ಹುಬ್ಬಳ್ಳಿ: ಧರ್ಮದ ತಾಯ್ನಾಡು ಭಾರತ. ಇದು ಸಂಸ್ಕಾರ-ಸಂಸ್ಕೃತಿಗಳ ಧರ್ಮಭೂಮಿ ಎಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಇಲ್ಲಿನ ಅಮರಗೋಳದಲ್ಲಿ ಶ್ರೀಗುರು ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಅಂಗವಾಗಿ ನಡೆದ ಜನಜಾಗೃತಿ ಸಮಾರಂಭದಲ್ಲಿ ಅವರು ಮಾತನಾಡಿದರು. ನಮ್ಮ ನಾಡಿನಲ್ಲಿ ಋಷಿ ಮುನಿಗಳು, ಆಚಾರ್ಯರು ಮತ್ತು ಸಂತ ಶರಣ ಮಹಂತರು ಅವತರಿಸಿ ಜನ ಸಮುದಾಯದ ಶ್ರೇಯಸ್ಸಿಗೆ ಶ್ರಮಿಸಿದ್ದಾರೆ.
ಜಗದ್ಗುರು ರೇವಣಸಿದ್ದರು ಎಲ್ಲೆಡೆ ಸಂಚರಿಸಿ ಜನಹಿತ ಕಾರ್ಯಗಳನ್ನು ಮಾಡಿದ್ದನ್ನು ಮರೆಯಲು ಸಾಧ್ಯವಿಲ್ಲ ಎಂದರು. ಮಾನವೀಯತೆಯ ಆದರ್ಶ ಮೌಲ್ಯಗಳ ಸಂರಕ್ಷಣೆಗಾಗಿ ಸಂಚರಿಸಿದ ಕೀರ್ತಿ ಶ್ರೀ ರೇವಣಸಿದ್ದರಿಗೆ ಸಲ್ಲುತ್ತದೆ.
ಬಡವ-ಬಲ್ಲಿದ, ಗಂಡು-ಹೆಣ್ಣು ಎಂಬ ತಾರತಮ್ಯವಿಲ್ಲದೇ ಎಲ್ಲರಿಗೂ ಧಾರ್ಮಿಕ ಸಂಸ್ಕಾರ ನೀಡಿ ಸತ್ಪಥದಲ್ಲಿ ಕರೆತರುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ. ದುಷ್ಟ ದುರಹಂಕಾರಿಗಳ ದರ್ಪವನ್ನು ಅಳಿಸಿ ಸಮಾಜದಲ್ಲಿ ಸಾತ್ವಿಕ ಶಕ್ತಿಗಳನ್ನು ಬೆಳೆಸಿದ್ದಾರೆ ಎಂದು ಹೇಳಿದರು.
ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ ಮಾತನಾಡಿ, ಧರ್ಮಾಚರಣೆ ನಮ್ಮ ಬಾಳಿನ ಅವಿಭಾಜ್ಯ ಅಂಗವಾಗಬೇಕು. ಧರ್ಮ ಮಾತ್ರ ನಮಗೆ ನೆಮ್ಮದಿ- ಶಾಂತಿ ನೀಡಬಲ್ಲದು ಎಂದರು. ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿದರು.
ಶಾಸಕ ಪ್ರಸಾದ ಅಬ್ಬಯ್ಯ “ರಂಭಾಪುರಿ ಬೆಳಗು’ ಪತ್ರಿಕೆ ಬಿಡುಗಡೆಗೊಳಿಸಿದರು. ಸುಳ್ಳದ ಶಿವಸಿದ್ದರಾಮೇಶ್ವರ ಶಿವಾಚಾರ್ಯರು, ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ಹನ್ನೆರಡುಮಠದ ರೇವಣಸಿದ್ದ ಶಿವಾಚಾರ್ಯರು ಪಾಲ್ಗೊಂಡಿದ್ದರು. ಬಸವರಾಜ ಕಿತ್ತೂರ ಸ್ವಾಗತಿಸಿದರು. ದಾಕ್ಷಾಯಿಣಿ ಹಿರೇಮಠ ನಿರೂಪಿಸಿದರು.