ಹೊಸದಿಲ್ಲಿ: ಹಾಲಿ ಚಾಂಪಿಯನ್ ಲಕ್ಷ್ಯ ಸೇನ್, ಒಲಿಂಪಿಯನ್ ಪಿ.ವಿ. ಸಿಂಧು ಸಹಿತ ಭಾರತದ ಪ್ರಮುಖ ಆಟಗಾರರು ಮಂಗಳವಾರದಿಂದ ಆರಂಭವಾಗುವ ಇಂಡಿಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಕೂಟದಲ್ಲಿ ಪ್ರಶಸ್ತಿ ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸಲಿದ್ದಾರೆ.
ವಿಶ್ವದ ಅಗ್ರ ಹತ್ತರೊಳಗಿನ ಸಿಂಗಲ್ಸ್ ಆಟಗಾರರಾದ ಸಿಂಧು (7), ಎಚ್.ಎಸ್. ಪ್ರಣಯ್ (8), ಸೇನ್ (10) ಹಾಗೂ ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ (5) ಈ ಬಾರಿ ಕಣದಲ್ಲಿರುವ ಕಾರಣ ಭಾರತ ಕಡಿಮೆ ಪಕ್ಷ ಮೂರು ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ.
ಏಳನೇ ಶ್ರೇಯಾಂಕದ ಸೇನ್ ಮತ್ತು ಐದನೇ ಶ್ರೇಯಾಂಕದ ಸಾತ್ವಿಕ್-ಚಿರಾಗ್ ಅವರು ಹಾಲಿ ಚಾಂಪಿಯನ್ ಆಗಿ ಇಲ್ಲಿ ಸ್ಪರ್ಧಿಸಲಿದ್ದಾರೆ. ಸಿಂಗಲ್ಸ್‌ನಲ್ಲಿ ಆಡಲಿರುವ ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಅವರು ಇಲ್ಲಿ ಈ ಹಿಂದೆ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಕಳೆದ ವರ್ಷ ಸಿಂಗಲ್ಸ್‌ನಲ್ಲಿ ಅಮೋಘ ಸಾಧನೆ ಮಾಡಿರುವ ಸೇನ್ ಮತ್ತು ಪ್ರಣಯ್ ಇಲ್ಲಿ ಮೊದಲ ಸುತ್ತಿನಲ್ಲಿಯೇ ಮುಖಾಮುಖೀಯಾಗುತ್ತಿದ್ದಾರೆ. ಈ ಬಾರಿ ಯುವ ಆಟಗಾರ ಸೇನ್ ಗೆಲವು ಸಾಧಿಸಬಹುದೆಂದು ಭರವಸೆ ಇಡಲಾಗಿದೆ. ಮಲೇಷ್ಯಾ ಓಪನ್‌ನಲ್ಲೂ ಇವರಿಬ್ಬರು ಮುಖಾಮುಖೀಯಾಗಿದ್ದು ಪ್ರಣಯ್ ಜಯ ಸಾಧಿಸಿದ್ದರು.