Advertisement

ಎಲೆಕ್ಟ್ರಾನಿಕ್‌ ಸಮರ ವ್ಯವಸ್ಥೆಯಲ್ಲಿ ಭಾರತ ಮುಂದೆ

03:17 PM Feb 15, 2018 | |

ಬೆಂಗಳೂರು: ರಕ್ಷಣಾ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಭಾರತ ಎಲೆಕ್ಟ್ರಾನಿಕ್‌ ಸಮರದ ವೃತ್ತಿಪರತೆಯಲ್ಲಿ ವಿಶ್ವದಲ್ಲೇ ಯಶಸ್ವಿ ಹಾಗೂ ಕ್ರಿಯಾಶೀಲ ಬಲವಾಗಿ ಹೊರಹೊಮ್ಮಿದೆ ಎಂದು ಅಮೆರಿಕದ ಅಸೋಸಿಯೇಷನ್‌ ಆಫ್ ಓಲ್ಡ್‌ ಕ್ರೌಸ್‌ (ಎಒಸಿ) ಅಂತಾರಾಷ್ಟ್ರೀಯ ಅಧ್ಯಕ್ಷರಾದ ಲಿಸಾ ಕೆ. ಫ್ರಗ್‌ ಹೇಳಿದರು.

Advertisement

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್‌), ಎಒಸಿ ಸೇರಿದಂತೆ ಇತರೆ ಸಂಸ್ಥೆಗಳು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ “ಎಲೆಕ್ಟ್ರಾನಿಕ್‌ ಸಮರ’ ಕುರಿತ ಐದನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಸಂವಹನ ಕ್ಷೇತ್ರದಲ್ಲಿ ಸುಧಾರಿತ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ, ಸಮನ್ವಯತೆ ಇತರೆ ಯಶಸ್ವಿ ಕಾರ್ಯ ನಿರ್ವಹಣೆಗೂ ಎಲೆಕ್ಟ್ರಾನಿಕ್‌ ತಂತ್ರಜ್ಞಾನದ ಬಳಕೆ ಉಪಯುಕ್ತವೆನಿಸಿದೆ. ಸೇನಾ ಬಲದ ನಾನಾ ವಿಭಾಗಗಳ ಮಾಹಿತಿ ಒಂದೇ ವೇದಿಕೆಯಡಿ ಸಿಗುವ ವ್ಯವಸ್ಥೆ ಕಲ್ಪಿಸುವುದು ಅತ್ಯವಶ್ಯಕವಾಗಿದೆ. ಏಕೆಂದರೆ ಭವಿಷ್ಯದಲ್ಲಿ ಯುದ್ಧ ಸಂಭವಿಸಿದರೆ ಅದು ಎಲೆಕ್ಟ್ರಾನಿಕ್‌ ತಂತ್ರಜ್ಞಾನ ಆಧಾರಿತವಾಗಿದ್ದು, ಎಲ್ಲ ಸೇನಾ ಬಲಗಳ ಮಾಹಿತಿ ಒಂದೇ ವೇದಿಕೆಯಡಿ ಸಿಗುವ ವ್ಯವಸ್ಥೆ ಕಲ್ಪಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಎಲೆಕ್ಟ್ರಾನಿಕ್‌ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಅಗತ್ಯವಿದ್ದು, ಈ ಕ್ಷೇತ್ರದಲ್ಲಿ ವೃತ್ತಿಪರ ಯುವಜನತೆ ತೊಡಗಿಸಿಕೊಳ್ಳಲು ಮುಂದಾಗಬೇಕು. ಆಗ ಇನ್ನಷ್ಟು ವೈವಿಧ್ಯವಾಗಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಬಳಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಬಿಇಎಲ್‌ ಬೆಂಗಳೂರು ಘಟಕದ ವ್ಯವಸ್ಥಾಪಕ ನಿರ್ದೇಶಕರೂ ಆದ ಅಧ್ಯಕ್ಷ ಎಂ.ವಿ.ಗೌತಮ, “ಎಲೆಕ್ಟ್ರಾನಿಕ್‌ ಸಮರ ವ್ಯವಸ್ಥೆಯಲ್ಲಿ ಬಲವರ್ಧನೆ ಸಾಧಿಸುವುದು ಜಗತ್ತಿನ ಎಲ್ಲ ರಾಷ್ಟ್ರಗಳಿಗೂ ಅನಿವಾರ್ಯವಾಗಿದೆ. ಹಾಗೆಯೇ ಈ ಕ್ಷೇತ್ರದಲ್ಲಿ ನಿರಂತರ ಸಂಶೋಧನೆ ಹಾಗೂ ಅನ್ವೇಷಣೆಗೂ ವಿಫ‌ುಲ ಅವಕಾಶವಿದ್ದು, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಿದೆ ಎಂದು
ಹೇಳಿದರು. 

Advertisement

ಎಲೆಕ್ಟ್ರಾನಿಕ್‌ ಸಮರ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದರೆ ಭವಿಷ್ಯದಲ್ಲಿ ಯುದ್ಧ ಸಂಭವಿಸಿದರೂ ಎದುರಿಸಲು ಸಜ್ಜಾಗಲು ನೆರವಾಗುವ ಜತೆಗೆ ನೆರೆಹೊರೆಯ ರಾಷ್ಟ್ರಗಳೊಂದಿಗೆ ಸೌಹಾರ್ದ ಕಾಪಾಡಿ ಕೊಳ್ಳಲು ಸಹಕಾರಿಯಾಗಲಿದೆ. ಸೇನಾಬಲದ ನಾನಾ ವಿಭಾಗಗಳ ಅಗತ್ಯಗಳು ಸಂಕೀರ್ಣವೆನಿಸುವ ಸಂದರ್ಭದಲ್ಲಿ ಪರಸ್ಪರ ಒಗ್ಗೂಡಿಸಲು ಹಾಗೂ ಜಂಟಿ ನಿರ್ವಹಣೆಗೂ ಪೂರಕವಾಗಿರಲಿದೆ ಎಂದು ತಿಳಿಸಿದರು. 

ಪ್ರಧಾನ ಮಂತ್ರಿಗಳ “ಮೇಕ್‌ ಇನ್‌ ಇಂಡಿಯಾ’ ಪರಿಕಲ್ಪನೆಯು ದೇಶೀಯ ಉತ್ಪನ್ನಗಳ ತಯಾರಿಕೆ ಹಾಗೂ ಬಳಕೆಗೂ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ನೀಡಿದೆ. ಬಿಇಎಲ್‌ ಸಂಸ್ಥೆಯು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ಸಂಶೋಧನೆ ಮತ್ತು ಅಭಿವೃದ್ಧಿಗೆ ಕಾಯ್ದಿರಿಸಿರುವ ಅನುದಾನದಲ್ಲಿ ಶೇ.15ರಷ್ಟನ್ನು ಎಲೆಕ್ಟ್ರಾನಿಕ್‌ ಸಮರ ವ್ಯವಸ್ಥೆಗೆ ಮೀಸಲಿರಿಸಿದೆ ಎಂದು ಹೇಳಿದರು. ಎಒಸಿ ಭಾರತ
ಶಾಖೆ ಅಧ್ಯಕ್ಷ ಡಾ.ಯು.ಕೆ.ರೇವಂಕರ್‌, ಸಮ್ಮೇಳನ ತಾಂತ್ರಿಕ ಸಮಿತಿಯ ಜೆ.ಶಂಕರ್‌ರಾವ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next