೇಶಗಳ ಸೈನಿಕರಿಗೆ ಭಯೋತ್ಪಾದಕರು ಅಡಗಿರುವ ತಾಣದ ಮಾಹಿತಿ ನೀಡಲಾಯಿತು. ಉಗ್ರರು ಇರುವ ಹಳ್ಳಿ(ರೋಹಡೇಶ್ವರ ಕ್ಯಾಂಪ್)ಯನ್ನು ಗುರುತಿಸಿಕೊಂಡು ಜಿಪಿಎಸ್ ಸಹಾಯದಿಂದ ಭೌಗೋಳಿಕ ನಕ್ಷೆ ಮೂಲಕ ತೆರಳುವುದು, ಅಲ್ಲಿ ತೆರಳುವ ವೇಳೆ ಬರುವ ಸುತಗಟ್ಟಿ, ಭೂತರಾಮನಹಟ್ಟಿ, ಹಾಲಬಾವಿ ಹಳ್ಳಿಗಳು, ಘಟಪ್ರಭಾ ನದಿ, ವಿವಿಧ ನಾಲೆ, ಕೆರೆಗಳು, ಗುಡ್ಡ-ಬೆಟ್ಟ, ರಾಷ್ಟ್ರೀಯ ಹೆದ್ದಾರಿ-4, ರಸ್ತೆ ಮಾರ್ಗ, ಕಾಲ್ನಡಿಗೆ ದಾರಿ, ಹೆಲಿಪ್ಯಾಡ್ ಸ್ಥಳ, ಅಲ್ಲಿಂದ ಒಟ್ಟು ಅಂತರ, ಒತ್ತೆಯಾಳುಗಳನ್ನು ಇಟ್ಟಿರುವ ಪ್ರದೇಶದ ಮಾಹಿತಿ ಸೇರಿದಂತೆ ಎಲ್ಲ ವಿವರವನ್ನು ಸೈನಿಕರಿಗೆ ನೀಡಲಾಯಿತು. ಭಾರತೀಯ ಸೇನೆಯ ಅಧಿಕಾರಿಗಳು ಆಂಗ್ಲ ಭಾಷೆಯಲ್ಲಿ ವಿವರ ನೀಡುತ್ತಿದ್ದಂತೆ ಅದನ್ನು ಜಪಾನೀಸ್ ಭಾಷೆಗೆ ಅನುವಾದಿಸಿಕೊಂಡು ಜಪಾನ್ ಸೇನೆಯ ಅ ಧಿಕಾರಿಗಳು ಹೇಳುತ್ತಿದ್ದರು. ಸುಮಾರು ಎರಡು ಗಂಟೆಗಳ ಕಾಲ ಸಂಪೂರ್ಣ ಮಾಹಿತಿ ನೀಡಿದ ಬಳಿಕ ಸೈನಿಕರು ಕಾರ್ಯಾಚರಣೆ ಆರಂಭಿಸಿದರು.
ಸಮರಾಭ್ಯಾಸದಲ್ಲಿ ಕಾಡು, ಅರೆ ನಗರ, ನಗರ ಪ್ರದೇಶಗಳಲ್ಲಿನ ಕಾರ್ಯಾಚರಣೆಯ ಪ್ಲಟೂನ್ ಮಟ್ಟದ ತರಬೇತಿ ಕಾರ್ಯಕ್ರಮ ಇದಾಗಿದೆ.
ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಅನುಕೂಲಕರವಾಗಿರುವ ಸಮರಾಭ್ಯಾಸ ನಡೆಸಲಾಗುತ್ತಿದೆ. ಮನೆಗಳ ಮೇಲಿನ ಡ್ರಿಲ್‌ಗಳು,
ಯುದ್ಧದ ಸನ್ನಿವೇಶ, ಭಯೋತ್ಪಾದಕರ ದಮನ, ಶಸ್ತ್ರಾಸ್ತ್ರ ರಹಿತ ಯುದ್ಧ ಒತ್ತೆಯಾಳುಗಳ ರಕ್ಷಣೆ, ಭಯೋತ್ಪಾದಕರ ಅಡಗುತಾಣಗಳ ಮೇಲೆ ದಾಳಿ ನಡೆದಾಗ ಕೈಗೊಳ್ಳಬೇಕಾದ ಕಾರ್ಯಾಚರಣೆ ಬಗ್ಗೆ ತರಬೇತಿ ಪಡೆದುಕೊಂಡಿದ್ದಾರೆ. ವಿವಿಧ ಹಂತದ ಕಾರ್ಯಾಚರಣೆಗಳ ಅಣಕು ಪ್ರದರ್ಶನ ಉಭಯ ಸೇನೆಗಳು ಆರಂಭಿಸಿವೆ.
ಜಿಒಸಿ 36 ಇನ್ ಫೆಂಟ್ರಿ ಡಿವಿಜನ್ ಮೇಜರ್ ಜನರಲ್ ಭಾವಿನೇಶ ಕುಮಾರ, ಕಮಾಂಡರ್ 115 ಬ್ರಿಗೇಡ್‌ನ ಬ್ರಿಗೇಡಿಯರ್ ಎನ್.ಎಸ್. ಸೋಹಲ್
ಸೇರಿದಂತೆ ಭಾರತ ಮತ್ತು ಜಪಾನ್ ದೇಶದ ಸೇನೆಯ ಅಧಿಕಾರಿಗಳು ಇದ್ದರು.