ಚೀನವನ್ನು ತೊರೆಯುತ್ತಿರುವ ಅಂತಾರಾಷ್ಟ್ರೀಯ ಕಂಪನಿಗಳನ್ನು ಭಾರತಕ್ಕೆ ಕರೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಹೂಡಿಕೆದಾರರನ್ನು ಗುರುತಿಸಿ ಅಂತವರಲ್ಲಿ ಚೀನಾದಿಂದ ಬಂಡವಾಳ ಹೂಡಿಕೆ ಹಿಂತೆಗೆಯುತ್ತಿರುವ ಉದ್ದಿಮೆದಾರರನ್ನು ಭಾರತಕ್ಕೆ ಸೆಳೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ನಿರ್ಮಲಾ ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಸದ್ಯ ಚೀನಾದಲ್ಲಿ ಹೂಡಿಕೆ ಮಾಡಿ ಅಲ್ಲಿ ತಮ್ಮ ಉತ್ಪಾದನಾ ಶಾಖೆಗಳನ್ನು ಹೊಂದಿರುವ ಬಹಳಷ್ಟು ಬಹುರಾಷ್ಟ್ರೀಯ ಕಂಪೆನಿಗಳು ಇದಿಗ ವಿಯೆಟ್ನಾಂನತ್ತ ಮುಖ ಮಾಡುತ್ತಿವೆ. ಆದರೆ ಅಂತಹ ಹೂಡಿಕೆದಾರರಿಗೆ ಭಾರತದಲ್ಲಿ ಪೂರಕ ವಾತಾವರಣ ಇದೆ ಎಂದು ಮನವರಿಕೆ ಮಾಡಿ ಅವರನ್ನು ನಮ್ಮ ದೇಶದತ್ತ ಆಕರ್ಷಿಸುವ ಕೆಲಸ ತುರ್ತಾಗಿ ಮಾಡಲಿದ್ದೇವೆ, ಇದಕ್ಕಾಗಿ ನೀಲಿ ನಕ್ಷೆಯೊಂದನ್ನು ಸಹ ತಯಾರಿಸಿಕೊಂಡಿದ್ದೇವೆ ಎಂದು ಕೇಂದ್ರ ಹಣಕಾಸು ಸಚಿವರು ಬಂಡವಾಳ ಹೂಡಿಕೆ ಆಕರ್ಷಣೆ ಕುರಿತಾದ ಮಾಹಿತಿಯನ್ನು ನೀಡಿದರು.
ಇಷ್ಟು ಮಾತ್ರವಲ್ಲದೇ ಭಾರತ ಮತ್ತು ಚೀನ ಭೌಗೋಳಿಕವಾಗಿ ಹೇಗೆ ಸಾಮತ್ಯೆಯನ್ನು ಹೊಂದಿವೆ ಎಂಬುದನ್ನು ಈ ಬಹುರಾಷ್ಟ್ರೀಯ ಕಂಪೆನಿಗಳಿಗೆ ಮನವರಿಕೆ ಮಾಡಿಕೊಡುವ ಕಾರ್ಯವನ್ನೂ ನಾವು ಮಾಡಲಿದ್ದೇವೆ ಎಂದು ಅವರು ಹೇಳಿದರು.
ಎಲೆಕ್ಟ್ರಾನಿಕ್ಸ್, ಲಿಥಿಯಂ ಅಯಾನ್ ಬ್ಯಾಟರಿಗಳು ಮತ್ತು ಸೆಮಿ ಕಂಡಕ್ಟರ್ ಗಳನ್ನು ತಯಾರಿಸುವ ಕಂಪನಿಗಳನ್ನು ಭಾರತದತ್ತ ಆಕರ್ಷಿಸಿ ಅವುಗಳ ಉತ್ಪಾದನಾ ಘಟಕಗಳನ್ನು ವಿವಿಧ ರಾಜ್ಯಗಳಲ್ಲಿ ಸ್ಥಾಪಿಸುವಂತೆ ಮಾಡುವುದು ನಮ್ಮ ಪ್ರಥಮ ಆದ್ಯತೆಯಾಗಿದೆ ಎಂದು ಸಚಿವರು ತಿಳಿಸಿದರು. ಇದರಿಂದ ಒಂದಷ್ಟು ಪ್ರಮಾಣದ ಸ್ಥಳೀಯ ಉದ್ಯೋಗ ಸೃಷ್ಟಿಯಾಗುವ ಭರವಸೆಯನ್ನೂ ಸಹ ಅವರು ವ್ಯಕ್ತಪಡಿಸಿದರು.
ದೇಶದ ಜಿಡಿಪಿ ಕುಸಿತ ಮತ್ತು ಆರ್ಥಿಕ ಹಿನ್ನಡೆಗೆ ಮದ್ದರೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಕಾಪೋರೇಟ್ ತೆರಿಗೆ ದರವನ್ನು ಕಡಿತಗೊಳಿಸಿದ ಬೆನ್ನಲೇ ಆರ್ಥಿಕ ವಲಯದ ಬಲವರ್ಧನೆಗಾಗಿ ಮಹತ್ತರವಾದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದು, ಇದರಲ್ಲಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು ಕಾರ್ಯತಂತ್ರ ನಡೆಸುತ್ತಿರುವುದೂ ಸಹ ಪ್ರಮುಖ ಅಂಶವಾಗಿದೆ.