ನವದೆಹಲಿ:ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜಿ7 ರಾಷ್ಟ್ರಗಳು, ಆ ದೇಶದ ವಜ್ರೋದ್ಯಮ ಕ್ಷೇತ್ರದ ಮೇಲೆ ಪ್ರಹಾರ ನಡೆಸಲು ಮುಂದಾಗಿವೆ. ಇದು ಭಾರತದಲ್ಲಿನ ವಜ್ರೋದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂಕ ಎದುರಾಗಿದೆ. ರಷ್ಯಾ ಗಣಿಗಳಲ್ಲಿ ಸಿಗುವ ಕಚ್ಚಾ ವಜ್ರಗಳೆಲ್ಲ ದೇಶದ ಕಾರ್ಖಾನೆಗಳಲ್ಲಿ ವಿಶೇಷವಾಗಿ ಸೂರತ್‌ನಲ್ಲಿ ಹೊಳಪುಗೊಂಡು, ಸುಂದರಗೊಂಡು ಅಮೆರಿಕ ಮತ್ತು ಇತರ ರಾಷ್ಟ್ರಗಳಿಗೆ ರಫ್ತಾಗುತ್ತಿವೆ.
ಸೂರತ್‌ನಲ್ಲಿ ವಜ್ರಗಳಿಗೆ ಹೊಳಪು ನೀಡುವುದರಿಂದ ಅತ್ಯಂತ ಉತ್ತಮ ಗುಣಮಟ್ಟದ ಹಾಗೂ ವಿವಿಧ ರೀತಿಯ ಆಕರ್ಷಕ ಶೈಲಿಯ ವಜ್ರಗಳು ಜಗತ್ತಿನ ಮಾರುಕಟ್ಟೆಗೆ ಸಿಗುವಂತಾಗುತ್ತದೆ.
ಅಮೆರಿಕದ ವಿದೇಶಾಂಗ ಸಚಿವಾಲಯ ಮತ್ತು ಐರೋಪ್ಯ ಒಕ್ಕೂಟದ ಹಿರಿಯ ಅಧಿಕಾರಿಗಳು ಮುಂಬೈಗೆ ಆಗಮಿಸಿದ್ದ ವೇಳೆ, ಖ್ಯಾತ ವಜ್ರೋದ್ಯಮಿಯೊಬ್ಬರಿಗೆ ಜಿ7 ರಾಷ್ಟ್ರಗಳು ರಷ್ಯಾದ ವಜ್ರದ ರಫ್ತಿನ ಮೇಲೆ ನಿಷೇಧ ಹೇರುವ ಸುಳಿವು ನೀಡಿದ್ದರು.
ಒಂದು ಜಿ7 ರಾಷ್ಟ್ರಗಳು ಈ ನಿಷೇಧಕ್ಕೆ ಸಹಮತ ವ್ಯಕ್ತಪಡಿಸಿದ್ದೇ ಆದಲ್ಲಿ ರಷ್ಯಾದ ಕಚ್ಚಾ ವಜ್ರಗಳನ್ನು ಅವಲಂಬಿಸಿರುವ ಸೂರತ್‌ನ ಕಾರ್ಖಾನೆಗಳಿಗೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಸದ್ಯದ ಮಾಹಿತಿ ಪ್ರಕಾರ ಮೇ ಅಂತ್ಯ ಭಾಗದಿಂದ ಹೊಸ ಆರ್ಥಿಕ ದಿಗ್ಬಂಧನೆಯ ನಿಯಮಗಳು ಜಾರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.