ನವದೆಹಲಿ: ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಕೂಟದಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಸೆಮಿಫೈನಲ್ ಪ್ರವೇಶಿಸಿದರೆ, ಸೈನಾ ನೆಹ್ವಾಲ್, ಕೆ.ಶ್ರೀಕಾಂತ್, ಪಾರುಪಳ್ಳಿ ಕಶ್ಯಪ್, ಬಿ.ಸಾಯಿ ಪ್ರಣೀತ್, ಸಮೀರ್ ವರ್ಮಾ ಸೋಲುಂಡಿದ್ದಾರೆ.
ಮಹಿಳೆಯರ ಸಿಂಗಲ್ಸ್‌ನಲ್ಲಿ ವಿಶ್ವ ನಂ.4ನೇ ಶ್ರೇಯಾಂಕಿತೆ ಸಿಂಧು 21-12, 19-21, 21-11ರಿಂದ ಸ್ಪೇನಿನ ವಿಶ್ವ ನಂ.36ನೇ ಶ್ರೇಯಾಂಕಿತೆ ಬೀಟ್ರಿಜ್ ಕೊರಾಲ್ಸ್ ವಿರುದ್ಧ ಗೆಲುವು ಸಾಧಿಸಿದರು. 35 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಸಿಂಧು ಗೆಲುವನ್ನು ತಮ್ಮದಾಗಿಸಿಕೊಂಡರು. 1ನೇ ಗೇಮ್ ಗೆದ್ದ ಸಿಂಧುಗೆ 2ನೇ ಗೇಮ್‌ನಲ್ಲಿ ಸ್ಪೇನ್ ಆಟಗಾರ್ತಿ ತಿರುಗೇಟು ನೀಡಿದ್ದರು. ಹೀಗಾಗಿ ಪಂದ್ಯ
ಮೂರನೇ ಸೆಟ್‌ಗೆ ಹೋಯಿತು.
ನಿರ್ಣಾಯಕವಾಗಿದ್ದ ಈ ಸೆಟ್‌ನಲ್ಲಿ ಸಿಂಧು ಸುಲಭ ಜಯ ದಾಖಲಿಸಿ ಸೆಮಿಫೈನಲ್‌ಗೆ ಲಗ್ಗೆ ಹಾಕಿದರು. ಮುಂದಿನ ಪಂದ್ಯದಲ್ಲಿ ಸಿಂಧು ಥಾಯ್ಲೆಂಡ್‌ನ ರಾಚನಾಕ್ ಇಂಟನಾನ್ ವಿರುದ್ಧ ಸೆಣಸಲಿದ್ದಾರೆ. ಮತ್ತೂಂದು ಪಂದ್ಯದಲ್ಲಿ ಸೈನಾ ನೆಹ್ವಾಲ್ 10-21, 13-21ರಿಂದ ಜಾಂಗ್ ಬೈವಿನ್ ವಿರುದ್ಧ ಸೋತರು. ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಪಾರುಪಳ್ಳಿ ಕಶ್ಯಪ್ 16-21, 18- 21ರಿಂದ ನೇರ ಸೆಟ್ ನಲ್ಲಿಯೇ ಚೀನಾದ ಕ್ವಿಯಾ ಬಿನ್ ವಿರುದ್ಧ ಸೋತರು. ಮತ್ತೂಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಿ.ಸಾಯಿ ಪ್ರಣೀತ್ 15-21, 13-21 ರಿಂದ ನೇರ ಸೆಟ್‌ನಲ್ಲಿಯೇ ತೈವಾನ್ ನ ಚೋವು ಟಿಯಾನ್ ಚೆನ್ ವಿರುದ್ಧ ಸೋತರು. ಸಮೀರ್ ವರ್ಮ 17-21, 14-21ರಿಂದ ಮಲೇಷ್ಯಾದ ಜುಲ್ಕರ್ನೈನ್ ವಿರುದ್ಧ ಸೋತರು. ಇದಕ್ಕೂ ಮುನ್ನ ಪ್ರಶಸ್ತಿ ಗೆಲ್ಲುವ ಪ್ರಮುಖ ಸ್ಪರ್ಧಿಯಾಗಿದ್ದ
ಕೆ.ಶ್ರೀಕಾಂತ್ 19-21, 17-21 ರಿಂದ ಜುಲ್ಕರ್ನೈನ್ ವಿರುದ್ಧ ಸೋಲುಂಡಿದ್ದರು.