Advertisement

2017-18ರಲ್ಲಿ ಶೇ.7.5 ಜಿಡಿಪಿ ಬೆಳವಣಿಗೆ: ಆರ್ಥಿಕ ಸಮೀಕ್ಷೆ ವರದಿ

03:41 PM Jan 31, 2017 | |

ಹೊಸದಿಲ್ಲಿ : 2017-18ರ ಹಣಕಾಸು ವರ್ಷದಲ್ಲಿ ಭಾರತವು ಶೇ.6.75 ರಿಂದ ಶೇ.7.5ರ ವರೆಗಿನ ಆರ್ಥಿಕಾಭಿವೃದ್ಧಿಯನ್ನು (ಜಿಡಿಪಿ ಬೆಳವಣಿಗೆ) ದಾಖಲಿಸಲಿದೆ ಎಂದು ಸಂಸತ್ತಿನಲ್ಲಿ ಇಂದು ಸರಕಾರ ಮಂಡಿಸಿರುವ 2017ರ ಆರ್ಥಿಕ ಸಮೀಕ್ಷೆ ಹೇಳಿದೆ.

Advertisement

ಸರಕಾರ ಕಳೆದ ವರ್ಷ ನವೆಂಬರ್‌ 8ರಂದು ಕೈಗೊಂಡಿದ್ದ ನೋಟು ಅಪನಗದೀಕರಣ ಕ್ರಮದಿಂದ ಹಾಗೂ ತದನಂತರದಲ್ಲಿನ ನಗದು ಪೂರೈಕೆ ಪ್ರಮಾಣದಲ್ಲಿನ ಕಡಿತದಿಂದ ದೇಶದ ಜಿಡಿಪಿ ಬೆಳವಣಿಗೆಯು ತಾತ್ಕಾಲಿಕವಾಗಿ ಕುಂಠಿತಗೊಳ್ಳಲಿದೆ.

ಆದರೆ ಇದೇ ವೇಳೆ ಹಣಕಾಸು ವಹಿವಾಟುಗಳ ಡಿಜಿಟಲೀಕರಣ, ಅತ್ಯಧಿಕ ತೆರಿಗೆ ಪಾವತಿ ಬದ್ಧತೆ ಮತ್ತು ರಿಯಲ್‌ ಎಸ್ಟೇಟ್‌ ದರಗಳ ಗಮನಾರ್ಹ ಇಳಿಕೆಯಿಂದ ದೀರ್ಘಾವಧಿಯಲ್ಲಿ ಸರಕಾರದ ಆದಾಯ ಗಳಿಕೆಯು ಹೆಚ್ಚಲಿದೆ ಮತ್ತು ಇದರಿಂದಾಗಿ ಜಿಡಿಪಿ ಬೆಳವಣಿಗೆಯಲ್ಲಿ ಹೆಚ್ಚಳ ಕಂಡುಬರಲಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.

ಈ ತಿಂಗಳ ಆದಿಯಲ್ಲಿ ಬಿಡುಗಡೆಗೊಳಿಸಲಾದ ಅಂಕಿ ಅಂಶಗಳಿಂದ ತಿಳಿದುಬರುವಂತೆ ದೇಶದ ಜಿಡಿಪಿಯು 2016-17ರ ಹಣಕಾಸು ವರ್ಷದಲ್ಲಿ ಶೇ.7.1ರಲ್ಲಿ ದಾಖಲಾಗಲಿದೆ; ಇದು ಹಿಂದಿನ ಸಾಲಿನ ಶೇ.7.6ಕ್ಕೆ ಹೋಲಿಸಿದಾಗ ಶೇ.0.5ರಷ್ಟು ಕಡಿಮೆ ಎನಿಸಲಿದೆ. ನೋಟು ಅಪನಗದೀಕರಣದ ಪರಿಣಾಮವಾಗಿ ಉಂಟಾಗಿರುವ ನಗದು ಕೊರತೆಯಿಂದಾಗಿ ಜಿಡಿಪಿ ಬೆಳವಣಿಗೆಯ ಮೇಲೆ ತಾತ್ಕಾಲಿಕ ಹೊಡೆತ ಬೀಳಲಿದೆ ಎಂದು ಸಮೀಕ್ಷೆ ಹೇಳಿದೆ. 

ಮುಖ್ಯ ಆರ್ಥಿಕ ವ್ಯವಹಾರಗಳ ಸಲಹೆಗಾರರಾಗಿರುವ ಅರವಿಂದ ಸುಬ್ರಮಣಿಯನ್‌ ಮತ್ತು ಅವರ ತಂಡದವರು ಸಿದ್ಧಪಡಿಸಿರುವ ಆರ್ಥಿಕ ಸಮೀಕ್ಷೆಯು ಭಾರತದಲ್ಲಿನ ಬಡವರಿಗೆ ಸಾರ್ವತ್ರಿಕ ಮೂಲ ಆದಾಯ ಯೋಜನೆಯನ್ನು (ಯುಬಿಐ) ಹೊರತರುವಂತೆ ಸರಕಾರಕ್ಕೆ ಸೂಚಿಸಿದೆ. ಬಡಜನರ ಕುಟುಂಬಗಳ ಬ್ಯಾಂಕ್‌ ಖಾತೆಗಳಿಗೆ ನೇರ ಹಣ ವರ್ಗಾವಣೆ ಮಾಡುವುದು ಈ ಮಹತ್ವಾಕಾಂಕ್ಷಿ ಯೋಜನೆಯ ಮುಖ್ಯ ಉದ್ದೇಶವಾಗಿದೆ.

Advertisement

ಫೆ.1ರಂದು ಹಣಕಾಸು ಸಚಿವ ಅರುಣ್‌ ಜೇತ್ಲಿ ಅವರು ಕೇಂದ್ರ ಬಜೆಟ್‌ ಮಂಡಿಸುವ ಮುನ್ನಾ ದಿನ ಸಂಸತ್ತಿನಲ್ಲಿ ಇಂದು ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗಿದೆ. 

ಸಮೀಕ್ಷೆಯ ಪ್ರಕಾರ ಪ್ರಸ್ತಾವಿತ ಯುಬಿಐ ಯೋಜನೆಯಿಂದ ಫ‌ಲಾನುಭವಿಗಳಿಗೆ ನೇರವಾಗಿ ಸಹಾಯಧನವನ್ನು ಒದಗಿಸುವುದು, ಹಣ ಪೋಲಾಗುವುದು ಹಾಗೂ ಸೋರಿ ಹೋಗುವುದನ್ನು ತಪ್ಪಿಸುವುದು, ಅತ್ಯಂತ ವೇಗದಿಂದ ಜನರು ಬಡತನ ರೇಖೆಯಿಂದ ಮೇಲಕ್ಕೆ ಬರುವಂತೆ ಮಾಡುವುದು ಸಾಧ್ಯವಾಗುವುದು ಮತ್ತು ಬಡಜನರ ಆಧಾರ್‌ ಲಿಂಕ್‌ ಹೊಂದಿರುವ ಬ್ಯಾಂಕ್‌ ಖಾತೆಗಳಿಗೆ ನೇರ ಹಣ ವರ್ಗಾವಣೆ ಮಾಡುವುದು ಸುಲಭ ಸಾಧ್ಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next