Advertisement

ಭಾರತ: ಎಲ್ಲದರಲ್ಲೂ ಜಗತ್ತಿಗೆ ಅಗ್ರೇಸರ

11:41 PM Sep 15, 2022 | Team Udayavani |

ಕೆಲವು ದಿನಗಳ ಹಿಂದೆ ಭಾರತ ಜಗತ್ತಿನ ಐದನೇ ಪ್ರಬಲ ಅರ್ಥ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಷ್ಟು ಮಾತ್ರ ಅಲ್ಲ, ಪ್ರಮುಖ ಕಂಪೆನಿಗಳ ಸಿಇಒ ಹುದ್ದೆಗಳಿಗೆ ಕೂಡ ಭಾರತೀಯ ಮೂಲದವರೂ ನೇಮಕಗೊಂಡಿದ್ದಾರೆ. ಆಹಾರ ಕ್ರಮ, ಜೀವನ ಪದ್ಧತಿ ಸೇರಿದಂತೆ ಹಲವು ಆಯಾಮಗಳಲ್ಲಿ ಜಗತ್ತಿಗೆ ಮಾರ್ಗದರ್ಶನ ನೀಡುವ ಹಂತಕ್ಕೆ ಬಂದು ನಿಂತಿದೆ ನಮ್ಮ ದೇಶ.

Advertisement

ಏಷ್ಯಾದ ಅತ್ಯಂತ ವೇಗವಾಗಿ ಬೆಳೆಯುವ ಅರ್ಥ ವ್ಯವಸ್ಥೆ :

ಪ್ರಸಕ್ತ ವಿತ್ತೀಯ ವರ್ಷಕ್ಕೆ ಸಂಬಂಧಿಸಿದಂತೆ ಏಷ್ಯಾ ವಲಯದ ದೇಶಗಳಿಗೆ ಹೋಲಿಕೆ ಮಾಡಿದರೆ ದೇಶದ ಅರ್ಥ ವ್ಯವಸ್ಥೆ ಅತ್ಯಂತ ವೇಗವಾಗಿ ಬೆಳವಣಿಗೆ ಸಾಧಿಸಲಿದೆ ಎಂದು ಜಾಗತಿಕ ವಿತ್ತೀಯ ಸಲಹಾ ಸಂಸ್ಥೆ ಮಾರ್ಗನ್‌ ಸ್ಟಾನ್ಲಿಯ ಅಧ್ಯಯನದಲ್ಲಿ ಅಭಿಪ್ರಾಯಪಡಲಾಗಿದೆ. ಈ ವರ್ಷ ದೇಶದ ಒಟ್ಟು ದೇಶೀಯ ಉತ್ಪಾದಕತೆ (ಜಿಡಿಪಿ) ಶೇ.7ರ ಆಧಾರದಲ್ಲಿ ಬೆಳವಣಿಗೆ ಸಾಧಿಸಲಿದೆ ಎಂದು ಮಾರ್ಗನ್‌ ಸ್ಟಾನಿಯ ತಜ್ಞರು ಊಹಿಸಿದ್ದಾರೆ. ಜಗತ್ತಿನ ಸದೃಢ ಅರ್ಥ ವ್ಯವಸ್ಥೆಗಳಿಗೆ ಹೋಲಿಕೆ ಮಾಡಿದರೆ ದೃಢವಾಗಿರುವ ಆರ್ಥಿಕ ಬೆಳವಣಿಗೆಯಾಗಲಿದೆ ಎಂದು ಅಭಿಪ್ರಾಯಪಡಲಾಗಿದೆ. ಏಷ್ಯಾದ ಅರ್ಥ ವ್ಯವಸ್ಥೆಗೆ ಶೇ.28 ಮತ್ತು ಜಗತ್ತಿನ ಅರ್ಥ ವ್ಯವಸ್ಥೆಯ ಬೆಳವಣಿಗೆಗೆ ಶೇ.22ರಷ್ಟು ಕೊಡುಗೆಯನ್ನು ಭಾರತ ನೀಡಲಿದೆ ಎಂದು  ವರದಿಯೊಂದರಲ್ಲಿ  ಉಲ್ಲೇಖೀಸಲಾಗಿದೆ. ಹೀಗಾಗಿ ಭಾರತದ ಆರ್ಥಿಕತೆ ಈ ದಶಕದಲ್ಲಿ ಅತ್ಯುತ್ತಮ ಬೆಳವಣಿಗೆ ಸಾಧಿಸಿದಂತಾಗಲಿದೆ ಎಂದು ಅದರಲ್ಲಿ ಪ್ರತಿಪಾದಿಸಲಾಗಿದೆ.

2021ರ ಕೊನೆಯ ಮೂರು ತಿಂಗಳಲ್ಲಿ ಯು.ಕೆ.ಯನ್ನು ಹಿಂದಿಕ್ಕಿ ಜಗತ್ತಿನ ಐದನೇ ಬೃಹತ್‌ ಅರ್ಥವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಶಕಗಳ ಹಿಂದೆ ಭಾರತದ ಅರ್ಥ ವ್ಯವಸ್ಥೆ 11ನೇ ಸ್ಥಾನದಲ್ಲಿ ಇತ್ತು.

ಎಲ್ಲೆಲ್ಲೂ ಭಾರತದ ಸಿಇಒಗಳದ್ದೇ ಸದ್ದು :

Advertisement

ದಶಕಗಳ ಹಿಂದೆ ಪೆಪ್ಸಿಕೋದ ಇಂದ್ರಾ ನೂಯಿ ಅನಂತರ ಗೂಗಲ್‌ನ ಸುಂದರ್‌ ಪಿಚೈ, ಮಾಸ್ಟರ್‌ ಕಾರ್ಡ್‌ನ ಅಜಯ್‌ ಬಂಗಾ ಸೇರಿದಂತೆ ಬಹಳಷ್ಟು ಮಂದಿ ಜಾಗತಿಕ ಅತ್ಯುನ್ನತ ಕಂಪೆನಿಗಳ ಸಿಇಒಗಳಾಗಿದ್ದಾರೆ. ಮುಖ್ಯವಾಗಿ ಎರಡು ದಶಕಗಳಲ್ಲಿ ಬಹಳಷ್ಟು ಮಂದಿ ಭಾರತೀಯರು ಜಾಗತಿಕ ಕಂಪೆನಿಗಳ ಸಿಇಒಗಳಾಗಿ ಮುನ್ನಡೆಸುತ್ತಿದ್ದಾರೆ. ಫೆಡೆಕ್ಸ್‌ನ ಸಿಇಒ ರಾಜಸುಬ್ರಹ್ಮಣಿಯನ್‌, ಟ್ವಿಟರ್‌ ಮುಖ್ಯಸ್ಥರಾಗಿ ಪರಾಗ್‌ ಅಗರ್‌ವಾಲ್‌,  ಬಾಕ್ಲೇಸ್‌ ಸಿಇಒ ಸಿ.ಎಸ್‌. ವೆಂಕಟಕೃಷ್ಣನ್‌, ಐಬಿಎಂನ ಅರವಿಂದ್‌ ಕೃಷ್ಣ, ಮೈಕ್ರಾನ್‌ನ ಸಂಜಯ್‌ ಮೆಹ್ರೋತ್ರ ಮತ್ತು ಡೆಲಾಯ್ಟ್ ನ ಪುನೀತ್‌ ರಂಜನ್‌ ಸೇರಿದಂತೆ ಇನ್ನಿತರರು ಜಾಗತಿಕ ಕಂಪೆನಿಗಳನ್ನು ಮುನ್ನಡೆಸುವ ಮೂಲಕ ಭಾರತದ ಹಿರಿಮೆ ಹೆಚ್ಚಿಸಿದ್ದಾರೆ.

ವೈಭವೊಪೇತ ಖಾದ್ಯ ಪದ್ಧತಿ :

ದೇಶದ ಆಹಾರ, ಖಾದ್ಯ ಪದ್ಧತಿಯು ವೈಭವೊಪೇತ­ವಾಗಿದ್ದು, ಭೋಜನ ಪ್ರಿಯರು ಕೊಡುವ ರೇಟಿಂಗ್‌ ಅನ್ವಯ ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದಿದೆ. ಆಹಾರ ಪದ್ಧತಿ ಭೌಗೋಳಿಕವಾಗಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗು­ತ್ತಿದ್ದು, ರಾಜಸ್ಥಾನ ಮತ್ತು ಗುಜರಾತ್‌ ರಾಜ್ಯ­ಗಳಲ್ಲಿ ಸಸ್ಯಹಾರ ಖಾದ್ಯ, ದಿಲ್ಲಿ ಮತ್ತು ಲಕ್ನೋದಲ್ಲಿ ಮಾಂಸಾ­ಹಾರ ಖಾದ್ಯ ಪದ್ಧತಿ ಗಮನ ಸೆಳೆಯುವುದು ವಿಶೇಷ.

ಬಹುಭಾಷೆಯ ರಾಷ್ಟ್ರ :

ಇತ್ತೀಚೆಗೆ ಬಿಡುಗಡೆಯಾದ ವರದಿಯ ವಿಶ್ಲೇಷಣೆ ಹೇಳುವಂತೆ ಭಾರತದಲ್ಲಿ 19,500ಕ್ಕೂ ಹೆಚ್ಚು ಉಪ ಅಥವಾ ಪ್ರಾಂತೀಯ ಮಾತೃಭಾಷೆಗಳನ್ನು ಮಾತನಾಡುತ್ತಾರೆ. ಭಾಷೆಗಳ ವಿಷಯದಲ್ಲಿ ಭಾರತ ವಿಶ್ವದಲ್ಲಿಯೇ ನಾಲ್ಕನೇ ಸ್ಥಾನ ಅಲಂಕರಿಸಿದೆ. 120 ಕೋಟಿಗೂ ಅಧಿಕ ಜನಸಂಖ್ಯೆಯ ದೇಶದಲ್ಲಿ 10 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಜನರು ಮಾತನಾಡುವ 121 ಭಾಷೆಗಳು ಬಳಕೆಯಲ್ಲಿ ಇವೆ.

ಜಿಡಿಪಿ ಮೊದಲ ತ್ತೈಮಾಸಿಕದಲ್ಲಿ ವಿಸ್ತರಣೆ :

ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ತೈಮಾಸಿಕ ಅಂದರೆ ಎಪ್ರಿಲ್‌-ಜೂನ್‌ ಅವಧಿಯಲ್ಲಿ ದೇಶದ ಅರ್ಥ ವ್ಯವಸ್ಥೆ ಶೇ.13.5ರಷ್ಟು ಬೆಳೆದಿದೆ. ಹಿಂದಿನ ನಾಲ್ಕು ತ್ತೈಮಾಸಿಕಗಳಿಗೆ ಹೋಲಿಕೆ ಮಾಡಿದರೆ ಅದು ಅತ್ಯಧಿಕದ ಬೆಳವಣಿಗೆ. ಸೇವಾ ವಲಯ ಹಾಗೂ ಕೃಷಿಯಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದು ಜಿಡಿಪಿ ದತ್ತಾಂಶಗಳಲ್ಲಿ ಉಲ್ಲೇಖೀಸಲಾಗಿದೆ. ಮೊದಲ ತ್ತೈಮಾಸಿಕದಲ್ಲಿ ದೇಶದ ಅರ್ಥ ವ್ಯವಸ್ಥೆ ಅತ್ಯಂತ ವೇಗವಾಗಿ ಬೆಳವಣಿಗೆ ಸಾಧಿಸುತ್ತಿದೆ ಎಂದು ಹೆಗ್ಗಳಿಕೆಗೆ ಪಾತ್ರವಾಗಿದ್ದರೆ, ಇದೇ ಅವಧಿಯಲ್ಲಿ ಚೀನದ ಅರ್ಥ ವ್ಯವಸ್ಥೆ ಶೇ.0.4ರಷ್ಟು ಬೆಳವಣಿಗೆ ದಾಖಲಿಸಿದೆ.

ರಾಷ್ಟ್ರೀಯ ಸಾಂಖ್ಯೀಕ ಕಚೇರಿ ದಾಖಲೆಗಳ ಪ್ರಕಾರ 2021-22 ಎಪ್ರಿಲ್‌-ಜೂನ್‌ನಲ್ಲಿ ಆರ್ಥಿಕತೆ ಶೇ. 20.1ರಷ್ಟು ಬೆಳವಣಿಗೆ ಕಂಡಿದೆ. 2021ರ ಜುಲೈ-ಸೆಪ್ಟಂಬರ್‌ನಲ್ಲಿ ದೇಶದ ಜಿಡಿಪಿ ಶೇ. 8.4ರಷ್ಟು ವಿಸ್ತರಿಸಿದ್ದರೆ, 2021ರ ಅಕ್ಟೋಬರ್‌-ಡಿಸೆಂಬರ್‌ನಲ್ಲಿ ಶೇ. 5.4 ಮತ್ತು 2022 ರ ಜನವರಿ-ಮಾರ್ಚ್‌ ಅವಧಿಯ ಶೇ.4.1ಕ್ಕೆ ವಿಸ್ತರಿಸಿದೆ.

ಆರ್‌ಬಿಐಯಿಂದ ಈ ತಿಂಗಳಲ್ಲಿ ಬಿಡುಗಡೆಯಾದ ವರದಿ ಶೇ.16.2 ಗುರಿ ತಲುಪದಿದ್ದರೂ ಶೇ.13.5 ಬೆಳವಣಿಗೆ ಸಾಧಿಸಿದೆ.

ಸಾಂಸ್ಕೃತಿಕತೆಯಲ್ಲಿ ಶ್ರೀಮಂತಿಕೆ :

ಭಾರತವು ಆರಂಭದಿಂದಲೂ ಅತೀ ದೊಡ್ಡ ನಾಗರಿಕತೆಯ ಪರಂಪರೆಯ ತವರೂರಾಗಿದೆ.  ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಭಾರತದ 40 ತಾಣಗಳು ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯ. ಅತೀ ಹೆಚ್ಚು ಪಾರಂಪರಿಕ ತಾಣಗಳ ದೇಶಗಳ ಪಟ್ಟಿಯಲ್ಲಿ ಭಾರತ ಆರನೇ ಸ್ಥಾನದಲ್ಲಿರುವುದು ಗಮನಾರ್ಹ.

ಬ್ರಿಟನ್‌ ಪ್ರಬಲ ಅರ್ಥ ವ್ಯವಸ್ಥೆಯ ರಾಷ್ಟ್ರಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿರುವುದು ಮತ್ತು ಭಾರತ 5ನೇ ಸ್ಥಾನಕ್ಕೆ ಏರಿರುವುದು ಸಾಧಾರಣ ಸಾಧನೆಯಂತೂ ಅಲ್ಲ.

ಐಟಿ ವಲಯ ಪ್ರಗತಿ ದ್ವಿಗುಣದತ್ತ :

ಪ್ರಸಕ್ತ ವಿತ್ತೀಯ ವರ್ಷದಲ್ಲಿ ಭಾರತದ ತಂತ್ರಜ್ಞಾನ ಕ್ಷೇತ್ರವು ಅರ್ಥ ವ್ಯವಸ್ಥೆ ಸಾಧಿಸುವ ಬೆಳವಣಿಗೆಯ ಎರಡಷ್ಟು ಸಾಧಿಸಲಿದೆ ಎಂದು ಅಂದಾಜಿಸಲಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಶೇ. 15ರಷ್ಟು ಆದಾಯ ಹೆಚ್ಚಳ ಹಾಗೂ 2021-22 ನೇ ಸಾಲಿನಲ್ಲಿ 227 ಬಿಲಿಯನ್‌ ಅಮೆರಿಕನ್‌ ಡಾಲರ್‌ ತಲುಪಲಿದೆ ಎಂದು ನಿರೀಕ್ಷಿಸಲಾಗಿದೆ. ಉದ್ಯಮದ ಎಲ್ಲ ಉಪ ವಲಯಗಳು ಎರಡಂಕಿಯ ಪ್ರಗತಿ ಸಾಧಿಸಲಿದೆ. ಒಂದು ದಶಕಕ್ಕೆ ಹೋಲಿಕೆ ಮಾಡಿದರೆ ಐಟಿ ವಲಯದ ಆದಾಯ ಅತ್ಯಧಿಕವಾಗಲಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.30ನ್ನು ಮೀರುತ್ತದೆ. ಈ ವಲಯವು ರಾಷ್ಟ್ರದ ಜಿಡಿಪಿಗೆ ಶೇ.9ರಷ್ಟು ಕೊಡುಗೆ ನೀಡಲಿದೆ. ಒಟ್ಟಾರೆಯಾಗಿ ಸೇವಾ ವಲಯದಿಂದ ರಫ್ತು ಕ್ಷೇತ್ರಕ್ಕೆ ಶೇ.51ರಷ್ಟು ಕೊಡುಗೆ ದಾಖಲಾಗಿದೆ.

-ನಾಗಪ್ಪ ಹಳ್ಳಿಹೊಸೂರು

Advertisement

Udayavani is now on Telegram. Click here to join our channel and stay updated with the latest news.

Next