ದಾವೋಸ್ : ಸೇರ್ಪಡೆ ಅಭಿವೃದ್ಧಿ (inclusive developtment) ಸೂಚ್ಯಂಕ ಪಟ್ಟಿಯಲ್ಲಿ , ವಿಶ್ವದ ಉದಯೋನ್ಮುಖ ಆರ್ಥಿಕತೆಯ ದೇಶಗಳ ಪೈಕಿ ಭಾರತ 62ನೇ ಸ್ಥಾನದಲ್ಲಿದೆ. ಚೀನ (26ನೇ ಸ್ಥಾನ) ಮತ್ತು ಪಾಕಿಸ್ಥಾನಕ್ಕಿಂತ (47ನೇ ಸ್ಥಾನ) ಭಾರತ ಕೆಳ ಮಟ್ಟದಲ್ಲಿರುವುದು ಮತ್ತು ಭಾರತದ ಈ ಸ್ಥಿತಿ ಹೀಗೆಯೇ ಮುಂದುವರಿದಿರುವುದು ಮೋದಿ ಸರಕಾರಕ್ಕೆ ಮುಜುಗರದ ವಿಷಯ ಎಂದು ಭಾವಿಸಲಾಗಿದೆ.
ನಾರ್ವೆ ಈ ಪಟ್ಟಿಯಲ್ಲಿ ವಿಶ್ವದಲ್ಲೇ ಅತ್ಯುನ್ನತ ಮುಂದುವರಿದ ಆರ್ಥಿಕತೆಯ ದೇಶವಾಗಿ ಮೂಡಿ ಬಂದಿದೆ. ಉದಯೋನ್ಮುಖ ಆರ್ಥಿಕತೆಗಳ ಪೈಕಿ ಲಿಥುವೇನಿಯ ಅಗ್ರಸ್ಥಾನದಲ್ಲಿದೆ.
ವಿಶ್ವ ಆರ್ಥಿಕ ವೇದಿಕೆ ಈ ಪಟ್ಟಿಯನ್ನು ವರ್ಷಂಪ್ರತಿ ಬಿಡುಗಡೆ ಮಾಡುತ್ತದೆ. ದಾವೋಸ್‌ನಲ್ಲಿ ಈ ಬಾರಿ ಅದರ ವಾರ್ಷಿಕ ಸಭೆ ಆರಂಭವಾಗುವುದಕ್ಕೆ ಮುನ್ನ ಅದು ಪಟ್ಟಿಯನ್ನು ಬಿಡುಗಡೆ ಮಾಡಿದೆ.
ದಾವೋಸ್ ಆರ್ಥಿಕ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ವಿಶ್ವದ ಅನೇಕ ನಾಯಕರು ಭಾಗವಹಿಸುತ್ತಾರೆ.
ಎಲ್ಲರನ್ನೂ ಒಳಗೊಳಿಸಿ ಸಾಧಿಸುವ ಸೇರ್ಪಡೆ ಅಭಿವೃದ್ಧಿ ಸೂಚ್ಯಂಕ ಪಟ್ಟಿಯನ್ನು ತಯಾರಿಸುವಾಗ ದೇಶವೊಂದರ ಜನಜೀವನ ಮಟ್ಟ, ಪರಿಸರ ಸಹನಶೀಲತೆ ಮತ್ತು ಇನ್ನಷ್ಟು ಋಣಭಾರದಿಂದ ಮುಂದಿನ ತಲೆಮಾರುಗಳ ರಕ್ಷಣೆಯೇ ಮುಂತಾದ ಅಂಶಗಳನ್ನು ಪರಿಗಣಿಸಲಾಗುತ್ತದೆ ಎಂದು ಡಬ್ಲ್ಯುಇಎಫ್ ಹೇಳಿದೆ.