ನವದೆಹಲಿ: ಶುದ್ಧ ಇಂಧನವನ್ನು ಹೊಂದುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಸಣ್ಣ ಪ್ರಮಾಣದ ಪರಮಾಣು ಸ್ಥಾವರ ಆರಂಭಿಸಲು ಮುಂದಾಗಿದೆ. 300 ಮೆಗಾವ್ಯಾಟ್ ಸಾಮರ್ಥ್ಯದ ವರೆಗೆ ಇರುವ ಸ್ಥಾವರಗಳ ಸ್ಥಾಪನೆಗೆ ಸರ್ಕಾರ ಯೋಚಿಸುತ್ತಿದೆ ಎಂದು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ.
ನವದೆಹಲಿಯಲ್ಲಿ ನೀತಿ ಆಯೋಗ ಮತ್ತು ಅಣು ಶಕ್ತಿ ಆಯೋಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಮಾಣು ಸ್ಥಾವರ ಕ್ಷೇತ್ರದಲ್ಲಿ ಖಾಸಗಿ ವಲಯ ಮತ್ತು ಸ್ಟಾರ್ಟ್‌ಅಪ್‌ಗ್ಳ ಭಾಗವಹಿಸುವಿಕೆಯನ್ನು ಪರಿಶೀಲಿಸಬೇಕಾಗಿದೆ. ಸಣ್ಣ ಪ್ರಮಾಣದ ಪರಮಾಣು ಸ್ಥಾವರ ಆರಂಭ ಮಾಡುವುದಕ್ಕೆ ತಂತ್ರಜ್ಞಾನದ ವರ್ಗಾವಣೆ ಮತ್ತು ವಾಣಿಜ್ಯಿಕವಾಗಿ ಹೇಗೆ ಲಾಭವಾಗಲಿದೆ ಎಂಬ ಬಗ್ಗೆ ಯೋಚಿಸಬೇಕಾದ ಅಂಶವಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರು ಪ್ರತಿಪಾದಿಸುತ್ತಿರುವಂತೆ ಶುದ್ಧ ಇಂಧನದ ಅನ್ವಯ ಈ ಅಂಶಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಜಿತೇಂದ್ರ ಸಿಂಗ್ ಹೇಳಿದರು.