Advertisement

ಭಾರತ-ಮಲೇಷ್ಯಾ: ಪುರಾತನ ಭಾಷಾ ಬಾಂಧವ್ಯ

12:44 AM Apr 11, 2021 | Team Udayavani |

ಭಾರತದ ಸನಾತನ ಧರ್ಮವು ಇತರ ಯಾವುದೇ ಧರ್ಮಗಳಿಗಿಂತ ಪುರಾತನವಾದುದು, ಸಂಸ್ಕೃತ ಭಾಷೆಯು ಅತೀ ಪುರಾತನ ಭಾಷೆಯಾಗಿದ್ದು ಇದರ ಪ್ರಭಾವ ವಿಶ್ವದ ಹೆಚ್ಚಿನ ಭಾಷೆಗಳ ಮೇಲೆ ಇದೆ ಎನ್ನುವುದು ವಿವಾದಾತೀತವಾಗಿದೆ. ಅದರಲ್ಲೂ ಆಗ್ನೇಯ ಏಷ್ಯಾ ದೇಶಗಳ ಮೇಲೆ ಸ್ವಲ್ಪ ಹೆಚ್ಚೇ ಎನ್ನುವಷ್ಟು ಸಂಸ್ಕೃತದ ಪ್ರಭಾವವನ್ನು ಕಾಣಬಹುದು. ಇದಕ್ಕೆ ಕಾರಣವೂ ಇದೆ. ಪುರಾತನ ಕಾಲದಲ್ಲಿ ಏಷ್ಯಾದ ಹಲವಾರು ಭಾಗಗಳು ಅಖಂಡ ಭಾರತದ ಅಂಗವಾಗಿದ್ದವು ಇಲ್ಲವೇ ಅಧೀನದಲ್ಲಿದ್ದವು. ಮತ್ಸ್ಯಪುರಾಣ, ಗರುಡಪುರಾಣಗಳಲ್ಲೂ ಮಲಯ ಪುರ/ಮಲಯಾ ದ್ವೀಪ ಎನ್ನುವ ಉಲ್ಲೇಖವಿದೆ.

Advertisement

ಮಲೇಷ್ಯಾವು ಆಗ್ನೇಯ ಏಷ್ಯಾದ ಮುಸ್ಲಿಂ ಬಾಹುಳ್ಯವಿರುವ ಒಂದು ಪುಟ್ಟ ರಾಷ್ಟ್ರ. ಇಲ್ಲಿನ ಅಧಿಕೃತ ಭಾಷೆ “ಬಹಾಸ ಮಲಯು’ ಇದರ ಅರ್ಥ ಮಲಯದ ಭಾಷೆ ಎಂದು. ಈ ಭಾಷೆಯು ತನ್ನದೇ ಆದ ಲಿಪಿಯನ್ನು ಹೊಂದಿಲ್ಲವಾದ ಕಾರಣ ಅದು ಲ್ಯಾಟಿನ್‌/ಇಂಗ್ಲಿಷ್‌ ಲಿಪಿಯನ್ನು ಬಳಸುತ್ತದೆ. ಆಧುನಿಕ ಇಂಗ್ಲಿಷ್‌ ಲಿಪಿಯನ್ನು ಉಪಯೋಗಿಸುವುಕ್ಕೂ ಮೊದಲು ಅದು ಭಾರತದ ಪಲ್ಲವ ಲಿಪಿ ಅಥವಾ ಗ್ರಂಥಲಿಪಿಯನ್ನು ಉಪಯೋಗಿಸುತ್ತಿದ್ದುದರ ಬಗ್ಗೆ ಪುರಾವೆಗಳಿವೆ. ಈ ಭಾಷೆಯಲ್ಲಿರುವ ಅನೇಕ ಶಬ್ದಗಳು ಸಂಸ್ಕೃತದಿಂದ ಅಪಭ್ರಂಶಗೊಳಿಸಲಾದ ಶಬ್ದಗಳಾಗಿವೆ. ಕೆಲವೊಂದು ಶಬ್ದಗಳು ಸಂಸ್ಕೃತದಲ್ಲಿರುವ ಅರ್ಥವನ್ನೇ ಕೊಟ್ಟರೆ ಕೆಲವು ಬೇರೆ ಅರ್ಥಗಳನ್ನು ಕೊಡುತ್ತವೆ. ಈ ಭಾಷೆಯ ಮೇಲೆ ಹಿಂದಿ ಹಾಗೂ ಉರ್ದು ಭಾಷೆಗಳ ಪ್ರಭಾವವೂ ಬಹಳಷ್ಟಿದೆ. ಇದೇ ಭಾಷೆಯನ್ನು ಹತ್ತಿರದ ರಾಜ್ಯಗಳಾದ ಜಾವಾ, ಸುಮಾತ್ರಾ, ಇಂಡೋನೇಷ್ಯಾ, ಬ್ರೂನಿಗಳಲ್ಲೂ ಬಳಸಲಾಗುತ್ತಿದೆ.
ಮಲೇಷ್ಯಾದಲ್ಲಿ ಭೂಮಿ ಪುತ್ರರು ಅಂದರೆ ಅಲ್ಲಿ ಸ್ವಾತಂತ್ರಪೂರ್ವದಲ್ಲಿದ್ದ ಮೂಲ ಮುಸ್ಲಿಮರು. ಈ ಭೂಮಿಪುತ್ರ ಸಂಸ್ಕೃತ ಶಬ್ದವಲ್ಲವೇ? ಹಾಗೆಯೇ ಭಾಷಾ ಶಬ್ದವನ್ನು ಅಪಭ್ರಂಶಗೊಳಿಸಿ ಬಹಾಸ ಎಂದು ಹೇಳಲಾಗುತ್ತದೆ.

ತಂದೆಯನ್ನು ಬಾಪ ಎಂದು ಕರೆದರೆ ಹೆಂಡತಿಯನ್ನು ಇಸ್ತೆರಿ ಎಂದು ಕರೆಯುತ್ತಾರೆ. ಇಸ್ತೆರಿಯು ಸ್ತ್ರೀ ಎನ್ನುವ ಶಬ್ದದಿಂದ ಬಂದಿರಬಹುದು. ಸಂಸ್ಕೃತದ ಸಹೋದರ ಮತ್ತು ಸಹೋದರಿ ಶಬ್ದಗಳು ಸೌದಾರ ಮತ್ತು ಸೌದಾರಿ ಎಂಬುದಾಗಿ ಬದಲಾಗಿವೆ. ಸಂಸ್ಕೃತದ ಶಬ್ದಗಳಾದ ವರ್ಣ, ರಾಜ, ರಸ, ಸಿಂಗ, ನಾಮ ಮುಖ, ಕಪಾಲ ಗುರು ದಾನ, ದೇವ, ಲಾಭ ಉತ್ತಮ ಗಜ ಪೂರ್ವಕಾಲ ಉತ್ತರಗಳನ್ನು ಅದೇ ಅರ್ಥದಲ್ಲಿ ಅದೇ ಉಚ್ಚಾರದಲ್ಲಿ ಮಲೇಷ್ಯಾದ ಭಾಷೆಯಲ್ಲೂ ಬಳಸಲಾಗುತ್ತದೆ.

ಈಗ ಕೆಲವು ತಿರುಚಲಾದ ಶಬ್ದಗಳನ್ನು ನೋಡೋಣ. ನಾವು ಬಳಸುವ ಕಾರಣ ಅವರಲ್ಲಿ ಕರಾನಾವಾದರೆ ಪ್ರಥಮವು ಪೆರ್ಥಾಮವಾಗುತ್ತದೆ. ಹಾಗೆಯೇ ಆಕಾಶವು ಅಂಗಾRಶವಾದರೆ ಉಪವಾಸವು ಪುವಾಸವಾಗುತ್ತದೆ. ಭಯವು ಬಹಾಯವಾದರೆ ಭೇದವು ಭೇಝವಾಗುತ್ತದೆ. ಪರೀಕ್ಷೆಯನ್ನು ಪೆಪೆರಿಕ್ಸಾನ್‌ ಎನ್ನುತ್ತಾರೆ. ನಮ್ಮಲ್ಲಿ ಬಳಸುವ ಕೆಲವು ಶಬ್ದಗಳು ಅಲ್ಲಿ ಬೇರೆಯೇ ಅರ್ಥವನ್ನು ಕೊಡುವುದೂ ಇದೆ. ಉದಾಹರಣೆಗೆ ಅವರ ಗಂಭೀರವೆಂದರೆ ನಮ್ಮಲ್ಲಿ ಸಮಾನಾರ್ಥಕ ಶಬ್ದ ಸಂತೋಷವೆಂದಾಗುತ್ತದೆ. ಸುಖವೆಂದರೆ ಇಷ್ಟವೆಂದಾಗುತ್ತದೆ. ಹಾಗೆಯೇ ಚಿಂತಾ ಎಂದರೆ ಪ್ರೀತಿ ಹಾಗೂ ಬೆಂಚಿ ಎಂದರೆ ದ್ವೇಷ ಎನ್ನುವ ಅರ್ಥ ಬರುತ್ತದೆ. ಬಾ ಎನ್ನುವುದಕ್ಕೆ ಮಾರಿ ಎಂದೂ ಓಡು ಎನ್ನುವುದಕ್ಕೆ ಲಾರಿ ಎಂದೂ ಯಾವಾಗ ಎನ್ನುವುದಕ್ಕೆ ಬಿಲವೆನ್ನುವ ಶಬ್ದಗಳ ಬಳಕೆಯಿದೆ.

ಹಿಂದಿ ಅಥವಾ ಉರ್ದು ಭಾಷೆಗಳ ಶಬ್ದಗಳಾದ ಅರ್ಚಾ, ಆದತ್‌, ಅಕಲ…, ಅಖಾºì ಆರ್ಖಿ ಅಲ್ಮಾರಿ, ಅಮನ್‌, ಅಸ್ಲಿ, ಬದನ್‌, ಬದಾಮ…, ಬಾಕಿ ಹದ್‌, ಹರಾಮ…, ಹವಾ, ಹಿಸಾಬ್‌, ಇಕ್ರಾì, ಲಾಯಕ್‌, ಖರ್ಬ, ನಸೀಬ್‌, ಉರ್ಮ, ವಕೀಲ್‌ ಮುಂತಾದವು ಮಲೇಷ್ಯನ್‌ ಭಾಷೆಯಲ್ಲೂ ನಮ್ಮಲ್ಲಿಯ ಅರ್ಥವನ್ನೇ ಹೊಂದಿವೆ.

Advertisement

ನಮ್ಮ ದೇಶದಲ್ಲೂ ಪ್ರತಿಯೊಂದು ಭಾಷೆಗಳ ನಡುವೆ ಇದಕ್ಕಿಂತಲೂ ಅನನ್ಯವಾದ ಸಂಬಂಧವಿದೆ. ಉತ್ತರದ ಒಂದೆರಡು ಹಾಗೂ ದಕ್ಷಿಣದ ಒಂದೆರಡು ಭಾಷೆಗಳನ್ನು ಕಲಿತರೆ ದೇಶದ ಎಲ್ಲ ಭಾಷೆಗಳನ್ನು ಅರ್ಥ ಮಾಡಿಕೊಳ್ಳಬಹುದು.
ಇವೆಲ್ಲವನ್ನು ತಿಳಿದ ಮೇಲೆ ಎತ್ತಣ ಭಾರತ ಎತ್ತಣ ಮಲೇಷ್ಯಾ ಎತ್ತಣಿಂದೆತ್ತ ಸಂಬಂಧವಯ್ನಾ ಎನ್ನುವ ಹಾಗಿಲ್ಲ. ಭಾರತ ಮತ್ತು ಮಲೇಷ್ಯಾಗಳ ನಡುವಿನ ಈಗಿನ ರಾಜಕೀಯ ಸಂಬಂಧ ಹೇಗೆಯೇ ಇರಲಿ, ಭಾಷಾ ಬಾಂಧವ್ಯ ಹಾಗೂ ಸಾಂಸ್ಕೃತಿಕ ನಂಟು ಅತೀ ಪುರಾತನವಾದದ್ದು.

– ಡಾ| ಸತೀಶ ನಾಯಕ್‌ ಆಲಂಬಿ

Advertisement

Udayavani is now on Telegram. Click here to join our channel and stay updated with the latest news.

Next