Advertisement

INDvsSL; ಭಾರತಕ್ಕೆ ಇಂದು ಮಾಡು ಇಲ್ಲವೆ ಮಡಿ ಪಂದ್ಯ: ಭಾರತದ ಬ್ಯಾಟರ್‌ಗಳಿಗೆ ಸ್ಪಿನ್‌ ಸವಾಲು

10:36 PM Aug 06, 2024 | Team Udayavani |

ಕೊಲಂಬೊ: ಸ್ಪಿನ್‌ ದಾಳಿ ನಿಭಾಯಿಸುವಲ್ಲಿ ಏಷ್ಯಾದ ಆಚೆಯ ಕ್ರಿಕೆಟ್‌ ದೇಶಗಳಂತೆ ಪರದಾಡುತ್ತಿರುವ ಭಾರತವೀಗ ಶ್ರೀಲಂಕಾ ವಿರುದ್ಧ ಭಾರೀ ಒತ್ತಡದಲ್ಲಿದೆ. ಬುಧವಾರ ಆತಿಥೇಯ ಲಂಕಾ ವಿರುದ್ಧ 3ನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಕಣಕ್ಕಿಳಿಯಲಿದ್ದು, ಸರಣಿಯನ್ನು ಸಮಬಲದಲ್ಲಿ ಮುಗಿಸಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾಗಿದೆ.

Advertisement

ಗೆಲ್ಲಬಹುದಾಗಿದ್ದ ಮೊದಲ ಪಂದ್ಯಕ್ಕೆ ಟೈ ಮುದ್ರೆ ಒತ್ತಿದ ಟೀಮ್‌ ಇಂಡಿಯಾ, ದ್ವಿತೀಯ ಮುಖಾಮುಖೀಯಲ್ಲಿ ಉತ್ತಮ ಆರಂಭದ ಹೊರತಾಗಿಯೂ ಕುಸಿತಕ್ಕೆ ಸಿಲುಕಿತು. ಹೀಗಾಗಿ ಅಂತಿಮ ಪಂದ್ಯದಲ್ಲಿ ಸ್ಪಿನ್ನಿಗೆ ಅಂಜದೆ ಮುನ್ನುಗ್ಗಿ ಆಡಬೇಕಾಗಿದೆ. ಇಲ್ಲವಾದರೆ ಶ್ರೀಲಂಕಾ ವಿರುದ್ಧ 27 ವರ್ಷಗಳ ಬಳಿಕ ಭಾರತ ಮೊದಲ ಸಲ ಏಕದಿನ ಸರಣಿಯನ್ನು ಕಳೆದುಕೊಳ್ಳಲಿದೆ!

1997ರಲ್ಲಿ ಅರ್ಜುನ ರಣತುಂಗ ಸಾರಥ್ಯದ ಶ್ರೀಲಂಕಾ 3-0 ಅಂತರದಿಂದ ಭಾರತವನ್ನು ಮಣಿಸಿತ್ತು. ಆಗ ಸಚಿನ್‌ ತೆಂಡುಲ್ಕರ್‌ ನಾಯಕರಾಗಿದ್ದರು. ಅನಂತರ ಇತ್ತಂಡಗಳ ನಡುವೆ 11 ಏಕದಿನ ಸರಣಿಗಳು ಏರ್ಪಟ್ಟಿವೆ. ಎಲ್ಲಿಯೂ ಭಾರತ ಸೋತದ್ದಿಲ್ಲ.

ಬ್ಯಾಟಿಂಗ್‌ ದೂರುಗಳು

ಬಾರತದ ಬ್ಯಾಟಿಂಗ್‌ ಬಗ್ಗೆ ಬಹಳಷ್ಟು ದೂರುಗಳಿವೆ. ರೋಹಿತ್‌ ಶರ್ಮ ಅವರಂತೆ ಮುನ್ನುಗ್ಗಿ ಬಾರಿಸಲು ಉಳಿದವರು ಯಶಸ್ವಿಯಾಗುತ್ತಿಲ್ಲ. ಮುಖ್ಯವಾಗಿ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಅವರ ಬ್ಯಾಟ್‌ ಮಾತಾಡುತ್ತಿಲ್ಲ. 2 ಪಂದ್ಯಗಳಿಂದ ಗಳಿಸಿದ್ದು 38 ರನ್‌ ಮಾತ್ರ.

Advertisement

ಲಂಕಾ ಸ್ಪಿನ್ನರ್‌ಗಳ ಯಶಸ್ಸು

ಬುಧವಾರವೂ  ಆರ್‌. ಪ್ರೇಮದಾಸ ಸ್ಟೇಡಿಯಂನ ಪಿಚ್‌ ಸ್ಪಿನ್ನಿಗೆ ಹೊರತಾಗಿ ಬೇರೆ ಎಸೆತಗಳಿಗೆ ನೆರವು ನೀಡುವ ಸಾಧ್ಯತೆ ಇಲ್ಲ. ಮೊದಲೆರಡು ಪಂದ್ಯಗಳಲ್ಲಿ ಲಂಕಾ ಸ್ಪಿನ್ನರ್ ಇದರ ಭರಪೂರ ಪ್ರಯೋಜನ ಪಡೆದಿದ್ದರು. ಎರಡೂ ಸಲ ಟಾಸ್‌ ಗೆದ್ದ ಶ್ರೀಲಂಕಾ, ಸವಾಲಿನ ಮೊತ್ತ ದಾಖಲಿಸಿ ಭಾರತವನ್ನು ಸ್ಪಿನ್‌ ಬಲೆಗೆ ಸಿಲುಕಿಸುವಲ್ಲಿ ಯಶಸ್ವಿಯಾಗಿತ್ತು. ಬುಧವಾರವೂ ಆಷ್ಟೇ, ಚೇಸಿಂಗ್‌ ತಂಡಕ್ಕೆ ಸಮಸ್ಯೆ ತಪ್ಪಿದ್ದಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಹಿಂದಿನ ಪಂದ್ಯದ ವೇಳೆ ಗಾಯಕ್ಕೀಡಾಗಿ ವನಿಂದು ಹಸರಂಗ ಸರಣಿಯಿಂದಲೇ ಹೊರಬಿದ್ದರು. ಇವರ ಬದಲು ಬಂದ ಜೆಫ್ರಿ ವಾಂಡರ್ಸೆ, ಇನ್ನಷ್ಟು ಅಪಾಯಕಾರಿಯಾಗಿ ಗೋಚರಿಸಿದರು. ಇವರ ಬುಟ್ಟಿಗೆ 6 ವಿಕೆಟ್‌ ಬಿದ್ದಿತ್ತು.

ಸಂಭಾವ್ಯ ತಂಡಗಳು

ಭಾರತ: ರೋಹಿತ್‌, ಗಿಲ್‌, ಕೊಹ್ಲಿ, ಶ್ರೇಯಸ್‌, ರಾಹುಲ್‌, ಪರಾಗ್‌, ಅಕ್ಷರ್‌, ವಾಷಿಂಗ್ಟನ್‌, ಕುಲದೀಪ್‌, ಅರ್ಶದೀಪ್‌, ಸಿರಾಜ್‌.

ಶ್ರೀಲಂಕಾ: ನಿಸ್ಸಂಕ, ಅವಿಷ್ಕಾ, ಕುಸಾಲ್‌, ಸಮರವಿಕ್ರಮ, ಅಸಲಂಕ (ನಾಯಕ), ಜನಿತ್‌, ಕಮಿಂಡು, ವೆಲ್ಲಲಗೆ, ವಾಂಡರ್ಸೆ, ಅಕಿಲ, ಅಸಿತ.

Advertisement

Udayavani is now on Telegram. Click here to join our channel and stay updated with the latest news.

Next