ಸಿಡ್ನಿ : ಆಸ್ಟ್ರೇಲಿಯದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ಸಾಧಿಸುವುದಕ್ಕೆ ಭಾರತದ ಇನ್ನಷ್ಟು ನಿಕಟವಾಗಿದೆ.
ಆತಿಥೇಯ ಆಸೀಸ್ ವಿರುದ್ಧದ ಈ ಸರಣಿಯ ಕೊನೇ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಇಂದು ಶನಿವಾರ ಬೆಳಕಿನ ಕೊರತೆ ಮತ್ತು ಮಳೆಯಿಂದಾಗಿ ಒಂದು ತಾಸು ಮೊದಲೇ ಆಟ ನಿಂತಾಗ ಆಸ್ಟ್ರೇಲಿಯ 83.3 ಓವರ್ ಆಟ ಆಡಿ ಆರು ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿತ್ತು.
ತನ್ನ ಮೊದಲ ಇನ್ನಿಂಗ್ಸ್ ಆಟದಲ್ಲಿ ಏಳು ವಿಕೆಟ್ ನಷ್ಟಕ್ಕೆ 622 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿ ಡಿಕ್ಲೇರ್ ಮಾಡಿದ್ದ ಭಾರತ, ಇನ್ನುಳಿದಿರುವ ಎರಡು ಪೂರ್ಣ ದಿನಗಳ ಆಟದಲ್ಲಿ ಈ ಟೆಸ್ಟ್ ಪಂದ್ಯವನ್ನು ಜಯಿಸುವ ಸಾಧ್ಯತೆ ಉಜ್ವಲವಿದೆ. ಹಾಗೆ ಗೆದ್ದರೆ ಭಾರತಕ್ಕೆ 3-1ರ ಅಂತರದಲ್ಲಿ ಸರಣಿ ವಿಜಯ ದೊರಕುತ್ತದೆ. ಒಂದೊಮ್ಮೆ ಪಂದ್ಯ ಡ್ರಾ ಆದರೂ ಭಾರತ 2-1 ಅಂತರದಲ್ಲಿ ಐತಿಹಾಸಿಕ ಸರಣಿ ವಿಜಯವನ್ನು ದಾಖಲಿಸುತ್ತದೆ.
ಭಾರತ ಮೊದಲ ಬಾರಿಗೆ ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿ ಆಡಲು ಹೋದದ್ದು 1947-48ರಲ್ಲಿ – ಲಾಲಾ ಅಮರ್‌ನಾಥ್ ಅವರ ನಾಯಕತ್ವದಲ್ಲಿ . ಅಲ್ಲಿಂದೀಚೆಗೆ ಭಾರತ ಆಸ್ಟ್ರೇಲಿಯದಲ್ಲಿ 11 ಬಾರಿ ಟೆಸ್ಟ್ ಸರಣಿ ಗೆಲ್ಲುವ ಪ್ರಯತ್ನ ಮಾಡಿದೆ. ಆದರೆ ಸಫಲವಾಗಿಲ್ಲ. ಆದುದರಿಂದ ವಿರಾಟ್ ಕೊಹ್ಲಿ ನಾಯಕತ್ವದ ತಂಡಕ್ಕೆ ಹಾಲಿ ಟೆಸ್ಟ್ ಸರಣಿ ಐತಿಹಾಸಿಕ ದಾಖಲೆಯ ವಿಜಯವೆನಿಸುತ್ತದೆ.
ಆಸೀಸ್ ಇನ್ನಿಂಗ್ಸ್‌ನಲ್ಲಿ ಭಾರತದ ಚೈನಾ ಮ್ಯಾನ್ ಎಸೆಗಾರ ಕುಲದೀಪ್ ಯಾದವ್ 71 ರನ್ ವೆಚ್ಚಕ್ಕೆ ಮೂರು ವಿಕೆಟ್ ಕಿತ್ತಿದ್ದಾರೆ. ರವೀಂದ್ರ ಜಡೇಜ 62 ರನ್ ವೆಚ್ಚಕ್ಕೆ ಎರಡು ವಿಕೆಟ್ ಕಿತ್ತಿದ್ದಾರೆ. ಇದಕ್ಕೆ ಮೊದಲು ಮೊಹಮ್ಮದ್ ಶಮೀ ಅವರು ಮಾರ್ನಸ್ (38) ಅವರ ವಿಕೆಟ್ ಪಡೆದಿದ್ದರು. ಅಜಿಂಕ್ಯ ರಹಾಣೆ ಅದ್ಭುತ ಕ್ಯಾಚ್ ಹಿಡಿದು ಮಾರ್ನಸ್ ಅವರನ್ನು ಔಟ್ ಮಾಡಿದ್ದರು.
ಇಂದು ಮೂರನೇ ದಿನದ ಆಟ ತಾಸಿಗೆ ಮೊದಲೇ ನಿಂತಾಗ ಆಸ್ಟ್ರೇಲಿಯ 386 ರನ್‌ಗಳಷ್ಟು ಹಿಂದುಳಿದಿದೆ. ಕ್ರೀಸಿನಲ್ಲಿ ಪೀಟರ್ ಹ್ಯಾನ್ಸ್‌ಕಾಂಬ್ (28 ನಾಟೌಟ್) ಮತ್ತು ಪ್ಯಾಟ್ ಕ್ಯುಮಿನ್ಸ್ (25 ನಾಟೌಟ್) ಉಳಿದಿದ್ದಾರೆ.