ನವದೆಹಲಿ: ಸತತ 8 ದಿನಗಳಿಂದ ಪ್ರತಿ ದಿನವೂ 50 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳಿಗೆ ಸಾಕ್ಷಿಯಾಗುವ ಮೂಲಕ ಭಾರತದಲ್ಲಿ ಈಗ ಸೋಂಕಿತರ ಸಂಖ್ಯೆ 20 ಲಕ್ಷ ದಾಟಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಸೋಂಕಿತರಿರುವ ದೇಶಗಳ ಪೈಕಿ ಭಾರತವು ಮೂರನೇ ಸ್ಥಾನದಲ್ಲಿದೆ.
ಶೇ.68ರ ಸನಿಹಕ್ಕೆ ಗುಣಮುಖ ಪ್ರಮಾಣ: ಸಮಾಧಾನದ ಸಂಗತಿ ಎಂಬಂತೆ ಈಗ ದೇಶದಲ್ಲಿ ಕೇವಲ 5.95 ಲಕ್ಷ ಸಕ್ರಿಯ ಕೊರೊನಾ ಸೋಂಕಿತರಿದ್ದು, ಉಳಿದ 13 ಲಕ್ಷದಷ್ಟು ಸೋಂಕಿತರು ಗುಣಮುಖರಾಗಿದ್ದಾರೆ.
ಒಟ್ಟಾರೆ ದೇಶದ ಗುಣಮುಖ ಪ್ರಮಾಣ ಗುರುವಾರ ಶೇ.67.62ಕ್ಕೇರಿದೆ. ಇದೇ ವೇಳೆ, ದೇಶದಲ್ಲಿ ಬುಧವಾರ ದಿಂದ ಗುರುವಾರದ ವರೆಗೆ 24 ಗಂಟೆ ಗಳ ಅವಧಿಯಲ್ಲಿ 56,282 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಅವಧಿಯಲ್ಲಿ 904 ಮಂದಿ ಸಾವಿಗೀಡಾಗಿದ್ದಾರೆ.
ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳು ದಾಖಲೆ ಪ್ರಮಾಣದ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ ಬರೋಬ್ಬರಿ 4.6ಲಕ್ಷ ಪ್ರಕರಣಗಳು ಪತ್ತೆಯಾಗಿದೆ.
ಗುರುವಾರ ರಾಷ್ಟ್ರರಾಜಧಾನಿ ದೆಹಲಿಯಲ್ಲಿ 1,299 ಹೊಸ ಪ್ರಕರಣಗಳು ವರದಿಯಾಗಿದ್ದು. ಒಟ್ಟು 1.41 ಲಕ್ಷ ಪ್ರಕರಣ ಪತ್ತೆಯಾಗಿದ್ದು,ಈವರೆಗೆ ಸಾವನ್ನಪ್ಪಿದ್ದವರ ಸಂಖ್ಯೆ 4,059ಕ್ಕೆ ಏರಿಕೆಯಾಗಿದೆ. ಕಳೆದ 24ಗಂಟೆಯಲ್ಲಿ 15 ಮಂದಿ ಸಾವನ್ನಪ್ಪಿರುವುದಾಗಿ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.