ನವದೆಹಲಿ: ತೈಲ ದರ ಏರಿಕೆಯಿಂದ ಜನರು ಕಂಗಾಲಾಗಿರುವಂತೆಯೇ ತೈಲ ಮತ್ತು ಅನಿಲದ ದೇಶೀಯ ಉತ್ಪಾದನೆ ಮತ್ತು ಆಮದು ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹೊಸ ಯೋಜನೆಯೊಂದನ್ನು ಹಾಕಿಕೊಂಡಿದೆ.
ಅದೇನೆಂದರೆ, ಅಂಡಮಾನ್ನ ಆಳ ಸಮುದ್ರದ ಜಲಾನಯನ ಪ್ರದೇಶದಲ್ಲಿ ತೈಲ ಮತ್ತು ಅನಿಲ ಅನ್ವೇಷಣೆ!
ಹೌದು, ಆಳ ಸಮುದ್ರದಲ್ಲಿ ತೈಲಾನ್ವೇಷಣೆಗಾಗಿ ಒಎನ್ಜಿಸಿ ನೇತೃತ್ವದ ಡ್ರಿಲ್ಲಿಂಗ್ ಪ್ರಕ್ರಿಯೆಗೆ ಹಣಕಾಸು ನೆರವು ಒದಗಿಸುವ ಚಿಂತನೆಯನ್ನೂ ಸರ್ಕಾರ ನಡೆಸಿದೆ.
3-4 ಬಾವಿ ಕೊರೆಯಲು ಸಿದ್ಧತೆ:
ಈ ಮಳೆಗಾಲ ಮುಗಿಯುತ್ತಿದ್ದಂತೆ ಒಎನ್ಜಿಸಿ ಅಂಡಮಾನ್ನಲ್ಲಿ ಡ್ರಿಲ್ಲಿಂಗ್ ಕೆಲಸ ಆರಂಭಿಸಲಿದೆ. ಈಗಾಗಲೇ ಈ ಪ್ರಾಜೆಕ್ಟ್ನಲ್ಲಿ ಭಾಗಿಯಾಗುವ ಕುರಿತು ಎಕ್ಸಾನ್ಮೊಬಿಲ್ ಮತ್ತು ಶೆಲ್ ಕಂಪನಿಗಳೊಂದಿಗೆ ಮಾತುಕತೆಯನ್ನೂ ನಡೆಸುತ್ತಿದೆ. ಕೇಂದ್ರ ಸರ್ಕಾರದ ವಿಶೇಷ ಹಣಕಾಸು ನೆರವಿನಿಂದ ಅಂಡಮಾನ್ನ ಆಳಸಮುದ್ರದಲ್ಲಿ 3-4 ತೈಲ ಬಾವಿಗಳನ್ನು ಕೊರೆಯುವ ಗುರಿಯನ್ನು ಒಎನ್ಜಿಸಿ ಹಾಕಿಕೊಂಡಿದೆ. ಪ್ರತಿ ಬಾವಿ ಕೊರೆಯಲು ಸುಮಾರು 350-400 ಕೋಟಿ ರೂ. ವೆಚ್ಚವಾಗಲಿದೆ ಎಂದು ಮೂಲಗಳು ತಿಳಿಸಿವೆ.
Related Articles
“ರಾಷ್ಟ್ರೀಯ ದ್ವೀಪ ಅನ್ವೇಷಣೆ ಯೋಜನೆ’ಯಡಿ ಸರ್ಕಾರವು “ನೋ-ಗೋ’ ವಲಯ(ನಿಷೇಧಿತ ಪ್ರದೇಶ) ಎಂದು ವರ್ಗೀಕರಿಸಲ್ಪಟ್ಟ ಪ್ರದೇಶದಲ್ಲಿ 22,500 ಕಿ.ಮೀ.ನಷ್ಟು 2ಡಿ ಭೂಕಂಪನ ದತ್ತಾಂಶವನ್ನು ಸಂಗ್ರಹಿಸಿದೆ.
ವಿನಾಯ್ತಿ ಘೋಷಣೆ:
ಈ ಯೋಜನೆಗೆ ಅಗತ್ಯವಿರುವ ರಕ್ಷಣೆ ಮತ್ತು ಬಾಹ್ಯಾಕಾಶ ಇಲಾಖೆಯ ಅನುಮತಿಗೆ ಸರ್ಕಾರವು ವಿನಾಯ್ತಿ ನೀಡಿದೆ. ತೈಲ ದರದ ಗಣನೀಯ ಏರಿಕೆಯೇ ಕೇಂದ್ರ ಸರ್ಕಾರವು ಈ ಯೋಜನೆಗೆ ತುರ್ತಾಗಿ ಕೈಹಾಕಲು ಕಾರಣ ಎಂದು ಮೂಲಗಳು ಹೇಳಿವೆ.