ಸೆಂಚೂರಿಯನ್: ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೇ ಭಾರತ ತಂಡ ಗೆಲುವು ಸಾಧಿಸಿದೆ. ಸೆಂಚೂರಿಯನ್ ನ ಸೂಪರ್ ಸ್ಪೋರ್ಟ್ ಪಾರ್ಕ್ ನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ 113 ರನ್ ಅಂತರದ ಗೆಲುವು ಸಾಧಿಸಿದ್ದು, ಸರಣಿಯಲ್ಲಿ ಶುಭಾರಂಭ ಮಾಡಿದೆ.
ಗೆಲ್ಲಲು 305 ರನ್ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 191 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ನಾಯಕ ಡೀನ್ ಎಲ್ಗರ್, ತೆಂಬ ಬವುಮಾ ಹೊರತುಪಡಿಸಿ ಉಳಿದ ಯಾವುದೇ ಆಟಗಾರನಿಂದ ಬೆಂಬಲ ಸಿಗಲಿಲ್ಲ.
94 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡಲ್ಲಿಂದ ಐದನೇ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ನಾಯಕ ಎಲ್ಗರ್ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಎಲ್ಗರ್ 77 ರನ್ ಗಳಿಸಿ ಔಟಾದರು. ಉಳಿದಂತೆ ಬವುಮಾ ಅಜೇಯ 35 ರನ್ ಗಳಿಸಿದರು. ಬೇರೆ ಯಾವ ಆಟಗಾರನೂ ಕ್ರೀಸ್ ಕಚ್ಚಿ ಆಡುವ ಇರಾದೆ ತೋರಲಿಲ್ಲ.
ಇದನ್ನೂ ಓದಿ:‘ಆರ್ ಆರ್ ಆರ್’ ಚಿತ್ರ ಬಿಡುಗಡೆ ಮುಂದೂಡಿಕೆಯಾಗಿಲ್ಲ: ರಾಜಮೌಳಿ ಸ್ಪಷ್ಟನೆ
ಭಾರತದ ಪರ ಬಿಗು ದಾಳಿ ಸಂಘಟಿಸಿದ ಬುಮ್ರಾ ಮತ್ತು ಶಮಿ ತಲಾ ಮೂರು ವಿಕೆಟ್ ಕಿತ್ತರೆ, ಸಿರಾಜ್ ಮತ್ತು ಅಶ್ವಿನ್ ತಲಾ ಎರಡು ವಿಕೆಟ್ ಪಡೆದರು.
ಈ ಜಯದೊಂದಿಗೆ ಭಾರತ ಒಂದು ಕ್ಯಾಲೆಂಡರ್ ವರ್ಷದಲ್ಲಿ ಏಷ್ಯಾದ ಹೊರಗೆ ನಾಲ್ಕು ಟೆಸ್ಟ್ ಗೆದ್ದ(ಬ್ರಿಸ್ಬೇನ್, ಲಾರ್ಡ್ಸ್, ಓವಲ್, ಸೆಂಚುರಿಯನ್) ಸಾಧನೆ ಮಾಡಿತು. ಈ ಹಿಂದೆ 2018 ರಲ್ಲಿ ಜೋಹಾನ್ಸ್ ಬರ್ಗ್, ನಾಟಿಂಗ್ಹ್ಯಾಮ್, ಅಡಿಲೇಡ್, ಮೆಲ್ಬೋರ್ನ್ ನಲ್ಲಿ ಟೆಸ್ಟ್ ಗೆಲುವು ಸಾಧಿಸಿತ್ತು.
ಸಂಕ್ಷಿಪ್ತ ಸ್ಕೋರ್:
ಭಾರತ: 327 ಮತ್ತು 174
ದ.ಆಫ್ರಿಕಾ: 197 ಮತ್ತು 191