Advertisement

Diabetics: ಮಧುಮೇಹಿಗಳ ರಾಷ್ಟ್ರವಾಗುತ್ತಿದೆ ಭಾರತ 

09:48 AM Jun 13, 2023 | Team Udayavani |
ಆಧುನಿಕ ಜೀವನ ಶೈಲಿ, ಜಂಕ್‌ ಫ‌ುಡ್‌ ಸೇವನೆ,  ವ್ಯಾಯಾಮದ  ಕೊರತೆ, ಒತ್ತಡದ ಬದುಕು ಇವೆಲ್ಲವುಗಳನ್ನು ನಿಭಾಯಿಸುವಲ್ಲಿ ವಿಫ‌ಲವಾಗಿರುವ ಭಾರತವು ಇಂದು ಮಧುಮೇಹಿಗಳ ರಾಷ್ಟ್ರವಾಗುತ್ತಿದೆ. ದಿ ಲ್ಯಾನ್‌ಸೆಟ್‌ ಜರ್ನಲ್‌ ಇತ್ತೀಚಿಗೆ ಪ್ರಕಟಿಸಿದ ಸಮೀಕ್ಷೆಯ ವರದಿಯಲ್ಲಿ ಈ ಮಾಹಿತಿ ಹೊರಬಿದ್ದಿದೆ. ಭಾರತದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಿದ ಆರೋಗ್ಯ ಸಮೀಕ್ಷೆಯಲ್ಲಿ ದೇಶದಲ್ಲಿ ಮಧುಮೇಹ ಸಮಸ್ಯೆಗೆ ಒಳಗಾಗಿರುವವರ  ಸಂಖ್ಯೆ ಅಧಿಕವಾಗಿದ್ದು  ಈ ನಿಟ್ಟಿನಲ್ಲಿ ಶೀಘ್ರವಾಗಿ ಕ್ರಮ ತೆಗೆದು ಕೊಳ್ಳಬೇಕು ಎಂದು  ವರದಿ ಹೇಳಿದೆ. ಏನಿದು ವರದಿ ? ವರದಿಯಲ್ಲೇನಿದೆ? ಎಂಬ ಮಾಹಿತಿ ಇಲ್ಲಿದೆ.
ಯಾರ ಸಮೀಕ್ಷೆ ?
ಮದ್ರಾಸ್‌ ಡಯಾಬಿಟಿಕ್ಸ್‌ ರಿಸರ್ಚ್‌ ಫೌಂಡೇಶನ್‌ (ಎಂಡಿಆರ್‌ಆಫ್ ), ಇಂಡಿಯನ್‌ ಕೌನ್ಸಿಲ್‌ ಆಫ್ ಮೆಡಿಕಲ್‌ ರಿಸರ್ಚ್‌ (ಐಸಿಎಂಆರ್‌), ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಜಂಟಿಯಾಗಿ ಮಧುಮೇಹ ಹಾಗೂ ಕ್ರೋನಿಕ್‌ ನಾನ್‌ ಕಮ್ಯುನಿಕೇಬಲ್‌ ಡಿಸೀಸ್‌ನ (ಎನ್‌ಸಿಡಿ ) ಮೇಲೆ ಕೈಗೊಂಡ ದೇಶದ ಅತೀ ದೊಡ್ಡ ಸಮೀಕ್ಷೆ ಇದಾಗಿದೆ.
ಗೋವಾದಲ್ಲಿ ಅಧಿಕ 
ಈ ಸಮೀಕ್ಷೆಯ ಪ್ರಕಾರ 2019-2021ರ ನಡುವೆ ಭಾರತದಲ್ಲಿ 101 ಮಿಲಿಯನ್‌ ಮಧುಮೇಹ  ಹಾಗೂ 136 ಮಿಲಿಯನ್‌ ಜನರು ಪೂರ್ವ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ.  ರಾಜ್ಯವಾರು ಸಮೀಕ್ಷೆಯಲ್ಲಿ ಗೋವಾ ಗರಿಷ್ಠ ಅಂದರೆ ಶೇ.26.4 ರಷ್ಟು ಮಧುಮೇಹಿಗಳನ್ನು ಒಳಗೊಂಡಿದ್ದು ಮೊದಲ ಸ್ಥಾನದಲ್ಲಿದ್ದರೆ, ಅನಂತರದ ಸ್ಥಾನದಲ್ಲಿ  ಪುದುಚೇರಿ, ಕೇರಳ (ಶೇ.25) ರಾಜ್ಯಗಳಿವೆ. ಇನ್ನು ಕನಿಷ್ಠ ಅಂದರೆ ಶೇ.4.8ರಷ್ಟು ಮಧುಮೇಹಿಗಳನ್ನು ಹೊಂದಿರುವ ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ. ವರದಿಯ ಪ್ರಕಾರ ಭಾರತದ ಗ್ರಾಮೀಣ ಭಾಗದಲ್ಲಿ ಮುಂದಿನ 5 ವರ್ಷಗಳಲ್ಲಿ ಈ ಪರಿಸ್ಥಿತಿ ತೀವ್ರಸ್ತರಕ್ಕೆ ಹೋಗಲಿದೆ ಎಂದು ಎಚ್ಚರಿಸಿದೆ. ಜತೆಗೆ ವಿಶ್ವಸಂಸ್ಥೆಯು ಕುರುಡುತನ, ಕಿಡ್ನಿ ವೈಫ‌ಲ್ಯ, ಹೃದಯಾಘಾತ, ಪಾರ್ಶ್ವವಾಯು ಅಂತಹ ಸಮಸ್ಯೆಗಳಿಗೆ ಮಧುಮೇಹವೇ ಮೂಲ ಕಾರಣವಾಗಬಹುದು ಎಂದು ಎಚ್ಚರಿಸಿದೆ.
ಮಧುಮೇಹ ದೊಂದಿಗೆ ದೇಶದಲ್ಲಿ 315 ಮಿಲಿಯನ್‌ ಮಂದಿ ಅಧಿಕ ರಕ್ತದೊತ್ತಡ, 254 ಮಿಲಿಯನ್‌ ಬೊಜ್ಜಿನ ಹಾಗೂ 351 ಮಿಲಿಯನ್‌ ಹೊಟ್ಟೆಯ ಬೊಜ್ಜಿನ ಸಮಸ್ಯೆಗೆ ಒಳಗಾಗಿದ್ದಾರೆ ಅಲ್ಲದೇ 213 ಮಿಲಿಯನ್‌ ಜನರು ಹೈಪರ್‌ಕೊಲೆಸ್ಟ್ರಾಲ್‌ ಹಾಗೂ 185 ಮಿಲಿಯನ್‌ ಮಂದಿ ಅಧಿಕ ಎಲ್‌ಡಿಎಲ್‌ ಕೊಲೆಸ್ಟ್ರಾಲ್‌ನ್ನು ಹೊಂದಿದ್ದಾರೆ ಎಂದು ವರದಿಯಲ್ಲಿದೆ.
ಮಧುಮೇಹ ಹಾಗೂ ಎನ್‌ಸಿಡಿ 
ಸಮಸ್ಯೆಯು ದೇಶದಲ್ಲಿ ಊಹಿಸಿದ್ದಕ್ಕಿಂತ ಹೆಚ್ಚಿದ್ದು, ಕೆಲವು ರಾಜ್ಯಗಳಲ್ಲಿ ಇದು ಅಧಿಕ ವಾಗುವ ಲಕ್ಷಣಗಳಿವೆ ಎಂದು ವರದಿ ಉಲ್ಲೇಖೀಸಿದೆ. ಈ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ರಾಜ್ಯವಾರು ಯೋಜನೆಗಳನ್ನು ಶೀಘ್ರವಾಗಿ ರೂಪಿಸುವ ಅಗತ್ಯವಿದೆ ಎಂದು ಸಂಶೋಧನಕಾರರು ಅಭಿಪ್ರಾಯಪಟ್ಟಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next