Advertisement

ಸೆಮಿಕಂಡಕ್ಟರ್‌ ಘಟಕ ಸ್ಥಾಪಿಸಿದ್ರೆ ಸರ್ಕಾರವೇ ಭರಿಸಲಿದೆ ಅರ್ಧದಷ್ಟು ವೆಚ್ಚ

12:27 PM Sep 22, 2022 | Team Udayavani |

ನವದೆಹಲಿ: ಸೆಮಿಕಂಡಕ್ಟರ್‌ ಮಾರುಕಟ್ಟೆಯು ವೇಗವಾಗಿ ಬೆಳೆಯುತ್ತಿರುವಂತೆಯೇ ಭಾರತವನ್ನು “ಚಿಪ್‌ ಉತ್ಪಾದನಾ ಹಬ್‌’ ಅನ್ನಾಗಿ ಪರಿವರ್ತಿಸುವ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ.

Advertisement

ದೇಶದಲ್ಲಿ ಹೊಸದಾಗಿ ಸೆಮಿಕಂಡಕ್ಟರ್‌ ಘಟಕವನ್ನು ಸ್ಥಾಪಿಸಿದರೆ, ಒಟ್ಟಾರೆ ಯೋಜನಾ ವೆಚ್ಚದ ಶೇ.50ರಷ್ಟನ್ನು ಸರ್ಕಾರವೇ ಭರಿಸುವುದಾಗಿ ಘೋಷಿಸಿದೆ. ಈ ಪ್ರಸ್ತಾಪಕ್ಕೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯ ಅನುಮೋದನೆಯೂ ಸಿಕ್ಕಿದೆ.

ಅದರಂತೆ, ಇನ್ನು ಮುಂದೆ ಸೆಮಿಕಂಡಕ್ಟರ್‌ ಘಟಕವನ್ನು ಸ್ಥಾಪಿಸುವವರಿಗೆ ಕೇಂದ್ರ ಸರ್ಕಾರದಿಂದ ಯೋಜನಾ ವೆಚ್ಚದ ಅರ್ಧದಷ್ಟು ಹಣಕಾಸು ನೆರವು ಸಿಗಲಿದೆ. ಅಷ್ಟೇ ಅಲ್ಲ, ಡಿಸ್‌ಪ್ಲೇ ಉತ್ಪಾದನೆ ಮಾಡುವಂಥ ಕಂಪನಿಗಳಿಗೆ ವಿಧಿಸಲಾಗಿರುವ ಗರಿಷ್ಠ ಹೂಡಿಕೆಯ ಮಿತಿಯನ್ನೂ ತೆಗೆದುಹಾಕಲು ಸಂಪುಟ ಒಪ್ಪಿಗೆ ನೀಡಿದೆ. ಈ ಮೂಲಕ ದೇಶದಲ್ಲಿ ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡುವ ಕೆಲಸವನ್ನು ಸರ್ಕಾರ ಮಾಡಿದೆ.

ಜಾಗತಿಕ ಚಿಪ್‌ ಪೂರೈಕೆ ಸರಪಳಿಯಲ್ಲಿ ಭಾರತವೂ ಪ್ರಮುಖ ಪಾಲುದಾರನಾಗಬೇಕು ಎನ್ನುವುದು ಪ್ರಧಾನಿ ಮೋದಿ ಅವರ ಮಹದುದ್ದೇಶವಾಗಿದೆ. ಅದಕ್ಕಾಗಿ 10 ಶತಕೋಟಿ ಡಾಲರ್‌ ಪ್ರೋತ್ಸಾಹ ಧನವನ್ನು ಸರ್ಕಾರ ಮೀಸಲಿರಿಸಿದ್ದು, ದೊಡ್ಡ ಮಟ್ಟದ ಹೂಡಿಕೆ ಮಾಡುವವರಿಗಾಗಿ ಕಾಯುತ್ತಿದೆ. ಈ ಹಿಂದೆ, ಹೊಸ ಡಿಸ್‌ಪ್ಲೇ ಮತ್ತು ಚಿಪ್‌ ಸ್ಥಾವರವನ್ನು ಸ್ಥಾಪಿಸುವವರಿಗೆ ಶೇ.30-50ರಷ್ಟು ವೆಚ್ಚ ಭರಿಸುವುದಾಗಿ ಸರ್ಕಾರ ಹೇಳಿತ್ತು. ಈಗ ಶೇ.50ರಷ್ಟು ಬಂಡವಾಳ ವೆಚ್ಚವನ್ನೂ ಭರಿಸುವುದಾಗಿ ಹೇಳಿದೆ.

ಕಳೆದ ವಾರವಷ್ಟೇ ವೇದಾಂತ ಕಂಪನಿಯು ತೈವಾನ್‌ನ ಫಾಕ್ಸ್‌ಕಾಮ್‌ನೊಂದಿಗೆ ಒಪ್ಪಂದ ಮಾಡಿಕೊಂಡು ಗುಜರಾತ್‌ನಲ್ಲಿ 19.5 ಶತಕೋಟಿ ಡಾಲರ್‌ ಬಂಡವಾಳದೊಂದಿಗೆ ಸೆಮಿಕಂಡಕ್ಟರ್‌ ಮತ್ತು ಡಿಸ್‌ಪ್ಲೇ ಉತ್ಪಾದನಾ ಘಟಕ ಸ್ಥಾಪಿಸುವುದಾಗಿ ಘೋಷಿಸಿತ್ತು. ಅದಕ್ಕೂ ಮುನ್ನ ಅಂತಾರಾಷ್ಟ್ರೀಯ ಒಕ್ಕೂಟ ಐಎಸ್‌ಎಂಸಿ ಮತ್ತು ಸಿಂಗಾಪುರ ಮೂಲದ ಐಜಿಎಸ್‌ಎಸ್‌ ವೆಂಚರ್ಸ್‌, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕ್ರಮವಾಗಿ ಘಟಕ ಸ್ಥಾಪಿಸುವುದಾಗಿ ಘೋಷಿಸಿದ್ದವು.

Advertisement

ಸರಕು ಸಾಗಣೆ ನೀತಿಗೆ ಅಸ್ತು:
ಇದೇ ವೇಳೆ, ಸರಕು ಸಾಗಣೆ ಕ್ಷೇತ್ರದ ಜಾಗತಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುವ, ಸಾಗಣೆ ವೆಚ್ಚ ತಗ್ಗಿಸುವ ಮತ್ತು ಸರಕುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ರಾಷ್ಟ್ರೀಯ ಸರಕು ಸಾಗಣೆ ನೀತಿಗೂ ಕೇಂದ್ರ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಮಾಹಿತಿ ನೀಡಿದ್ದಾರೆ. ಕಳೆದ ವಾರವಷ್ಟೇ ಪ್ರಧಾನಿ ಮೋದಿ ಅವರು ಈ ನೀತಿಯನ್ನು ಅನಾವರಣಗೊಳಿಸಿದ್ದರು. ಇನ್ನು, ಸೋಲಾರ್‌ ಪಿವಿ ಮಾಡ್ನೂಲ್‌ಗ‌ಳ ಉತ್ಪಾದನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ 19,500 ಕೋಟಿ ರೂ.ಗಳ ಉತ್ಪಾದನೆ ಆಧರಿತ ಪ್ರೋತ್ಸಾಹ ಧನ ಯೋಜನೆಗೂ ಸಂಪುಟದ ಅನುಮತಿ ದೊರೆತಿದೆ.

ಯಾವುದಕ್ಕೆ ಚಿಪ್‌ ಬಳಕೆ?
ಸ್ಮಾರ್ಟ್‌ಫೋನುಗಳು ಹಾಗೂ ವಿದ್ಯುತ್‌ಚಾಲಿತ ಕಾರುಗಳಲ್ಲಿ ಹೆಚ್ಚಾಗಿ ಚಿಪ್‌ ಗಳನ್ನು ಬಳಸಲಾಗುತ್ತಿದೆ. ಈ ಎರಡೂ ಉತ್ಪನ್ನಗಳಿಗೆ ಇತ್ತೀಚಿನ ವರ್ಷಗಳಲ್ಲಿ ವಿಶ್ವಾದ್ಯಂತ ಭಾರೀ ಬೇಡಿಕೆಯಿದೆ. 2022ರ 2ನೇ ತ್ತೈಮಾಸಿಕದಲ್ಲಿ 152.5 ಶತಕೋಟಿ ಡಾಲರ್‌ ಮೊತ್ತದ ಸೆಮಿಕಂಡಕ್ಟರ್‌ಗಳು ಮಾರಾಟವಾಗಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇ.13.3ರಷ್ಟು ಏರಿಕೆ ಕಂಡಂತಾಗಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು, ಭಾರತವನ್ನು ಚಿಪ್‌ ಉತ್ಪಾದನಾ ಹಬ್‌ ಆಗಿ ಪರಿವರ್ತಿಸುವುದು ಕೇಂದ್ರ ಸರ್ಕಾರದ ಉದ್ದೇಶ.

ಅನುಕೂಲಗಳೇನು?
– 5ಜಿ, ಇವಿ, ಕೃತಕ ಬುದ್ಧಿಮತ್ತೆಗೆ ಅಗತ್ಯವಾದ ಚಿಪ್‌ ಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬಹುದು
– ಅತಿ ವೇಗದಲ್ಲಿ ಬೆಳೆಯುತ್ತಿರುವ ಎಲೆಕ್ಟ್ರಾನಿಕ್ಸ್‌ ಉತ್ಪಾದನೆಗೆ ಉತ್ತೇಜನ
– ಜಾಗತಿಕ ಸೆಮಿಕಂಡಕ್ಟರ್‌ ಉತ್ಪಾದನಾ ಹಬ್‌ ಆಗಿ ಹೊರಹೊಮ್ಮಬಹುದು
– ದೇಶೀಯವಾಗಿ ಸಾವಿರಾರು ಉದ್ಯೋಗಗಳು ಸೃಷ್ಟಿ
– ಚಿಪ್‌ ಗಳಿಗಾಗಿ ತೈವಾನ್‌, ಚೀನಾ, ದ.ಕೊರಿಯಾವನ್ನು ಅವಲಂಬಿಸುವ ಅಗತ್ಯ ಇರುವುದಿಲ್ಲ

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next