Advertisement

32 ವರ್ಷಗಳ ಕಾಲ ಸಮ್ಮಿಶ್ರ ಸರಕಾರಗಳ ಪರ್ವ

01:30 AM Jun 08, 2024 | Team Udayavani |

ಪ್ರಸಕ್ತ ಸಂಸತ್‌ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಪೂರ್ಣ ಬಹುಮತ ಬಾರದ ಕಾರಣ ಭಾರತವು 10 ವರ್ಷಗಳ ಬಳಿಕ ಮತ್ತೆ ಸಮ್ಮಿಶ್ರ ಸರಕಾರ ಯುಗಕ್ಕೆ ಕಾಲಿಟ್ಟಿದೆ. ತನ್ನದೇ ಆದ ನಷ್ಟ ಮತ್ತು ಲಾಭಗಳನ್ನು ಹೊಂದಿರುವ ಸಮ್ಮಿಶ್ರ ಸರಕಾರಗಳು ಆಧುನಿಕ ರಾಷ್ಟ್ರಗಳ ಅನಿವಾರ್ಯತೆಯೂ ಹೌದು.

Advertisement

ಭಾರತದ 73 ವರ್ಷಗಳ ಚುನಾವಣ ಇತಿಹಾಸದಲ್ಲಿ ಒಟ್ಟು 32 ವರ್ಷಗಳ ಕಾಲ ಸಮ್ಮಿಶ್ರ ಸರಕಾರಗಳನ್ನು ಕಂಡರೆ, 31 ವರ್ಷಗಳ ಕಾಲವಷ್ಟೇ ಬಹುಮತದ ಸರಕಾರಗಳು ಆಡಳಿತ ನಡೆಸಿವೆ. ಇದೀಗ, 10 ವರ್ಷಗಳ ಬಳಿಕ ಮತ್ತೆ ಭಾರತವು ಸಮ್ಮಿಶ್ರ ಸರಕಾರಕ್ಕೆ ಸಾಕ್ಷಿಯಾಗುತ್ತಿದೆ! 2014 ಮತ್ತು 2019ರ ರೀತಿಯಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತವೆ ಎಂದು ಭಾವಿಸಿದ್ದ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಈ ಬಾರಿ ಮತದಾರರು ಕೇವಲ 240 ಸ್ಥಾನಗಳನ್ನಷ್ಟೇ ನೀಡಿದೆ. ಹಾಗಾಗಿ, ಜೆಡಿಯು ಮತ್ತು ಟಿಡಿಪಿ ಬೆಂಬಲದೊಂದಿಗೆ ಸಮ್ಮಿಶ್ರ ಸರಕಾರ ರಚನೆಯಾಗುತ್ತಿದೆ. “ಸಮ್ಮಿಶ್ರ ಸರಕಾರಗಳ ಸರ್ದಾರ’ ಎನಿಸಿಕೊಂಡವರು ಬಿಜೆಪಿ ದಿಗ್ಗಜ ನಾಯಕ ಅಟಲ್‌ ಬಿಹಾರಿ ವಾಜಪೇಯಿ ಅವರೇ “ಸಮ್ಮಿಶ್ರ ಅಥವಾ ಮೈತ್ರಿ ಧರ್ಮ’ವನ್ನು ಠಂಕಿಸಿದ್ದು. ಬಳಿಕ ಕಾಂಗ್ರೆಸ್‌ ನೇತೃತ್ವದ ಯುಪಿಎ ಕೂಡ ಹತ್ತು ವರ್ಷ ಆಡಳಿತ ನಡೆಸಿತ್ತು. ಈ ಮಧ್ಯೆ, 1989ರಿಂದ 20014ವರೆಗಿನ ಅವಧಿಯನ್ನು ಸಮ್ಮಿಶ್ರ ಸರಕಾರಗಳ ಪರ್ವ ಕಾಲ ಎನ್ನಬಹುದು.ಸಮ್ಮಿಶ್ರ ಸರಕಾರಗಳು ತಮ್ಮದೇ ಲಾಭ ಮತ್ತು ನಷ್ಟಗಳನ್ನು ಹೊಂದಿವೆ. ಅಸ್ಥಿರತೆಯ ಅಪಾಯದ ನಡುವೆಯೂ ಬಲಶಾಲಿ ಮತ್ತು ಪ್ರಗತಿಪರ ಸಮ್ಮಿಶ್ರ ಸರಕಾರಗಳನ್ನು ದೇಶ ಕಂಡಿದೆ.

ಮೊದಲ “ಜನತಾ’ ಸಮ್ಮಿಶ್ರ ಸರಕಾರ
ಭಾರತದಲ್ಲಿ ಸಮ್ಮಿಶ್ರ ಸರಕಾರದ ಇತಿಹಾಸವನ್ನು ಕೆದಕುತ್ತಾ ಹೋದರೆ ಅದು 1977ಕ್ಕೆ ಹೋಗಿ ತಲುಪುತ್ತದೆ. ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ ವಿರುದ್ಧ ಅಂದಿನ ಎಲ್ಲ ವಿಪಕ್ಷಗಳ ಒಗ್ಗೂಡಿದವು ಮತ್ತು ಚುನಾವಣೆಯಲ್ಲಿ ಗೆದ್ದು ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಸರಕಾರ ರಚಿಸಿದವು. ಜನಸಂಘ ಸೇರಿ 11 ಪಕ್ಷಗಳ ಜನತಾ ಪಾರ್ಟಿ ಸರಕಾರ ಇದಾಗಿತ್ತು. ಆದರೆ, 1979ರಲ್ಲಿ ಪತನವಾಯಿತು. ಬಳಿಕ ಇಂದಿರಾ ಬೆಂಬಲದೊಂದಿಗೆ ಚರಣ್‌ ಸಿಂಗ್‌ ಪ್ರಧಾನಿಯಾದರು. ಈ ಸರಕಾರ ಬಾಳಿಕೆ ಬಂದಿದ್ದು ಕೇವಲ 23 ದಿನಗಳು ಮಾತ್ರ! 1980ರಲ್ಲಿ ಮತ್ತೆ ಕಾಂಗ್ರೆಸ್‌ ಏಕಾಂಗಿಯಾಗಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಇದರೊಂದಿಗೆ ಒಂದು ಹಂತದ ಸಮ್ಮಿಶ್ರ ಸರಕಾರದ ಪರ್ವ ಮುಕ್ತಾಯವಾಯಿತು.

ಸಮ್ಮಿಶ್ರ ಸರಕಾರದ ಪರ್ವ ಶುರು!
1989ರಿಂದ 20014ರವರೆಗೆ ಸಮ್ಮಿಶ್ರ ಸರಕಾರಗಳ ಪರ್ವ ಎನ್ನಬಹುದು. ಈ ಅವಧಿಯಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಹಾಗೂ ಡಾ| ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರಕಾರ ಯಶಸ್ವಿಯಾಗಿ ತಮ್ಮ ಅವಧಿಯನ್ನು ಪೂರೈಸಿದ್ದವು. ಉಳಿದಂತೆ ಎಲ್ಲ ಸರಕಾರಗಳು ಅಕಾಲಮೃತ್ಯು ಕಂಡವು! 1984ರ ಚುನಾವಣೆಯಲ್ಲಿ ದಾಖಲೆ 404 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌ 1989ರಲ್ಲಿ 197ಕ್ಕೆ ಕುಸಿಯಿತು. ಜನತಾದಳವು 143 ಸ್ಥಾನಗಳೊಂದಿಗೆ 2ನೇ ಅತಿದೊಡ್ಡ ಪಕ್ಷವಾಗಿತ್ತು. ಬಿಜೆಪಿ ಮತ್ತು ಕಮ್ಯುನಿಸ್ಟ್‌ ಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಜನತಾದಳ ನಾಯಕ ವಿ.ಪಿ.ಸಿಂಗ್‌ ಸರಕಾರ ರಚಿಸಿದರು. ಆಡ್ವಾಣಿ ರಥಯಾತ್ರೆಗೆ ಬಿಹಾರದಲ್ಲಿ ಲಾಲು ಪ್ರಸಾದ್‌ ಯಾದವ್‌ ಬ್ರೇಕ್‌ ಹಾಕಿದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲ ವಾಪಸ್‌ ಪಡೆಯಿತು. ವಿ.ಪಿ.ಸಿಂಗ್‌ ಸರಕಾರ ಪತನವಾಯಿತು. ಬಳಿಕ ದಳದಿಂದ 64 ಸಂಸದರೊಂದಿಗೆ ಬಂದ ಚಂದ್ರಶೇಖರ್‌ 1990ರಲ್ಲಿ ಸಮಾಜವಾದಿ ಜನತಾ ಪಾರ್ಟಿ ಸ್ಥಾಪಿಸಿದರು. ಕಾಂಗ್ರೆಸ್‌ನ ಬೆಂಬಲದೊಂದಿಗೆ 1990ರ ನವೆಂಬರ್‌ 10ರಂದು ಪ್ರಧಾನಿಯಾದರು. ರಾಜೀವ್‌ ಮೇಲೆ ಗೂಢಚರ್ಯ ನಡೆಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಬೆಂಬಲ ವಾಪಸ್‌ ಪಡೆಯಿತು ಮತ್ತು ಸರಕಾರ ಪತನವಾಯಿತು. ಈ ವೇಳೆ, ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 244 ಸ್ಥಾನ ಗೆದ್ದು, ಜನತಾದಳ ಬಾಹ್ಯ ಬೆಂಬಲದೊಂದಿಗೆ ಅಲ್ಪಮತದ ಸರಕಾರವನ್ನೇ ಪ್ರಧಾನಿ ನರಸಿಂಹರಾವ್‌ 5 ವರ್ಷ ಮುನ್ನಡೆಸಿದರು!

ಸಮ್ಮಿಶ್ರ ಸರಕಾರಗಳ ಸರದಾರ ವಾಜಪೇಯಿ!
ಅಟಲ್‌ ಬಿಹಾರಿ ವಾಜಪೇಯಿ ಒಟ್ಟು 3 ಬಾರಿ ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿದ್ದರು ಮತ್ತು ಈ ಪೈಕಿ ಒಮ್ಮೆ ಪೂರ್ಣ ಅವಧಿಯನ್ನು ಪೂರೈಸಿದರು. 1996ರಲ್ಲಿ ಬಿಜೆಪಿಯ ಸದಸ್ಯರು 161 ಜನರಿದ್ದರು. ಆಗ ಅವರು ಕೇವಲ 16 ದಿನವಷ್ಟೇ ಪ್ರಧಾನಿಯಾದರು. ಬಳಿಕ, ಅಕಾಲಿ ದಳ, ಸಮತಾ ಪಾರ್ಟಿ, ಎಐಎಡಿಎಂಕೆ, ಬಿಜೆಡಿ ನೆರವಿನಿಂದ 1998 ಮಾರ್ಚ್‌ನಲ್ಲಿ ಪ್ರಧಾನಿಯಾದರು. ಆದರೆ, ಸಮ್ಮಿಶ್ರ ಸರಕಾರವು 13 ತಿಂಗಳಲ್ಲಿ ಪತನವಾಯಿತು. ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿಯ 182 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು ಮತ್ತು ಯಶಸ್ವಿಯಾಗಿ ಪ್ರಧಾನಿಯಾಗಿ ವಾಜಪೇಯಿ ಅವಧಿಯನ್ನು ಪೂರೈಸಿದರು. ಆ ಮೂಲಕ 5 ವರ್ಷದ ಪೂರೈಸಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಈ ವೇಳೆ ಡಿಎಂಕೆ, ಟಿಎಂಸಿ, ಬಿಜೆಡಿ, ನ್ಯಾಶನಲ್‌ ಕಾನ್ಪರೆನ್ಸ್‌, ಸೇರಿದಂತೆ 13ಕ್ಕೂ ಹೆಚ್ಚು ಪಕ್ಷಗಳು ಸರಕಾರದ ಪಾಲುದಾರವಾಗಿದ್ದವು. ವಿವಿಧ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಹೋಗುವ ಸಕಾರಾತ್ಮಕ ಭಾವನೆ ವಾಜಪೇಯಿ ಅವರಲ್ಲಿತ್ತು.

Advertisement

ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರಕಾರ
2004ರಿಂದ 2014ರವರೆಗೆ ಕಾಂಗ್ರೆಸ್‌ ನೇತೃತ್ವದ ಸಂಯುಕ್ತ ಪ್ರಗತಿಪರ ಕೂಟ(ಯುಪಿಎ) ಯಶಸ್ವಿಯಾಗಿ ಅಧಿಕಾರ ನಡೆಸಿತು. ಯುಪಿಎ -1ರ ಅವಧಿಯಲ್ಲಿ ಅಮೆರಿಕ-ಭಾರತ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಡಾ| ಮನಮೋಹನ್‌ ಸಿಂಗ್‌ ಅವರಿಗೆ ನೀಡಿದ ಬಾಹ್ಯ ಬೆಂಬಲ ವಾಪಸ್‌ ಪಡೆದರೂ ಸಮಾಜವಾದಿ ಪಾರ್ಟಿ, ಬಹುಜನ ಸಮಜ ಪಕ್ಷಗಳ ಬೆಂಬಲದೊಂದಿಗೆ 5 ವರ್ಷ ಪೂರೈಸಿದರು. 2009ರಲ್ಲಿ ಕಾಂಗ್ರೆಸ್‌ ಇನ್ನಷ್ಟು ಮಜಬೂತ್‌ ಆಗಿ ಯುಪಿಎ 2 ನೇತೃತ್ವನ್ನು ವಹಿಸಿತು. ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ 2014ರಲ್ಲಿ ಅಧಿಕಾರ ಕಳೆದುಕೊಂಡಿತು. ಬಿಜೆಪಿ ನೇತೃತ್ವದ ಎನ್‌ಡಿಎ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು.

ಸಮ್ಮಿಶ್ರ ಸರಕಾರದ ಲಾಭಗಳು
ಸರಕಾರದ ನಿರ್ವಹಣೆಯಲ್ಲಿ ವೈವಿಧ್ಯತೆ ಇರುತ್ತದೆ. ಸಮಸ್ಯೆಗಳನ್ನು ನಿರ್ವಹಿಸಲು ವ್ಯಾಪಕ ಚರ್ಚೆಗೆ ಅವಕಾಶವಿರುತ್ತದೆ.

ಭಾರತವು ವೈವಿಧ್ಯಮಯ ರಾಷ್ಟ್ರ. ಹಾಗಾಗಿ, ಮೈತ್ರಿ ಸರಕಾರ ವೈವಿಧ್ಯಮಯ ಮತದಾರರನ್ನು ಪ್ರತಿನಿಧಿಸಲು ಸಾಧ್ಯವಾಗುತ್ತದೆ.

ಇದು ವಿವಿಧ ಪಕ್ಷಗಳ ಮೈತ್ರಿಯ ಸರಕಾರವಾಗಿರುವುದರಿಂದ, ಯಾವುದೇ ನಿರ್ಧಾರ ಕೈಗೊಳ್ಳುವಾಗಲೂ ವ್ಯಾಪಕ ಚರ್ಚೆ ಅಗತ್ಯ. ಹಾಗಾಗಿ, ಒಮ್ಮತದ ಆಧಾರದ ರಾಜಕಾರಣ ಇದರಿಂದ ಸಾಧ್ಯ.

ಮೈತ್ರಿ ಸರಕಾರವು ದೇಶದ ಒಕ್ಕೂಟ ವ್ಯವಸ್ಥೆ ಯನ್ನು ಬಲಪಡಿಸುತ್ತದೆ. ಪ್ರಾದೇಶಿಕ ಬೇಡಿಕೆಗಳಿಗೂ ಮನ್ನಣೆ ದೊರೆಯುತ್ತದೆ.

ಮೈತ್ರಿ ಸರಕಾರವು ನಿರಂಕುಶ ಆಡಳಿತವನ್ನು ತಗ್ಗಿಸುತ್ತದೆ. ಇಲ್ಲಿ ಸರ್ವಾಧಿಕಾರತ್ವಕ್ಕೆ ಜಾಗವಿರುವುದಿಲ್ಲ. ಒಂದೇ ಪಕ್ಷದ ಮರ್ಜಿಗೆ ಅನುಸಾರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ.

ಸಮ್ಮಿಶ್ರ ಸರಕಾರದ ನಷ್ಟಗಳು?
ಸಮ್ಮಿಶ್ರ ಸರಕಾರದ ಮೂಲದಲ್ಲೇ ಅಸ್ಥಿರತೆ ಇರುತ್ತದೆ. ಮೈತ್ರಿ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯವು ಸರಕಾರದ ಪತನಕ್ಕೂ ಕಾರಣವಾಗಬಹುದು.

ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಪ್ರಧಾನಿಯು ಮೈತ್ರಿ ಪಕ್ಷಗಳ ಅಭಿಪ್ರಾಯವನ್ನು ಕೇಳಬೇಕಾಗುತ್ತದೆ.
ಸಮನ್ವಯ ಸಮಿತಿಯು ಸರಕಾರಕ್ಕಿಂತಲೂ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಅದು ಒಂದು ರೀತಿಯಲ್ಲಿ “ಸೂಪರ್‌ ಸಚಿವ ಸಂಪುಟ’ ರೀತಿಯಲ್ಲಿ ಕೆಲಸ ಮಾಡುತ್ತದೆ.

ಚಿಕ್ಕ ಚಿಕ್ಕ ಪಕ್ಷಗಳು ಕಿಂಗ್‌ಮೇಕರ್‌ ರೀತಿಯಲ್ಲಿ ವರ್ತಿಸ ತೊಡಗುತ್ತವೆ ಮತ್ತು ಹೆಚ್ಚು ಚೌಕಾಶಿ ರಾಜಕಾರಣ ಮಾಡುತ್ತವೆ. ದೇಶದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಿನ್ನಡೆಯಾಗುತ್ತದೆ.

ಸರಕಾರದ ಮಟ್ಟದಲ್ಲಿ ರಾಷ್ಟ್ರ ಮಟ್ಟಕ್ಕಿಂತಲೂ ಪ್ರಾದೇಶಿಕ ಮಟ್ಟದ ಕಾರ್ಯಕ್ರಮಗಳು ಹೆಚ್ಚು ಆದ್ಯತೆ ದೊರೆಯಲಾರಂಭಿಸುತ್ತದೆ.

ಮಲ್ಲಿಕಾರ್ಜುನ ತಿಪ್ಪಾರ

Advertisement

Udayavani is now on Telegram. Click here to join our channel and stay updated with the latest news.

Next