ನವದೆಹಲಿ: ಭಾರತದಲ್ಲಿ ಕೋವಿಡ್ -19 ಭೀತಿ ಹೆಚ್ಚಳವಾಗುತ್ತಲೇ ಇದ್ದು ಸೋಂಕು ಕ್ಷಿಪ್ರಗತಿಯಲ್ಲಿ ಹರಡುತ್ತಿದೆ. ಇದೀಗ ಯುಕೆ ಯನ್ನು ಮೀರಿಸಿ ಭಾರತದಲ್ಲಿ ಸೋಂಕಿತರ ಪ್ರಮಾಣ ಏರುಗತಿಯಲ್ಲಿ ಸಾಗಿದ್ದು ಜಾಗತಿಕವಾಗಿ 4ನೇ ಹಾಟ್ ಸ್ಪಾಟ್ ಎನಿಸಿಕೊಂಡಿದೆ.
ದೇಶದಲ್ಲಿ ಒಟ್ಟಾರೆ ವೈರಾಣು ಪೀಡಿತರ ಸಂಖ್ಯೆ 2,95,772 ಇದ್ದು, ಯುಕೆ ಯಲ್ಲಿ 2,91,588 ಸೋಂಕಿತ ಪ್ರಕರಣಗಳು ವರದಿಯಾಗಿದೆ. ಅಮೆರಿಕಾ, ರಷ್ಯಾ, ಬ್ರೆಜಿಲ್ ನಲ್ಲಿ ಕೋವಿಡ್ ಅಟ್ಟಹಾಸ ಮುಂದುವರೆದಿದ್ದು ಟಾಪ್ ಮೂರರ ಸ್ಥಾನದಲ್ಲಿ ಗುರುತಿಸಿಕೊಂಡಿವೆ.
ರಷ್ಯಾದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 4.93 ಲಕ್ಷ, ಬ್ರೆಜಿಲ್ ನಲ್ಲಿ 7.72 ಲಕ್ಷ ಮತ್ತು ಅಮೆರಿಕಾದಲ್ಲಿ 20 ಲಕ್ಷ ಪ್ರಕರಣಗಳು ಇಲ್ಲಿಯವರೆಗೂ ವರದಿಯಾಗಿವೆ.
ಭಾರತವು ಮಾರ್ಚ್ 24 ರಂದು ಜಾಗತಿಕವಾಗಿ ವೈರಸ್ ಸೋಂಕಿತರ ಪಟ್ಟಿಯಲ್ಲಿ ಟಾಪ್ ಹತ್ತರ ಸ್ಥಾನಕ್ಕೇರಿತ್ತು. ಇದಾದ ಕೇವಲ 18 ದಿನಗಳಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಂಡಿದ್ದರಿಂದ ಇಟಲಿ, ಸ್ಪೇನ್, ಯುಕೆ ಯನ್ನು ಮೀರಿಸಿ ಜಾಗತಿಕವಾಗಿ 4ನೇ ಹಾಟ್ ಸ್ಪಾಟ್ ಎನಿಸಿಕೊಂಡಿದೆ.
ಕಳೆದ ಒಂದು ವಾರದಿಂದ ದೇಶದಲ್ಲಿ ಪ್ರತಿದಿನ 9,000ಕ್ಕಿಂತ ಅಧಿಕ ಪ್ರಕರಣಗಳು ವರದಿಯಾಗುತ್ತಿದ್ದು ಕಳೆದ 24 ಗಂಟೆಯ ಅವಧಿಯಲ್ಲಿ 9,996 ಹೊಸ ಸೋಂಕಿತರು ಕಂಡುಬಂದಿದ್ದಾರೆ. ಗುರುವಾರ ಒಂದೇ ದಿನ ವೈರಸ್ ಪರಿಣಾಮದಿಂದ 350 ಜನರು ಮೃತರಾಗಿದ್ದು, ಒಟ್ಟಾರೆಯಾಗಿ ಸಾವನ್ನಪ್ಪಿದವರ ಸಂಖ್ಯೆ 8,500ರ ಗಡಿ ತಲುಪಿದೆ. ಮಹಾರಾಷ್ಟ್ರ ರಾಜ್ಯದಲ್ಲೇ ಸೊಂಕಿತರ ಪ್ರಮಾಣ ಮತ್ತು ಸಾವಿನ ಪ್ರಮಾಣ ಅಧಿಕವಾಗಿದ್ದು ಇಲ್ಲಿಯವರೆಗೂ ಸುಮಾರು 3,483 ಜನರು ಪ್ರಾಣ ತ್ಯೆಜಿಸಿದ್ದಾರೆ.