Advertisement

ಅತಂತ್ರ ಸ್ಥಿತಿಯಲ್ಲಿ ಅಮಾಸೆಬೈಲು ಸೋಲಾರ್‌ ಗ್ರಾಮ

08:15 AM Jun 04, 2018 | |

ಕುಂದಾಪುರ: ದೇಶದ ಮೊದಲ ಸೋಲಾರ್‌ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕುಂದಾಪುರ ತಾಲೂಕಿನ ಅಮಾಸೆಬೈಲು ಈಗ ಅತಂತ್ರವಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ಗ್ರಾಮದಲ್ಲಿ ಕತ್ತಲು ಕವಿಯುವ ಆತಂಕವಿದೆ. ಮಹತ್ವಾಕಾಂಕ್ಷೆಯ ಯೋಜನೆಯೊಂದು ಹಳ್ಳ ಹಿಡಿಯುತ್ತಿದೆ ಹಾಗೂ ಇತರ ಗ್ರಾಮಗಳು ಇದನ್ನು ಮಾದರಿಯಾಗಿ ಸ್ವೀಕರಿಸಲು ಹಿಂದೇಟು ಹಾಕುವಂತಾಗಿದೆ. ಇದಕ್ಕೆಲ್ಲ ಕಾರಣ ಕೇಂದ್ರ ಸರಕಾರ ಮಂಜೂರಾದ 38 ಲಕ್ಷ ರೂ.ಗಳನ್ನು ನೀಡದೆ ಸತಾಯಿಸುತ್ತಿರು ವುದು. ಯೋಜನೆಗೆ ಕೇಂದ್ರದಿಂದ ಅಸಹಕಾರ ಉಂಟಾಗಿರುವ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯಲಾಗಿದೆ.

Advertisement

ಮೊದಲ ಗ್ರಾಮ
ನಕ್ಸಲ್‌ ಬಾಧಿತ ಪ್ರದೇಶ ಎಂಬ ಹಣೆಪಟ್ಟಿಯ ಅಮಾಸೆಬೈಲಿನ 2,150 ಮನೆಗಳ ಪೈಕಿ ವಿದ್ಯುತ್‌ ಸೌಕರ್ಯ ಇಲ್ಲದ 1,600 ಮನೆಗಳಿಗೆ ಸೋಲಾರ್‌ ದೀಪ ಅಳವಡಿಸಲಾಗಿದೆ. 2012ರಲ್ಲಿ ವಿದ್ಯುತ್ಛಕ್ತಿ ಕೊರತೆಯ ಗ್ರಾಮೀಣ ಪ್ರದೇಶಗಳಿಗೆ ಕೇಂದ್ರದಿಂದ ಎಂಎನ್‌ಆರ್‌ಇ (ಮಿನಿಸ್ಟ್ರಿ ಆಫ್ ನ್ಯೂ ಆ್ಯಂಡ್‌ ರಿನಿವೆಬಲ್‌ ಎನರ್ಜಿ ) ಸಬ್ಸಿಡಿ ಮೂಲಕ ಸೋಲಾರ್‌ ದೀಪ ಹಾಕುವ ಯೋಜನೆ ಬಂತು. ಇದರ ಸದ್ಬಳಕೆಗೆ ಅಮಾಸೆ ಬೈಲು ಚಾರಿಟೆಬಲ್‌ ಟ್ರಸ್ಟ್‌ ಮುಂದಾಯಿತು. ಅಧ್ಯಕ್ಷ, ಮಾಜಿ ಶಾಸಕ ಎ.ಜಿ. ಕೊಡ್ಗಿ ಅವರು 2.13 ಕೋ.ರೂ.ಗಳ ಯೋಜನಾ ರೂಪುರೇಷೆ ತಯಾರಿಸಿ ಕ್ರೆಡೆಲ್‌ (ಕೆಆರ್‌ಇಡಿಎಲ್‌- ಕರ್ನಾಟಕ ರಿನಿವೆಬಲ್‌ ಎನರ್ಜಿ ಡೆವಲಪ್‌ಮೆಂಟ್‌ ಲಿ.) ಮೂಲಕ ಪ್ರಸ್ತಾವನೆ ಕಳುಹಿಸಿ ದರು. 2014ರಲ್ಲಿ ಕೇಂದ್ರದಿಂದ ಶೇ.30 (ಎಂಎನ್‌ಆರ್‌ಇ) ಮತ್ತು ರಾಜ್ಯದಿಂದ ಶೇ. 20 (ಕೆಆರ್‌ಇಡಿಎಲ್‌) -ಹೀಗೆ ಒಟ್ಟು ಶೇ.50 ನೆರವಿಗೆ ಅನುಮೋದನೆ ದೊರೆಯಿತು. 2016ರಲ್ಲಿ ಅನುಷ್ಠಾನಕ್ಕೆ ಸಿದ್ಧವಾಗಿ 2017ರಲ್ಲಿ ಪೂರ್ಣಗೊಂಡು ಉದ್ಘಾಟನೆಯಾಯಿತು.

ಉಳಿಕೆ ಮೊತ್ತ  ನಿಯಮದಂತೆ ಸರಕಾರದಿಂದ ಬರುವ ಶೇ. 50 ಅಲ್ಲದೆ ಉಳಿಕೆ ಮೊತ್ತ ಫ‌ಲಾನುಭವಿಗಳು ಭರಿಸಬೇಕಿತ್ತು. ಆದರೆ 1.06 ಕೋ.ರೂ. ಹಾಕುವಷ್ಟು ಊರವರ ಬಳಿ ಇಲ್ಲದ ಕಾರಣ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಾಯಿತು. ಅಂದಿನ ಉಡುಪಿ ಜಿಲ್ಲಾಧಿಕಾರಿ ನಕ್ಸಲ್‌ ಪ್ರದೇಶಾಭಿವೃದ್ಧಿಗೆ ಬಂದ 25 ಲಕ್ಷ ರೂ. ಅನುದಾನವನ್ನು ನೀಡಿದರು. ಫ‌ಲಾನುಭವಿಗಳು 3 ಸಾವಿರ ರೂ.ಗಳಂತೆ ಭರಿಸಿದರು. ಶಾಸಕರಾಗಿದ್ದ ಗೋಪಾಲ ಪೂಜಾರಿ, ವಿ.ಪ. ಸದಸ್ಯರಾದ ಕ್ಯಾ| ಗಣೇಶ್‌ ಕಾರ್ಣಿಕ್‌, ಪ್ರತಾಪಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ ತಲಾ 5 ಲಕ್ಷ ರೂ., ಸಂಸದೆ  ಶೋಭಾ ಕರಂದ್ಲಾಜೆ 2 ಲಕ್ಷ ರೂ. ಅನುದಾನ ನೀಡಿದರು. ಸೆಲ್ಕೋ ಕಂಪೆನಿಯು 497 ಮನೆಗಳಿಗೆ 2 ದೀಪಗಳ ಸಂಪರ್ಕ, 1 ಸಾವಿರ ಮನೆ
ಗಳಿಗೆ 4 ದೀಪಗಳ ಸಂಪರ್ಕ, 20 ಬೀದಿ ದೀಪಗಳನ್ನು ಅಳವಡಿಸಿತು. ಅಮಾಸೆ ಬೈಲು ಟ್ರಸ್ಟ್‌ ಮೂಲಕ 51 ಮನೆಗಳಿಗೆ, ಪೇಜಾವರ ಮಠದ ಸಹಯೋಗದಲ್ಲಿ 1 ಚರ್ಚ್‌, 32 ದೇವಸ್ಥಾನಗಳಿಗೆ ಉಚಿತವಾಗಿ ನೀಡಲಾಯಿತು. 750 ಮನೆಗಳಿಗೆ ಧರ್ಮಸ್ಥಳ ಯೋಜನೆ ಮೂಲಕ ಬೆಳಕು ಹರಿಸಲು ಆರ್ಥಿಕ ನೆರವು ದೊರೆಯಿತು.

ಸರಕಾರದಿಂದ ಬಂದಿಲ್ಲ
ಯೋಜನೆ ಅಮಾಸೆಬೈಲು ಪಂಚಾಯತ್‌ ಮೂಲಕ ಅನುಷ್ಠಾನವಾಗಿದ್ದು, ಎಲ್ಲ ಮನೆಗಳಿಗೆ ಸೋಲಾರ್‌ ಅಳವಡಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಒಪ್ಪಂದದಂತೆ 1.06 ಕೋ.ರೂ. ನೀಡಬೇಕಿತ್ತು. ಅನಂತರದ ದಿನದಲ್ಲಿ ಮಾತು ಬದಲಿಸಿದ ಅಧಿಕಾರಿಗಳು ಕೇಂದ್ರದಿಂದ ಶೇ. 30ರಷ್ಟು ಅನುದಾನ ನೀಡಲು ನಿರಾಕರಿಸಿ, ಒಟ್ಟು 80 ಲಕ್ಷರೂ. ಮಾತ್ರ ನೀಡುವುದಾಗಿ ಹೇಳಿದರು. ಆದರೆ ಅದನ್ನೂ ಪೂರ್ಣ ನೀಡದೆ 38 ಲಕ್ಷ ರೂ. ಬಾಕಿ ಇರಿಸಿಕೊಳ್ಳಲಾಗಿದೆ. ಅನುಷ್ಠಾನದ ಬಳಿಕ 5 ವರ್ಷ ನಿರ್ವಹಣೆ ಮಾಡಬೇಕಾದ ಸೆಲ್ಕೋ ಸಂಸ್ಥೆಗೆ ಒಟ್ಟು 51 ಲಕ್ಷ ರೂ. ಪಾವತಿಗೆ ಬಾಕಿಯಿದೆ. ಒಪ್ಪಂದದಂತೆ ಕೇಂದ್ರ 64,17,090 ರೂ. ನೀಡಬೇಕಿದ್ದು, ಕೊಟ್ಟದ್ದು 25,83,600 ರೂ. ಮಾತ್ರ. ರಾಜ್ಯ ತನ್ನ ಪಾಲು 43,29,300 ರೂ.  ಪೈಕಿ 42,78,060 ರೂ. ನೀಡಿದೆ. ಕೇಂದ್ರ ಸರಕಾರದಿಂದ ಮೊದಲ ಕಂತಿನಲ್ಲಿ 4.4 ಲಕ್ಷ ರೂ., ಎರಡನೇ ಹಂತದಲ್ಲಿ 13.74 ಲಕ್ಷ ರೂ., ಮೂರನೇ ಹಂತದಲ್ಲಿ 20.6 ಲಕ್ಷ ರೂ. ಬಾಕಿ ಇದೆ.

ಮೋದಿಗೆ ಪತ್ರ
ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ಚುನಾವಣಾ ಸಂದರ್ಭ ಕರ್ನಾಟಕದ ಕುಂದು ಕೊರತೆ ಬಗ್ಗೆ ಮಾತಾಡಿದ್ದೀರಿ. ಆದರೆ ನಿಮ್ಮದೇ ಸರಕಾರದ ನ್ಯೂನತೆ ಕುರಿತು ಹೇಳಲು ನೋವಾಗುತ್ತದೆ. ಟೆಂಡರ್‌ ಮಾಡಿ ಒಪ್ಪಿದ ಮೊತ್ತವನ್ನು ಕೂಡ ಸಚಿವಾಲಯ ಪಾವತಿಸಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳ ಬೇಕು ಎಂದಿದ್ದಾರೆ. ಸಂಬಂಧಪಟ್ಟ ಸಚಿವಾಲಯ, ಸಂಸದರಿಗೂ ಪತ್ರ ಕಳುಹಿಸಿದ್ದೇನೆ. 
– ಎ. ಜಿ. ಕೊಡ್ಗಿ,  ಅಮಾಸೆಬೈಲು ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ

Advertisement

ಗಮನಕ್ಕೆ  ಬಂದಿದೆ
ಈ ವಿಚಾರ ಗಮನಕ್ಕೆ ಬಂದಿದೆ. ಬಿಡುಗಡೆಗೆ ಬಾಕಿ ಅನುದಾನದ ಕುರಿತು ಶೀಘ್ರ ಕೇಂದ್ರ ಸಚಿವರ ಜತೆ ಮಾತನಾಡಿ ಸಮಸ್ಯೆ ಬಗೆ ಹರಿಸಲಾಗುವುದು. 
– ಶೋಭಾ ಕರಂದ್ಲಾಜೆ,  ಸಂಸದರು, ಉಡುಪಿ

3 ದಿನಗಳಿಂದ ವಿದ್ಯುತ್ತಿಲ್ಲ
ಇಲ್ಲಿ ಸೋಲಾರ್‌ ಇಲ್ಲದಿದ್ದರೆ ಸಾಧ್ಯವೇ ಇಲ್ಲ. ಕಳೆದ ಮೂರು ದಿನಗಳಿಂದ ವಿದ್ಯುತ್‌ ಇಲ್ಲ.
– ಸತೀಶ್‌ ಹೆಗ್ಡೆ, ಕೆಳಸುಂಕ, ಫ‌ಲಾನುಭವಿ

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next