ಬೆಂಗಳೂರು: ಆರ್‌ಎಸ್‌ಎಸ್ ಮತ್ತು ಬಿಜೆಪಿ ಉದ್ದೇಶಿಸಿರುವಂತೆ ಭಾರತವನ್ನು ಹಿಂದು ರಾಷ್ಟ್ರ ಮಾಡಲು ಅವಕಾಶ ನೀಡುವುದಿಲ್ಲ , ಇದು ಎಲ್ಲಾ ಜಾತಿ ಧರ್ಮದವರಿಗೆ ಸೇರಿದ ದೇಶ….ಇದು ಮಾಜಿ ಪ್ರಧಾನಿ ಎಚ್.ಡಿ .ದೇವೇಗೌಡ ಅವರು ಭಾನುವಾರ ಮಾದಾವರದಲ್ಲಿ ನಡೆದ ಬೃಹತ್ ಕಾಂಗ್ರೆಸ್ -ಜೆಡಿಎಸ್ ಜಂಟಿ ಸಮಾವೇಶದಲ್ಲಿ ಆಡಿದ ಮಾತು.
ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಸೀಟು ಹೊಂದಾಣಿಕೆಯಡಿ ಕಣಕ್ಕಿಳಿದಿರುವ ಕಾಂಗ್ರೆಸ್- ಜೆಡಿಎಸ್ ಭಾನುವಾರ ಅಧಿಕೃತ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಪ್ರಧಾನಿ ಮೋದಿ ಮತ್ತು ಬಿಜೆಪಿ , ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಉಭಯ ಪಕ್ಷಗಳ ಪ್ರಮುಖ ನಾಯಕರು ಈ ಸಮಾವೇಶದಲ್ಲಿ ಭಾಗಿಯಾಗಿ ಮೂಲಕ ಎರಡೂ ಪಕ್ಷಗಳು ತಳಮಟ್ಟದ ಕಾರ್ಯಕರ್ತರು ಮತ್ತು ನಾಯಕರಿಗೆ ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ.
ನಾವು ಜಾತ್ಯಾತೀತ ನೆಲೆಗಟ್ಟಿನಲ್ಲಿ ಇಲ್ಲಿ ಸೇರಿದ್ದು ಈ ದೇಶ ಜಾತ್ಯಾತೀತ, ಎಲ್ಲ ಧರ್ಮದವರಿಗೆ ಸೇರಿದ್ದು ಎನ್ನುವುದನ್ನು ತೋರಿಸಲು ಒಂದಾಗಿದ್ದೇವೆ. ಬಿಜೆಪಿ 125 ವರ್ಷ ಇತಿಹಾಸವಿರುವ ಕಾಂಗ್ರೆಸ್ ಪಕ್ಷವನ್ನು ಹೀನಾಯವಾಗಿ ಟೀಕಿಸುತ್ತಿದೆ ಎಂದು ಎಚ್.ಡಿ.ದೇವೇಗೌಡ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮಹಾನ್ ಸುಳ್ಳುಗಾರ, ಸದಾ ಸುಳ್ಳನ್ನೇ ಹೇಳಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದರು.
ಎಲ್ಲಾ 28 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಯವರಿಗೆ ನಾವು ಪಾಠ ಕಲಿಸಬೇಕಾಗಿದೆ ಎಂದು ಸಿದ್ದರಾಮಯ್ಯ ಗುಡುಗಿದರು.
ಇಬ್ಬರ ಗುರಿಯೂ ಬಿಜೆಪಿಯನ್ನು ಸೋಲಿಸುವುದು ಆಗಬೇಕು ಎಂದು ರಾಹುಲ್ ಗಾಂಧಿ ಕಾರ್ಯಕರ್ತರಿಗೆ ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಯೋಜನೆಗಳನ್ನು ಶ್ರೀಮಂತರಿಗೆ ನೀಡಿದ್ದಾರೆ. ರಫೇಲ್ ಒಪ್ಪಂದವನ್ನು ಅಂಬಾನಿಗೆ ನೀಡಿದ್ದಾರೆ. ನಾವು ಬಡವರು, ರೈತರ ಪರವಾಗಿದ್ದೇವೆ ಎಂದು ರಾಹುಲ್ ತೀವ್ರ ವಾಗ್ಧಾಳಿ ನಡೆಸಿದರು.