ಒಂದು ಕಾಲದಲ್ಲಿ ಭಾರತ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದರೆ ಅದೇ ಸಾಧನೆ ಎನ್ನಲಾಗುತ್ತಿತ್ತು. ಈಗಿನ ಭಾರತದ ಸ್ಥಿತಿಯೇ ಬೇರೆ ಇದೆ! ಈಗ ಪದಕ ಗೆಲ್ಲುವುದು ಕಷ್ಟ ಅನ್ನುವ ಸ್ಥಿತಿ ಇಲ್ಲ. ಈಗಿನ ಸವಾಲು ಭಾರತಕ್ಕೆ ಒಲಿಂಪಿಕ್ಸ್ ಒಂದನ್ನು ಆಯೋಜಿಸಲು ಸಾಧ್ಯವೇ ಎನ್ನುವುದು. ಕೆಲವು ವರ್ಷಗಳಿಂದಲೇ ಭಾರತ ಒಲಿಂಪಿಕ್ಸ್ ಆತಿಥ್ಯಕ್ಕೆ ಬಿಡ್ ಸಲ್ಲಿಸುತ್ತದೆ ಎಂಬ ಮಾತುಗಳು ಕೇಳಿ ಬರುತ್ತಲೇ ಇದ್ದವು. ಹಲವು ಬಾರಿ ಅದು ಹುಸಿಯಾದ ಅನಂತರ ಇವೆಲ್ಲ ಬರೀ ವದಂತಿಗಳು ಎಂದು ಎಲ್ಲರೂ ಸುಮ್ಮನಾದರು.
ಆದರೆ ಇತ್ತೀಚೆಗೆ ಚೀನದಲ್ಲಿ ನಡೆದ ಏಷ್ಯಾಡ್‌ನಲ್ಲಿ ಭಾರತ 107 ಪದಕಗಳನ್ನು ಗೆಲ್ಲುವುದರೊಂದಿಗೆ ಚಿತ್ರಣವನ್ನೇ ಬದಲಿಸಿದೆ. ಒಲಿಂಪಿಕ್ಸ್ ಆಯೋಜಿಸಲು ಇದು ಸಕಾಲ ಎಂದು ಎಲ್ಲರೂ ಧೈರ್ಯವಾಗಿ ಹೇಳತೊಡಗಿದರು. ಐಒಎ ಅಧ್ಯಕ್ಷೆ ಪಿ.ಟಿ.ಉಷಾ ಅಂತೂ ನೇರವಾಗಿ ಇನ್ನೇನೂ ಸಮಸ್ಯೆಯಿಲ್ಲ ಎಂದರು. ಪ್ರಧಾನಿ ಮೋದಿ ಅವರು, 2036ರಲ್ಲಿ ಒಲಿಂಪಿಕ್ಸ್ ಆಯೋಜನೆಗೆ ಸರ್ವ ಪ್ರಯತ್ನ ನಡೆಸುವುದಾಗಿ ಹೇಳಿದ್ದಾರೆ. ಈಗ ಭಾರತಕ್ಕೆ ಪದಕಗಳನ್ನು ಗೆಲ್ಲಬಲ್ಲೆ ಎನ್ನುವುದು ಖಚಿತವಾಗಿದೆ. ಆದರೆ ವಿಷಯ ಬೇರೆ ಇದೆ. ಒಲಿಂಪಿಕ್ಸ್ ಅನ್ನುವುದು ಹುಡುಗಾಟದ ವಿಷಯವಲ್ಲ. ಇಡೀ ದೇಶದ ವರ್ಚಸ್ಸನ್ನೇ ಬದಲಿಸುವ ಜಾಗತಿಕ ಕೂಟ. ಹೇಗೆಯೇ ನೋಡಿದರೂ 2, 3 ಲಕ್ಷ ಕೋಟಿ ರೂ. ಹೂಡಿಕೆ ಅಗತ್ಯವಿದೆ, ಇನ್ನೂ ಜಾಸ್ತಿಯಾಗಬಹುದು. ಮೂಲ ಸೌಕರ್ಯ ವೃದ್ಧಿ ಮಾಡಬೇಕು, ನಾಗರಿಕರ ವರ್ತನೆಗಳಲ್ಲಿ ಹಲವು ಪರಿವರ್ತನೆ ಮಾಡಬೇಕು, ಬಹುಮಾದರಿಯ ಕ್ರೀಡೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಸ್ವಲ್ಪವೂ ಕುಂದಿಲ್ಲದೇ ಮಾಡಬೇಕು.
ಈಗಿನ ಭಾರತದ ನಾಯಕತ್ವವನ್ನು ಗಮನಿಸಿದಾಗ ಅದು ಕಷ್ಟವೆಂದು ಹೇಳಲಾಗದು. ಹಣವೊದಗಿಸುವ, ವ್ಯವಸ್ಥೆ ಮಾಡುವ ಎಲ್ಲ ಸಾಮರ್ಥ್ಯವಿದೆ. ಮುಖ್ಯವಾಗಿ ಆಗಬೇಕಾಗಿರುವುದು ಭ್ರಷ್ಟಾಚಾರವನ್ನು ತಡೆಯುವುದು. 2010ರಲ್ಲಿ ಭಾರತದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ನಡೆದಾಗ ಸಾವಿರಾರು ಕೋಟಿ ರೂ. ಹಗರಣ ನಡೆದು ಮಾನ ಹರಾ ಜಾಗಿತ್ತು. ಆಗಿನ ಐಒಎ ಅಧ್ಯಕ್ಷ ಸುರೇಶ್ ಕಲ್ಮಾಡಿ ಜೈಲುಪಾಲಾಗಿದ್ದರು. ಉದ್ಘಾಟನ ಸಮಾರಂಭದ ಬಗ್ಗೆಯೇ ಅಪಹಾಸ್ಯಗಳು ಕೇಳಿಬಂದಿದ್ದವು. ಈ ಬಾರಿ ಹಾಗಾಗುವುದಿಲ್ಲ ಎಂಬ ಬಲವಾದ ವಿಶ್ವಾಸ ಹುಟ್ಟಿದೆ. ಇದಕ್ಕೆ ಕಾರಣ ವರ್ಷಪೂರ್ತಿ 20 ರಾಷ್ಟ್ರಗಳ ಜಿ20 ಸಮಾವೇಶವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದು. ಮುಕ್ತಾಯ ಸಮಾರಂಭದಲ್ಲಿ ಒಮ್ಮತವೇ ಬರಲು ಸಾಧ್ಯವಿಲ್ಲ ಎಂಬ ಸ್ಥಿತಿಯಿದ್ದಾಗಲೂ ಎಲ್ಲ ರಾಷ್ಟ್ರಗಳು ಸರ್ವ ಸಮ್ಮತ ನಿರ್ಧಾರಕ್ಕೆ ಬಂದವು. ಅದು ಪ್ರಸ್ತುತ ಭಾರತದ ವರ್ಚಸ್ಸಿನ ಸಂಕೇತ ಎನ್ನುವುದು ಖಚಿತ.
ಮೊದಲೇ ಹೇಳಿದಂತೆ ಕಾಮನ್‌ವೆಲ್ತ್, ಏಷ್ಯಾಡ್‌ನಂಥ ಕ್ರೀಡೆ ಆಯೋಜಿಸಿರುವ ಭಾರತಕ್ಕೆ ಒಲಿಂಪಿಕ್ಸ್ ಆಯೋಜನೆ ಮಾಡುವುದು ಕಷ್ಟವಾಗಲ್ಲ. ಆದರೂ ಭಾರತೀಯ ಕ್ರೀಡಾ ಸಂಸ್ಥೆಗಳು ಒಂದಿಲ್ಲೊಂದು ವಿವಾದ, ಸಮಸ್ಯೆಗಳಿಂದ ನರಳಾಡುತ್ತಿದ್ದು, ಇದರಿಂದ ಹೊರಬರಬೇಕಾಗಿವೆ. ಸದ್ಯ ಭಾರತೀಯ ಕುಸ್ತಿ ಒಕ್ಕೂಟ ಸಮಸ್ಯೆಯಲ್ಲಿದೆ. ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಕೂಡ ವಿವಾದಕ್ಕೆ ಹೊರತಾಗಿಲ್ಲ. ಇದರ ಚುನಾವಣೆ ವಿಚಾರದಲ್ಲಿ ಕಳೆದ ವರ್ಷ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ ಕೆಲವು ಅವಧಿಗೆ ಅಮಾನತು ಮಾಡಿತ್ತು. ಹೀಗಾಗಿ ಭಾರತದಲ್ಲಿರುವ ಕ್ರೀಡಾ ಸಂಸ್ಥೆಗಳು ರಾಜಕೀಯದಿಂದ ಹೊರಬಂದು ಕಾರ್ಯನಿರ್ವಹಿಸಬೇಕು. ಜತೆಗೆ ವಿವಾದಗಳಿಂದಲೂ ಮುಕ್ತವಾಗಬೇಕು. ಆಗಷ್ಟೇ ಒಲಿಂಪಿಕ್ಸ್ ಆಯೋಜನೆ ಸುಲಭವಾಗುತ್ತದೆ.