Advertisement

ಮಾಲ್ಡೀವ್ಸ್ ಸಂಸತ್ತಿನಲ್ಲಿ ಕಾಶ್ಮೀರ ವಿಷಯ ಕೆದಕಿದ ಪಾಕಿಸ್ತಾನಕ್ಕೆ ಮುಖಭಂಗ 

09:50 AM Sep 02, 2019 | Team Udayavani |

ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಯ ಬಳಿಕ ತೀವ್ರ ಚಡಪಡಿಕೆಗೆ ಒಳಗಾಗಿರುವ ನೆರೆ ರಾಷ್ಟ್ರ ಪಾಕಿಸ್ತಾನ ಹೋದಲ್ಲಿ ಬಂದಲ್ಲಿ ಕಾಶ್ಮೀರ ವಿಷಯವನ್ನು ಕೆದಕುತ್ತಲೇ ಇದೆ. ಒಂದು ಕಡೆ ಕಾಶ್ಮೀರದಲ್ಲಿರುವ ಭಾರತ ಪಾಕಿಸ್ತಾನ ಗಡಿಯಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಪಾಕ್ ಇನ್ನೊಂದೆಡೆ ಜಾಗತಿಕ ಮಟ್ಟದಲ್ಲಿ ಕಾಶ್ಮೀರ ವಿಷಯವನ್ನು ಎತ್ತಿ ಭಾರತಕ್ಕೆ ತೊಂದರೆ ನೀಡಲು ಪ್ರಯತ್ನಿಸುತ್ತಲೇ ಇದೆ.

Advertisement

ಆದರೆ ಪಾಕಿಸ್ತಾನದ ಈ ಪ್ರಯತ್ನಕ್ಕೆ ಯಾವ ರಾಷ್ಟ್ರಗಳೂ ಮನ್ನಣೆ ನೀಡುತ್ತಿಲ್ಲ. ಆದರೂ ಹಠ ಬಿಡದ ಪಾಕ್ ತನ್ನ ಈ ಪ್ರಯತ್ನವನ್ನು ಮುಂದುವರೆಸುತ್ತಲೇ ಇದೆ. ಇದಕ್ಕೊಂದು ನಿದರ್ಶನವೆಂಬಂತೆ ಮಾಲ್ಡೀವ್ಸ್ ಸಂಸತ್ತಿನಲ್ಲೂ ಪಾಕಿಸ್ತಾನ ಕಾಶ್ಮೀರದ ವಿಚಾರ ಪ್ರಸ್ತಾಪಿಸಲು ಹೋಗಿ ಭಾರತದ ಕೈಯಿಂದ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡಿದೆ.

ನಡೆದದ್ದಿಷ್ಟು..
ಮಾಲ್ಡೀವ್ಸ್ ನಲ್ಲಿ ದಕ್ಷಿಣ ಏಷ್ಯಾ ಸ್ಪೀಕರ್ ಗಳ ನಾಲ್ಕನೇ ಸಮಾವೇಶ ನಡೆಯುತ್ತಿದೆ. ಇದರ ಅಂಗವಾಗಿ ಅಲ್ಲಿನ ಸಂಸತ್ತಿನಲ್ಲಿ ‘ಸುಸ್ಥಿರ ಗುರಿಗಳು’ ಎಂಬ ವಿಚಾರದ ಮೇಲೆ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಭಾರತದ ಪ್ರತಿನಿಧಿಗಳಾಗಿ ಲೋಕಸಭಾದ್ಯಕ್ಷ ಓಂ ಬಿರ್ಲಾ ಮತ್ತು ರಾಜ್ಯ ಸಭೆಯ ಉಪ ಸಭಾಪತಿಗಳಾಗಿರುವ ಹರಿವಂಶ ನಾರಾಯಣ ಸಿಂಗ್ ಅವರು ಭಾಗವಹಿಸುತ್ತಿದ್ದಾರೆ.


ಈ ವಿಷಯದ ಮೇಲೆ ಮಾಲ್ಡೀವ್ಸ್ ಸಂಸತ್ತಿನಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಪಾಕಿಸ್ತಾನದ ಪ್ರತಿನಿಧಿ ಖಾಸಿಂ ಸೂರಿ ಅವರು ಕಾಶ್ಮೀರ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದರು. ‘ಕಾಶ್ಮೀರ ನಾಗರಿಕರ ಮೇಲೆ ನಡೆಯುತ್ತಿರುವ ಸುದೀರ್ಘ ಕಿರುಕುಳವನ್ನು ನಾವು ನಿರ್ಲಕ್ಷಿಸುವಂತಿಲ್ಲ’ ಎಂದು ಖಾಸಿಂ ಅವರು ಖ್ಯಾತೆ ತೆಗೆದರು.

ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಹರಿವಂಶ್ ನಾರಾಯಣ್ ಸಿಂಗ್ ಅವರು ‘ಈ ವೇದಿಕೆಯಲ್ಲಿ ಭಾರತದ ಆಂತರಿಕ ವಿಚಾರವನ್ನು ಕೆದಕುವುಕ್ಕೆ ನಮ್ಮ ತೀವ್ರ ವಿರೋಧವಿದೆ. ಮಾತ್ರವಲ್ಲದೇ ಈ ಸಮಾವೇಶದ ವಿಷಯಕ್ಕೆ ಭಿನ್ನವಾಗಿರುವ ವಿಚಾರವನ್ನು ಇಲ್ಲಿ ಪ್ರಸ್ತಾವಿಸುವುದನ್ನೂ ಸಹ ನಾವು ವಿರೋಧಿಸುತ್ತೇವೆ’ ಎಂದು ಭಾರತದ ನಿಲುವನ್ನು ಸ್ಪಷ್ಟ ಧ್ವನಿಯಲ್ಲಿ ಹೆಳಿದರು.

Advertisement

ಮಾತ್ರವಲ್ಲದೇ, ‘ಪಾಕಿಸ್ತಾನವು ಗಡಿ ಮೂಲಕ ನಡೆಸುತ್ತಿರುವ ಭಯೋತ್ಪಾದನೆಯನ್ನು ನಿಲ್ಲಿಸಿ ಆ ಪ್ರದೇಶದಲ್ಲಿ ಶಾಂತಿ ಸುವ್ಯಸ್ಥೆಯನ್ನು ಸ್ಥಾಪಿಸುವ ನಮ್ಮ ಪ್ರಯತ್ನಕ್ಕೆ ಬೆಂಬಲ ನೀಡಬೇಕು ಎಂದು ಪಾಕಿಸ್ಥಾನಕ್ಕೆ ಮಾತಿನ ಚಾಟಿ ಬೀಸಿದರು. ‘ಭಯೋತ್ಪಾದನೆ ಎಂಬುದು ಇಂದು ವಿಶ್ವಕ್ಕೇ ಮಾರಕವಾಗಿ ಪರಿಣಮಿಸಿದೆ’ ಎಂದೂ ಅವರು ಭಯೋತ್ಪಾದಕ ಪೋಷಕ ರಾಷ್ಟ್ರವನ್ನು ಎಲ್ಲರ ಸಮ್ಮುಖದಲ್ಲೇ ತರಾಟೆಗೆ ತೆಗೆದುಕೊಂಡರು.


ಈ ಸಮಾವೇಶದಲ್ಲಿ ಅಭಿವೃದ್ಧಿ ವಿಚಾರಗಳ ಚರ್ಚೆ ಆಗಬೇಕೇ ಹೊರತು ಅದಕ್ಕೆ ಹೊರತಾಗಿರುವ ವಿಚಾರಗಳನ್ನು ಇಲ್ಲಿ ಚರ್ಚಿಸುವುದು ಸೂಕ್ತವಲ್ಲ. ಹಾಗಾಗಿ ಪಾಕಿಸ್ತಾನದ ಪ್ರತಿನಿಧಿ ವಿಷಯಕ್ಕೆ ಹೊರತಾಗಿ ಆಡಿರುವ ಮಾತುಗಳನ್ನು ಕಡತದಿಂದ ತೆಗೆದು ಹಾಕುವಂತೆಯೂ ಸಿಂಗ್ ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಾಶ್ಮೀರ ಮತ್ತು ಭಯೋತ್ಪಾದನೆಯ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ಥಾನ ಪ್ರತಿನಿಧಿಗಳ ನಡುವೆ ಮಾತಿಗೆ ಮಾತು ಬೆಳೆಯುತ್ತಾ ಹೋಯಿತು. ಪಾಕಿಸ್ತಾನದ ಸೆನೆಟರ್ ಖುರತ್ ಉಲ್ ಐನ್ ಮಾರ್ರಿ, ಕಾಶ್ಮೀರ ವಿಷಯ ಸುಸ್ಥಿರ ಅಭಿವೃದ್ಧಿ ವಿಷಯದೊಂದಿಗೆ ನೇರ ಸಂಬಂಧವನ್ನು ಹೊಂದಿದೆ ಎಂದು ಪ್ರತಿಪಾದಿಸಿದರೆ, ಭಾರತದ ಪ್ರತಿನಿಧಿಗಳು ಇದನ್ನು ಒಕ್ಕೊರಲಿನಿಂದ ಖಂಡಿಸಿದರು.

ಈ ಸಂದರ್ಭದಲ್ಲಿ ಮಾಲ್ಡೀವ್ಸ್ ಸ್ಪೀಕರ್ ಸದನವನ್ನು ಶಾಂತಗೊಳಿಸಲು ಸತತ ಪ್ರಯತ್ನ ನಡೆಸಿದರೂ ಅದು ಫಲ ನೀಡಲಿಲ್ಲ. ಒಟ್ಟಿನಲ್ಲಿ ಕಾಶ್ಮೀರ ವಿಚಾರ ಮಾಲ್ಡೀವ್ಸ್ ಸದನವನ್ನು ಅಲ್ಲೋಲ ಕಲ್ಲೋಲ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next