ಹೊಸದಿಲ್ಲಿ: ಚೀನದ ಬೇಹುಗಾರಿಕ ನೌಕೆಯೊಂದು ಹಿಂದೂ ಮಹಾಸಾಗರವನ್ನು ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಭಾರತವು ಬಂಗಾಲ ಕೊಲ್ಲಿಯಲ್ಲಿ ನಡೆಸಲುದ್ದೇಶಿಸಿರುವ ಕ್ಷಿಪಣಿ ಪರೀಕ್ಷೆಯನ್ನು ಮುಂದೂಡುವ ಸಾಧ್ಯತೆಯಿದೆ.
ಮುಂದಿನ ವಾರ ಮಹತ್ವದ ಅಗ್ನಿ ಸರಣಿಯ ಖಂಡಾಂತರ ಕ್ಷಿಪಣಿಯ ಪರೀಕ್ಷೆ ನಡೆಸಲು ಭಾರತ ಸಜ್ಜಾಗಿತ್ತು. ಆದರೆ ಚೀನದ ಗೂಢಚಾರಿ ಹಡಗು ಈ ಕ್ಷಿಪಣಿಯ ಮೇಲೆ ಕಣ್ಣಿಟ್ಟಿರುವುದರಿಂದ ಕ್ಷಿಪಣಿ ಪರೀಕ್ಷೆಯನ್ನೇ ಮುಂದೂಡಿಕೆ ಮಾಡುವ ಸಾಧ್ಯತೆ ಅಧಿಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಚೀನದ 22 ಸಾವಿರ ಟನ್ ತೂಕದ ಯುವಾನ್ ವಾಂಗ್-6 ಬೇಹುಗಾರಿಕ ನೌಕೆಗೆ ಖಂಡಾಂತರ ಕ್ಷಿಪಣಿಗಳ ವೇಗ, ನಿಖರತೆ ಮತ್ತು ವ್ಯಾಪ್ತಿಯನ್ನು ಟ್ರ್ಯಾಕ್ ಮಾಡುವಂಥ ಸಾಮರ್ಥ್ಯವಿದೆ.
ಭಾರತದ ಉಪಗ್ರಹಗಳು ಮತ್ತು ಕ್ಷಿಪಣಿಗಳ ತಾಂತ್ರಿಕ ಗುಪ್ತಚರ ನಡೆಸಲೆಂದೇ ಚೀನವು ಈ ನೌಕೆಯನ್ನು ಕಳುಹಿಸಿರುವ ಸಾಧ್ಯತೆ ಯಿದೆ ಎಂದು ಮೂಲಗಳು ಹೇಳಿವೆ.