Advertisement

ಸೇನೆ ವಾಪಸಾತಿಗೆ ಭಾರತ-ಚೀನ ಒಪ್ಪಿಗೆ

12:57 AM Nov 12, 2020 | mahesh |

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಮತ್ತು ಚೀನ ದೇಶಗಳು ವಾಸ್ತವ ನಿಯಂತ್ರಣ ರೇಖೆಯಿಂದ ಸೇನೆ ವಾಪಸ್‌ ತೆಗೆದುಕೊಳ್ಳಲು ನಿರ್ಧರಿಸಿವೆ.

Advertisement

ಈ ಕುರಿತಂತೆ ಸುದ್ದಿಸಂಸ್ಥೆ “ಎಎನ್‌ಐ’ ವರದಿ ಮಾಡಿದ್ದು, ಸೇನೆ ವಾಪಸಾತಿಗಾಗಿ ಮೂರು ಹಂತಗಳ ಪ್ರಕ್ರಿಯೆ ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ನ.6ರಂದು ಚುಶುಲ್‌ನಲ್ಲಿ ನಡೆದ 8ನೇ ಹಂತದ ರ್ಪ್ಸ್ ಕಮಾಂಡರ್‌ಗಳ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ. ಪೂರ್ವ ಲಡಾಕ್‌ನಲ್ಲಿರುವ ಪ್ಯಾಂಗಾಂಗ್‌ ಲೇಕ್‌ ಬಳಿಯಿಂದ ಎರಡೂ ದೇಶಗಳು ಸೇನೆ ವಾಪಸ್‌ ಕರೆಸಿಕೊಳ್ಳಬೇಕು. ಏಪ್ರಿಲ್‌-ಮೇ ಅವಧಿಗಿಂತ ಹಿಂದೆ ಇದ್ದ ಪರಿಸ್ಥಿತಿ ಬರಬೇಕು ಎಂದು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ಈ ಪ್ರಕ್ರಿಯೆ ಮಾತುಕತೆ ನಡೆದ ದಿನದಿಂದ ಒಂದು ವಾರದಲ್ಲೇ ಮುಗಿಯಬೇಕು ಎಂಬ ತೀರ್ಮಾನವನ್ನೂ ತೆಗೆದುಕೊಳ್ಳಲಾಗಿದೆ. ಅಂದರೆ, ಈ ಅವಧಿಯಲ್ಲಿ ಪ್ಯಾಂಗಾಂಗ್‌ ಲೇಕ್‌ನಲ್ಲಿರುವ ಶಸ್ತ್ರ ಸಜ್ಜಿತ ವಾಹನಗಳು, ಟ್ಯಾಂಕ್‌ಗಳು, ಶಸ್ತ್ರ ಸಜ್ಜಿತ ಯೋಧರು, ವಾಸ್ತವ ನಿಯಂತ್ರಣ ರೇಖೆಯಿಂದ ದೂರ ಸರಿಯಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸದ್ಯದಲ್ಲೇ ಮತ್ತೂಂದು ಸುತ್ತಿನ ಮಾತುಕತೆ ನಡೆಯುವ ಸಂಭವವೂ ಇದೆ.

ಡ್ರೋನ್‌ ಮೂಲಕ ನಿಗಾ: ಸೇನೆ ವಾಪಸ್‌ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ನಿಗಾ ಇಡುವ ಸಂಬಂಧ ಮಾನವ ರಹಿತ ವಿಮಾನ ವಾಹನ ಬಳಸಿಕೊಳ್ಳಬೇಕು. ಈ ಬಗ್ಗೆ ಜಂಟಿಯಾಗಿ ಕಾರ್ಯಾಚರಣೆ ಮಾಡಬೇಕು ಎಂಬ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ.
ಗಡಿಗೆ ಜ| ನರವಾಣೆ ಭೇಟಿ: ಚೀನ ಜತೆಗಿನ ಸಂಘರ್ಷದ ನಡುವೆಯೇ ಭಾರತೀಯ ಸೇನಾ ಮುಖ್ಯಸ್ಥ ಜ| ಮನೋಜ್‌ ಮುಕುಂದ್‌ ನರವಾಣೆ ಅವರು ಉತ್ತರಾಖಂಡದಲ್ಲಿರುವ ಎಲ್‌ಎಸಿಗೆ ಭೇಟಿ ನೀಡಿ ಪರಿಸ್ಥಿತಿ ಪರಾಮರ್ಶೆ ನಡೆಸಿದ್ದಾರೆ.

ಮೂರು ಹಂತದ ಪ್ರಕ್ರಿಯೆ
1. ಶಸ್ತ್ರಸಜ್ಜಿತ ವಾಹನ ವಾಪಸ್‌ ಈ ಪ್ರಕ್ರಿಯೆ ಒಂದೇ ದಿನದಲ್ಲಿ ಮುಗಿಯಬೇಕು. ಪ್ಯಾಂಗಾಂಗ್‌ ಲೇಕ್‌ ಬಳಿ ಇರುವ ಶಸ್ತ್ರ ಸಜ್ಜಿತ ವಾಹನಗಳನ್ನು ವಾಪಸ್‌ ಕರೆಸಿಕೊಳ್ಳಬೇಕು.
2. ಶೇ.30 ಸೇನೆ ವಾಪಸ್‌ ಪ್ಯಾಂಗಾಂಗ್‌ ಲೇಕ್‌ನ ಉತ್ತರ ದಡದಲ್ಲಿ ರುವ ಸೇನೆಯಲ್ಲಿ ಪ್ರತಿ ದಿನವೂ ಶೇ.30ರಷ್ಟನ್ನು ವಾಪಸ್‌ ಕರೆಸಿಕೊಳ್ಳಬೇಕು. ಭಾರತೀಯ ಸೇನೆ ಧನ್‌ ಸಿಂಗ್‌ ಥಾಪಾ ಪೋಸ್ಟ್‌ ಬಳಿಗೆ ಸೇನೆ ವಾಪಸ್‌ ಕರೆಸಿಕೊಳ್ಳಬೇಕು. ಚೀನ ಫಿಂಗರ್‌ 8ನತ್ತ ತನ್ನ ಸೇನೆಯನ್ನು ಕೊಂಡೊಯ್ಯಬೇಕು.
3. ಸಂಪೂರ್ಣ ವಾಪಸಾತಿ ಪ್ಯಾಂಗಾಂಗ್‌ನ ದಕ್ಷಿಣ ದಡದ ಪ್ರದೇಶದಲ್ಲಿರುವ ಮತ್ತು ಚುಶುಲ್‌ ಹಾಗೂ ರೇಝಾಂಗ್‌ ಲಾ ಪ್ರದೇಶದಲ್ಲಿರುವ ಸೇನೆಯನ್ನು ಭಾರತ,ಚೀನ ವಾಪಸ್‌ ಕರೆಸಿಕೊಳ್ಳಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next