ಸುಬ್ರಹ್ಮಣ್ಯ: ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕುರಿತು ಆಸಕ್ತಿ ಮೂಡಿಸಿ ಅವರಲ್ಲಿ ಉತ್ತೇಜನ, ಪ್ರೇರಣೆ ತುಂಬುವ ಕೆಲಸವನ್ನು ಇಸ್ರೋ ಸಂಸ್ಥೆ ಮಾಡುತ್ತಿದೆ. ವಿದ್ಯಾರ್ಥಿಗಳನ್ನು ಭವಿಷ್ಯದ ವಿಜ್ಞಾನಿಗಳಾಗಿ ರೂಪಿಸಿ, ದೇಶವನ್ನು ಮತ್ತಷ್ಟು ಮೇಲಕ್ಕೆ ಕೊಂಡೊಯ್ಯುವ ದೃಢ ನಂಬಿಕೆ ಇಸ್ರೋದ್ದಾಗಿದೆ ಎಂದು ಬೆಂಗಳೂರು ಇಸ್ರೋದ ವಿಜ್ಞಾನಿ, ಎಸ್.ಎಫ್. ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಆರ್. ಗುರುಪ್ರಸಾದ್ ಹೇಳಿದರು.
ಮಂಗಳೂರಿನ ಸುಶೀಲಾ ಮತ್ತು ರಾಮ ನಾರಾಯಣ ಭಿಡೆ ಟ್ರಸ್ಟ್ ಮತ್ತು ದಿ| ಆರ್. ಎನ್. ಭಿಡೆ ಜನ್ಮಶತಮಾನೋತ್ಸವ ಆಚರಣಾ ಸಮಿತಿ, ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಬಿಳಿನೆಲೆ ಇವುಗಳ ಆಶ್ರಯದಲ್ಲಿ ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೋ) ಇದರ ಪರ್ಲ್ ಜುಬಿಲಿ ಸಂಭ್ರಮಾಚರಣೆ ಪ್ರಯುಕ್ತ ಶ್ರೀ ಗೋಪಾಲಕೃಷ್ಣ ಪೌಢಶಾಲೆಯಲ್ಲಿ ಶನಿವಾರ ನಡೆದ ‘ಭಾರತೀಯ ಬಾಹ್ಯಾಕಾಶ ಸಂಶೋಧನೆ ಕುರಿತು ವಿಚಾರಗೋಷ್ಠಿ’ ಉದ್ಘಾಟಿಸಿ ಅವರು ಮಾತನಾಡಿದರು.
ಬೇರೆ ದೇಶದವರು ಮಾಡದ ಹಲವು ಅಪೂರ್ವ ಸಾಧನೆಗಳನ್ನು ಭಾರತೀಯ ವಿಜ್ಞಾನಿಗಳು ಮಾಡಿದ್ದಾರೆ. ಚಂದ್ರಗ್ರಹದಲ್ಲಿ ನೀರು ಇದೆ ಎಂದು ಮೊಟ್ಟಮೊದಲ ಭಾರಿ ಖಚಿತವಾಗಿ ಹೇಳಿದ್ದು ಕೂಡ ಭಾರತೀಯ ವಿಜ್ಞಾನಿಗಳೆ. ಭಾರತದ ಅಂತರಿಕ್ಷಯಾನ ಒಂದು ಅಮೋಘ ಸಾಧನೆ. ಈ ಎಲ್ಲ ಸಾಧನೆಗಳ ಹಿಂದೆ ಅಪಾರ ವೈಜ್ಞಾನಿಕ- ತಾಂತ್ರಿಕ ತಳಹದಿ ಅಡಕವಾಗಿದೆ ಎಂದರು.
ಟ್ರಸ್ಟ್‌ನ ಹೇಮಂತ್ ಭಿಡೆ ಪ್ರಸ್ತಾವಿಸಿದರು. ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ವಿಜ್ಞಾನಿಗಳಾದ ಆರ್. ಶಶಿಶೇಖರ್, ಆರ್.ಎನ್. ಭಿಡೆ ಜನ್ಮಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಜಯಸೀತಾರಾಮ, ಟ್ರಸ್ಟಿಗಳಾದ ಡಾ| ಛಾಯಾ ಹೆಬ್ಟಾರ್, ಡಾ| ಸವಿತಾ ಪ್ರಭಾಕರ್, ಮಾಲತಿ ಬಾಪಟ್, ಶರಶ್ಚಂದ್ರ ಭಿಡೆ, ಎಸ್‌ಡಿಎಂಸಿ ಅಧ್ಯಕ್ಷ ಶಶಿಧರ ಬೊಟ್ಟಡ್ಕ ಉಪಸ್ಥಿತರಿದ್ದರು. ವಿಜ್ಞಾನಿ ಶಿವರಾಮ ಕೆಜಿ ಅನಿಸಿಕೆ ವ್ಯಕ್ತಪಡಿಸಿದರು.
ವಿಚಾರಗೋಷ್ಠಿ
ಇದೇ ವೇಳೆ ವಿಜ್ಞಾನಿಗಳ ತಂಡ ಉಪಗ್ರಹ ಮಾದರಿಯನ್ನು ಶಿಕ್ಷಣ ಸಂಸ್ಥೆಗೆ ಕೊಡುಗೆಯಾಗಿ ನೀಡಿದರು. ವಿಜ್ಞಾನಿ
ಡಾ| ಎಂ.ವಿ.ಎನ್. ಪ್ರಸಾದ್ ಸ್ವಾಗತಿಸಿ, ಮುಖ್ಯ ಶಿಕ್ಷಕ ಕೃಷ್ಣಶರ್ಮ ವಂದಿಸಿದರು. ಕಾತ್ಯಾಯಿನಿ ಮತ್ತು ಶಿಕ್ಷಕ ಹಿರಿಯಣ್ಣ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನೆ ವಿಚಾರಗೋಷ್ಠಿ ಹಾಗೂ ವಿಜ್ಞಾನ ವಸ್ತು ಪ್ರದರ್ಶನಗಳು, ಸ್ಪರ್ಧೆಗಳು ನಡೆದವು. ವಿಜ್ಞಾನಿಗಳ ಜತೆ ಮಕ್ಕಳ ಸಂವಾದ ನಡೆಯಿತು. 21 ಪ್ರೌಢಶಾಲೆಗಳ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.