Advertisement

ಭಾರತ-ನ್ಯೂಜಿಲ್ಯಾಂಡ್‌ ಟಿ20 ಸರಣಿ: ದ್ವಿತೀಯ ಪಂದ್ಯಕ್ಕೂ ಎದುರಾಗಿದೆ ಮಳೆ ಭೀತಿ

11:36 PM Nov 19, 2022 | Team Udayavani |

ಮೌಂಟ್‌ ಮೌಂಗನಿ: ವೆಲ್ಲಿಂಗ್ಟನ್‌ ಟಿ20 ಪಂದ್ಯ ಮಳೆಯಿಂದ ಕೊಚ್ಚಿಹೋದ ಬಳಿಕ ತೀವ್ರ ನಿರಾಸೆಯಲ್ಲಿರುವ ಭಾರತ ಮತ್ತು ನ್ಯೂಜಿಲ್ಯಾಂಡ್‌ ತಂಡಗಳ ಅಭಿಮಾನಿಗಳಿಗೆ ರವಿವಾರವೂ ಸಿಹಿ ಸುದ್ದಿ ಲಭಿಸುವುದು ಅನುಮಾನ ಎಂಬ ಪರಿಸ್ಥಿತಿಯೊಂದು ಗೋಚರಿಸಿದೆ.

Advertisement

ಮೌಂಟ್‌ ಮೌಂಗನಿಯ “ಬೇ ಓವಲ್‌’ಲ್ಲಿ ದ್ವಿತೀಯ ಪಂದ್ಯ ಏರ್ಪಡಲಿದ್ದು, ಇದಕ್ಕೂ ಮಳೆ ಭೀತಿ ತಪ್ಪಿದ್ದಲ್ಲ ಎಂಬುದಾಗಿ ವರದಿಯಾಗಿದೆ. ಹಾರ್ದಿಕ್‌ ಪಾಂಡ್ಯ ನೇತೃತ್ವದ ಯಂಗ್‌ ಇಂಡಿಯಾ ಪಾಲಿಗೆ ಇದೊಂದು ಮಹತ್ವದ ಸರಣಿ.

ನ್ಯೂಜಿಲ್ಯಾಂಡ್‌ನ‌ ಥಂಡಿ ವಾತಾವರಣ ಹಾಗೂ ಬೌನ್ಸಿ ಟ್ರ್ಯಾಕ್‌ಗಳಲ್ಲಿ ಆಡುವ ಅವಕಾಶ ಲಭಿಸುವುದು ಬಹಳ ಅಪರೂಪ. ಇಲ್ಲಿ ಕ್ಲಿಕ್‌ ಆದರೆ ಏಷ್ಯಾದ ಆಚೆ ಎಲ್ಲಿಯೂ ಉತ್ತಮ ಪ್ರದರ್ಶನ ನೀಡಬಹುದೆಂಬುದೊಂದು ನಂಬಿಕೆ. ಇದಕ್ಕೆ ವೆಲ್ಲಿಂಗ್ಟನ್‌ ಮಳೆ ಕಲ್ಲುಹಾಕಿತು.

ಮೌಂಟ್‌ ಮೌಂಗನಿಯಲ್ಲಾದರೂ ವರುಣದೇವ ಸಹಕರಿಸಿಸಲಿ ಎಂಬುದು ಎಲ್ಲರ ಪ್ರಾರ್ಥನೆ.
2024ರ ಟಿ20 ವಿಶ್ವಕಪ್‌ನಲ್ಲಿ ಆಡಲಿರುವ ಬಹುತೇಕ ಆಟಗಾರರು ಈ ತಂಡಲ್ಲಿದ್ದಾರೆ. ಇವರೆಲ್ಲರಿಗೂ ಇದೊಂದು ಮಹತ್ವದ ಪ್ರವಾಸವಾ ಗಿದೆ. ಹಾಗೆಯೇ ಚುಟುಕು ಮಾದರಿ ಯಲ್ಲಿ ಟೀಮ್‌ ಇಂಡಿಯಾದ ಖಾಯಂ ನಾಯಕನಾಗುವ ಹಾದಿಯಲ್ಲಿರುವ ಹಾರ್ದಿಕ್‌ ಪಾಂಡ್ಯ ಅವರಿಗೂ ಈ ಸರಣಿಯೇ ತೋರುಗಂಬವಾಗಿದೆ. ಹೀಗಾಗಿ ಉಳಿದೆರಡು ಪಂದ್ಯಗಳಾದರೂ ಸಾಂಗವಾಗಿ ಸಾಗಬೇಕಿದೆ.

ಪ್ರತಿಭೆಗಳಿಗೆ ಅವಕಾಶ
ಭಾರತದ ಕಳೆದ ವಿಶ್ವಕಪ್‌ ವೈಫ‌ಲ್ಯಕ್ಕೆ ಒಂದು ಪ್ರಮುಖ ಕಾರಣವೆಂದರೆ “ಪವರ್‌ ಪ್ಲೇ’ ವೈಫ‌ಲ್ಯ. ನಾಯಕ ರೋಹಿತ್‌ ಶರ್ಮ-ಕೆ.ಎಲ್‌ ರಾಹುಲ್‌ ಜೋಡಿ ಮೊದಲ 6 ಓವರ್‌ಗಳಲ್ಲಿ ಸಿಡಿದು ನಿಲ್ಲಲು ಸಂಪೂರ್ಣ ವಿಫ‌ಲವಾಗಿತ್ತು. ಇಲ್ಲಿ ಇವರಿಬ್ಬರಿಗೂ ವಿಶ್ರಾಂತಿ ನೀಡಲಾಗಿದೆ. ಇವರ ಸ್ಥಾನದಲ್ಲಿ ಬ್ಯಾಟ್‌ ಹಿಡಿದು ಬರುವ ಶುಭಮನ್‌ ಗಿಲ್‌-ಇಶಾನ್‌ ಕಿಶನ್‌ ಈ ಅವಕಾಶವನ್ನು ಎಷ್ಟರ ಮಟ್ಟಿಗೆ ಬಳಸಿಕೊಳ್ಳಲಿದ್ದಾರೆ ಎಂಬುದು ಎಲ್ಲರ ಕುತೂಹಲ. ಉಪನಾಯಕ ಪಂತ್‌ ಅವರನ್ನೂ ಆರಂಭಿಕನನ್ನಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ.
ಇಶಾನ್‌ ಕಿಶನ್‌ ಡ್ಯಾಶಿಂಗ್‌ ಬ್ಯಾಟರ್‌ ಆದರೂ ಸ್ಟ್ರೈಕ್‌ ಬೌಲರ್‌ಗಳ ಪೇಸ್‌ ಮತ್ತು ಸ್ವಿಂಗ್‌ ಎಸೆತಗಳನ್ನು ಎದುರಿಸುವಾಗ ಎಡವಟ್ಟು ಮಾಡಿಕೊಳ್ಳುವುದಿದೆ. ಈ ದೋಷವನ್ನು ಅವರು ನಿವಾರಿಸಿಕೊಳ್ಳಬೇಕಿದೆ.

Advertisement

ವನ್‌ಡೌನ್‌ಗೆ ಶ್ರೇಯಸ್‌ ಅಯ್ಯರ್‌ ಇದ್ದಾರೆ. ಬಳಿಕ ಸೂರ್ಯಕುಮಾರ್‌ ಆಗಮನವಾಗಲಿದೆ. ಡೈನಾಮಿಕ್‌ ದೀಪಕ್‌ ಹೂಡಾ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಬಹುದು. ಇವರ ಆಫ್ ಬ್ರೇಕ್‌ ಎಸೆತಗಳೂ ಕಿವೀಸ್‌ ಆಟಗಾರರಿಗೆ ಸಮಸ್ಯೆ ತಂದೊಡ್ಡಬಲ್ಲದು ಎಂಬುದೊಂದು ಲೆಕ್ಕಾಚಾರ. ಸಂಜು ಸ್ಯಾಮ್ಸನ್‌, ನಾಯಕ ಹಾರ್ದಿಕ್‌ ಪಾಂಡ್ಯ ಕೂಡ ಬಿಗ್‌ ಹಿಟ್ಟರ್‌ಗಳೇ ಆಗಿದ್ದಾರೆ.

ಬೌಲಿಂಗ್‌ ವಿಭಾಗದಲ್ಲಿ ದಾಳಿಗೆ ಕಾದು ನಿಂತವರು ಯಜುವೇಂದ್ರ ಚಹಲ್‌. ಕಳೆದ ವಿಶ್ವಕಪ್‌ನಲ್ಲಿ ಇವರನ್ನು ಬೆಂಚ್‌ ಮೇಲೆ ಕೂರಿಸಲಾಗಿತ್ತು. ಈಗ ಆರ್‌. ಅಶ್ವಿ‌ನ್‌ ಅವರ “ಟಿ20 ಕೆರಿಯರ್‌ ಓವರ್‌’ ಆಗಿರುವ ಸೂಚನೆ ಬಂದಿದ್ದು, ಚಹಲ್‌ ಸ್ಪಿನ್‌ ದಾಳಿಯ ನೇತೃತ್ವ ವಹಿಸಬೇಕಿದೆ. ಇವರಂತೆ ಹರ್ಷಲ್‌ ಪಟೇಲ್‌ ಕೂಡ ತಂಡದಲ್ಲಿದ್ದೂ ವಿಶ್ವಕಪ್‌ ಆಡುವ ಅವಕಾಶದಿಂದ ವಂಚಿತರಾಗಿದ್ದರು.

ವೇಗದ ವಿಭಾಗದಲ್ಲಿನ ಪ್ರಮುಖರೆಂದರೆ ಭುವನೇಶ್ವರ್‌ ಕುಮಾರ್‌ ಮತ್ತು ಎಡಗೈ ಸೀಮರ್‌ ಅರ್ಷದೀಪ್‌ ಸಿಂಗ್‌. ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಪಾಲಿಗೆ ಇದು ಮತ್ತೂಂದು “ಇನ್ನಿಂಗ್ಸ್‌’.

ವಿಲಿಯಮ್ಸನ್‌ಗೆ ಸವಾಲು
ನ್ಯೂಜಿಲ್ಯಾಂಡ್‌ ಕೂಡ ಭಾರತದಂತೆ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ತಂಡ. ಮಾರ್ಟಿನ್‌ ಗಪ್ಟಿಲ್‌, ಟ್ರೆಂಟ್‌ ಬೌಲ್ಟ್ ಮೊದಲಾದ ಸೀನಿಯರ್‌ಗಳನ್ನು ಕೈಬಿಟ್ಟಿದೆ. ಕೇನ್‌ ವಿಲಿಯಮ್ಸನ್‌ ನಾಯಕತ್ವದಲ್ಲಿ ಮುಂದುವರಿದದ್ದೊಂದು ಅಚ್ಚರಿ.

2ನೇ ಟಿ20
ಸ್ಥಳ: ಮೌಂಟ್‌ ಮೌಂಗನಿ
ಆರಂಭ: ಅ. 12.00
ಪ್ರಸಾರ:ಡಿಡಿ ಸ್ಪೋರ್ಟ್ಸ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next