Advertisement

ಇಂದು ಇಸ್ರೋದಿಂದ “ಸವಾಲಿನ ಪ್ರಯೋಗ’; ಅಪಾಯವಾಗದಂತೆ ಇಳಿಸುವುದೇ ಸವಾಲು

08:43 PM Mar 06, 2023 | Team Udayavani |

ನವದೆಹಲಿ: ಇದೇ ಮೊದಲ ಬಾರಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅತಿದೊಡ್ಡ ಸವಾಲಿನ ಪ್ರಯೋಗವೊಂದಕ್ಕೆ ಮುಂದಾಗಿದೆ. ಕಾರ್ಯಸ್ಥಗಿತಗೊಳಿಸಿರುವ ಉಪಗ್ರಹವೊಂದನ್ನು ಭೂಮಿಯ ವಾತಾವರಣಕ್ಕೆ ಮರಳಿ ತರುವ ಕೆಲಸವನ್ನು ಇಸ್ರೋ ಮಂಗಳವಾರ ಕೈಗೆತ್ತಿಕೊಳ್ಳಲಿದೆ.

Advertisement

ನಿಯಂತ್ರಿತ ಮರುಪ್ರವೇಶದ ಪ್ರಯೋಗವನ್ನು ಯಾವುದೇ ಅಪಾಯ ಉಂಟಾಗದಂತೆ ಪೂರ್ಣಗೊಳಿಸುವುದೇ ಅತ್ಯಂತ ಸವಾಲಿನ ಕೆಲಸವಾಗಿದೆ. ಪೆಸಿಫಿಕ್‌ ಸಮುದ್ರದ 5 ಡಿಗ್ರಿ ದಕ್ಷಿಣದಿಂದ 14 ಡಿಗ್ರಿ ದಕ್ಷಿಣದ ಅಕ್ಷಾಂಶ ಮತ್ತು 119 ಡಿಗ್ರಿ ಪಶ್ಚಿಮದಿಂದ 100 ಡಿಗ್ರಿ ಪಶ್ಚಿಮ ರೇಖಾಂಶದ ನಡುವಿನ ಜನವಸತಿ ಇಲ್ಲದೇ ಇರುವ ಪ್ರದೇಶವನ್ನು, ಉಪಗ್ರಹದ ಉದ್ದೇಶಿತ ಮರುಪ್ರವೇಶ ವಲಯವೆಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ 4.30ರಿಂದ 7.30ರ ಅವಧಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಯಾವುದು ಈ ಉಪಗ್ರಹ?
ಭೂಮಿಯ ಕೆಳಕಕ್ಷೆಯಲ್ಲಿ ಸುತ್ತುತ್ತಿರುವ ಮೇಘಾ-ಟ್ರೋಪಿಕ್ಸ್‌-1 ಎಂಬ ಹೆಸರಿನ ಉಪಗ್ರಹವನ್ನು ಇಸ್ರೋ ಮತ್ತು ಫ್ರಾನ್ಸ್‌ನ ಬಾಹ್ಯಾಕಾಶ ಸಂಸ್ಥೆ ಜಂಟಿಯಾಗಿ 2011ರ ಅ.12ರಂದು ಉಡಾವಣೆ ಮಾಡಿದ್ದವು. ಇದರ ಆರಂಭಿಕ ಬಾಳಿಕೆ ಅವಧಿ ಕೇವಲ 3 ವರ್ಷಗಳು. ಆದರೂ, ಇದು 2021ರವರೆಗೂ ಮೌಲ್ಯಯುತ ದತ್ತಾಂಶಗಳನ್ನು ರವಾನಿಸುತ್ತಿತ್ತು ಎಂದು ಇಸ್ರೋ ಹೇಳಿದೆ.

ಹೇಗೆ ನಡೆಯುತ್ತದೆ ಪ್ರಕ್ರಿಯೆ?
2022ರ ಆಗಸ್ಟ್‌ನಿಂದಲೇ ಈ ಉಪಗ್ರಹವನ್ನು ಹಂತ ಹಂತವಾಗಿ ಕೆಳಕ್ಕಿಳಿಸುವ ಪ್ರಕ್ರಿಯೆಯನ್ನು 18 ಬಾರಿ ಮಾಡಲಾಗಿದೆ. ಉಪಗ್ರಹದೊಳಗೆ ಸುಮಾರು 125 ಕೆಜಿ ಇಂಧನ ಇನ್ನೂ ಉಳಿದಿದ್ದು, ಇದನ್ನು ಬಳಸಿಕೊಂಡು ಮಂಗಳವಾರ ಉಪಗ್ರಹವನ್ನು ಭೂಮಿಯ ವಾತಾವರಣದೊಳಗೆ ತರಲಾಗುತ್ತದೆ. ಆಕಸ್ಮಿಕವಾಗಿ ಅವಘಡವೇನಾದರೂ ಸಂಭವಿಸಿದರೆ ಉಳಿಕೆ ಇಂಧನದಿಂದ ಅಪಾಯ ಉಂಟಾಗುವ ಸಾಧ್ಯತೆಯಿರುತ್ತದೆ. ಹೀಗಾಗಿ, ಅತ್ಯಂತ ಸುರಕ್ಷಿತವಾಗಿ ಪೆಸಿಫಿಕ್‌ ಸಾಗರದಲ್ಲಿ ಉಪಗ್ರಹವನ್ನು ಇಳಿಸುವುದು ದೊಡ್ಡ ಸವಾಲಾಗಿದೆ.

ಉಪಗ್ರಹದ ತೂಕ- 1000 ಕೆ.ಜಿ.
ಉಡಾವಣೆಯಾಗಿದ್ದು- 2011
ಕಾರ್ಯಾಚರಣೆ ಸ್ಥಗಿತಗೊಂಡಿದ್ದು- 2021

Advertisement
Advertisement

Udayavani is now on Telegram. Click here to join our channel and stay updated with the latest news.

Next