ಕೇಪ್ ಟೌನ್: ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲಬೇಕೆಂಬ ಭಾರತದ ಬಹುಕಾಲದ ಕನಸು ಮತ್ತೆ ನನಸಾಗಿಲ್ಲ. ಮೊದಲ ಪಂದ್ಯದಲ್ಲೇ ಜಯದೊಂದಿಗೆ ಶುಭಾರಂಭ ಮಾಡಿದ್ದ ಟೀಂ ಇಂಡಿಯಾ ಮೂರನೇ ಪಂದ್ಯದಲ್ಲೂ ಸೋತು ಸರಣಿ ಸೋಲನುಭವಿಸಿದೆ. ಕೇಪ್ ಟೌನ್ ಟೆಸ್ಟ್ ಪಂದ್ಯವನ್ನು ಏಳು ವಿಕೆಟ್ ಗಳ ಅಂತರದಿಂದ ಗೆದ್ದ ಡೀನ್ ಎಲ್ಗರ್ ಪಡೆ 2-1 ಅಂತರದಿಂದ ಫ್ರೀಡಂ ಕಪ್ ಸರಣಿ ಗೆದ್ದುಕೊಂಡಿದೆ.
ಗೆಲ್ಲಲು 212 ರನ್ ಗುರಿ ಪಡೆದಿದ್ದ ದ.ಆಫ್ರಿಕಾ ಮೂರನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿತ್ತು. ಇಂದು ಆಫ್ರಿಕಾ ಗೆಲುವಿಗೆ 111 ರನ್ ಬೇಕಿದ್ದರೆ, ಭಾರತ ಎಂಟು ವಿಕೆಟ್ ಪಡೆಯಬೇಕಿತ್ತು. ಆದರೆ ಹರಿಣಗಳು ತಮ್ಮ ಯೋಜನೆಯಲ್ಲಿ ಸಫಲರಾದರು.
49 ರನ್ ಗಳಿಸಿ ಅಜೇಯರಾಗಿದ್ದ ಕೀಗನ್ ಪೀಟರ್ಸನ್ ಇಂದು 82 ರನ್ ಗೆ ಔಟಾದರು. ನಂತರ ಜೊತೆಯಾದ ವ್ಯಾನ್ ಡರ್ ಡ್ಯುಸನ್ ಮತ್ತು ಟೆಂಬ ಬವುಮಾ ತಂಡವನ್ನು ಜಯದತ್ತ ಕೊಂಡೊಯ್ದರು. ಡ್ಯುಸನ್ 41 ರನ್ ಮತ್ತು ಬವುಮಾ 32 ರನ್ ಬಾರಿಸಿದರು.
ಇದನ್ನೂ ಓದಿ:ಹೀಗೂ ಔಟಾಗಬಹುದೇ?: ವಿಚಿತ್ರ ರೀತಿಯಲ್ಲಿ ಔಟಾದ ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್
Related Articles
ಸರಣಿಯ ಮೊದಲ ಪಂದ್ಯವನ್ನು ಭಾರತ ತಂಡ ಗೆದ್ದುಕೊಂಡಿದ್ದರೆ, ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಗೆಲುವು ಸಾಧಿಸಿತ್ತು. ಇದೀಗ ಮೂರನೇ ಟೆಸ್ಟ್ ಪಂದ್ಯವನ್ನೂ ಗೆದ್ದ ಹರಿಣಗಳು ಫ್ರೀಡಂ ಕಪ್ ಟ್ರೋಫಿಯಲ್ಲಿ ಮತ್ತೆ ಜಯ ಸಾಧಿಸಿದರು.