ಲಕ್ನೋ: ಅತ್ಯಂತ ರೋಚಕವಾಗಿದ್ದ ಪಂದ್ಯದಲ್ಲಿ ಭಾರತ, ಕಿವೀಸ್ ವಿರುದ್ಧ ಭರ್ಜರಿಯಾಗಿ 6 ವಿಕೆಟ್ಗಳ ಗೆಲುವು ಸಾಧಿಸಿದೆ.
ಅತ್ಯಂತ ಕನಿಷ್ಠ ಮೊತ್ತದ ಪಂದ್ಯವಾಗಿದ್ದರೂ, ಭಾರತ ಗೆಲ್ಲಲು ತಿಣುಕಾಡಿತು ಎಂಬುದು ವಿಚಿತ್ರ. ಈ ಗೆಲುವಿನ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 99 ರನ್ ಗಳಿಸಿತ್ತು. ಇದನ್ನು ಬೆನ್ನತ್ತಿದ ಭಾರತವೂ 19.5 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 101 ರನ್ ಗಳಿಸಿತು. ಸ್ಫೋಟಕ ಆಟಗಾರ ಸೂರ್ಯಕುಮಾರ್ ಯಾದವ್ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿ 26 ರನ್ ಗಳಿಸಿ ಗೆಲುವಿಗೆ ನೆರವಾದರು.
ಈ ಪಿಚ್ ಸ್ಪಿನ್ಗೆ ನೆರವಾಗಿದ್ದರಿಂದಲೇ ಉಭಯ ತಂಡಗಳ ಆಟಗಾರರೂ ಬ್ಯಾಟಿಂಗ್ ನಡೆಸಲು ಪರದಾಡಿದರು. ಸೂರ್ಯಕುಮಾರ್ ಯಾದವ್ ಬಿಟ್ಟರೆ ಭಾರತದ ಶುಭ್ಮನ್ ಗಿಲ್ 11, ಕಿಶನ್ 19, ರಾಹುಲ್ ತ್ರಿಪಾಠಿ 13, ವಾಷಿಂಗ್ಟನ್ ಸುಂದರ್ 10, ಹಾರ್ದಿಕ್ ಪಾಂಡ್ಯ 15 ರನ್ ಗಳಿಸಿದರು. ಭಾರತದ ಇಬ್ಬರು ರನ್ಔಟ್ ಆಗಿದ್ದು ವಿಶೇಷ.
Related Articles
ನ್ಯೂಜಿಲೆಂಡ್ 99 ರನ್
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ನ್ಯೂಜಿಲೆಂಡ್ ಇಲ್ಲಿ ಭಾರತದ ಸ್ಪಿನ್ ದಾಳಿಗೆ ಸಿಲುಕಿ ಥಂಡಾ ಹೊಡೆಯಿತು. ನೂರರ ಗಡಿ ಕೂಡ ಮರೀಚಿಕೆಯಾಯಿತು.
ಪಿಚ್ ತಿರುವು ಪಡೆಯುತ್ತಿದ್ದುದನ್ನು ಗಮನಿಸಿದ ನಾಯಕ ಹಾರ್ದಿಕ್ ಪಾಂಡ್ಯ ಪವರ್ ಪ್ಲೇಯಲ್ಲೇ ಎರಡೂ ಕಡೆಯಿಂದ ಸ್ಪಿನ್ನರ್ಗಳನ್ನು ದಾಳಿಗಿಳಿಸಿದರು. ಇದು ಯಶಸ್ಸು ತಂದಿತ್ತಿತು. ಚಹಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ದೀಪಕ್ ಹೂಡಾ ಅವರೆಲ್ಲ ಲಕ್ನೋ ಟ್ರ್ಯಾಕ್ನ ಭರಪೂರ ಲಾಭವೆತ್ತಿದರು. ಬಿಗ್ ಹಿಟ್ಟರ್ಗಳನ್ನು ಹೊಂದಿದ್ದ ನ್ಯೂಜಿಲೆಂಡ್ಗೆ ಮುನ್ನುಗ್ಗಿ ಬಾರಿಸಲು ಸಾಧ್ಯವಾಗಲೇ ಇಲ್ಲ.
ಸ್ಟ್ರೈಕ್ ಬೌಲರ್ಗಳಾದ ಅರ್ಷದೀಪ್ ಸಿಂಗ್ ಮತ್ತು ಶಿವಂ ಮಾವಿ ಅವರನ್ನು ಡೆತ್ ಓವರ್ಗಳಲ್ಲಷ್ಟೇ ದಾಳಿಗಿಳಿಸಿದ ಪ್ರಯೋಗವೂ ಯಶಸ್ವಿಯಾಯಿತು. ಮೊದಲ ಪಂದ್ಯದಲ್ಲಿ ಧಾರಾಳ ರನ್ ನೀಡಿದ್ದ ಅರ್ಷದೀಪ್ ಇಲ್ಲಿ 7 ರನ್ನಿಗೆ 2 ವಿಕೆಟ್ ಕಿತ್ತು ಭಾರತದ ಯಶಸ್ವಿ ಬೌಲರ್ ಎನಿಸಿದರು.
ಅಜೇಯ 19 ರನ್ ಮಾಡಿದ ಮಿಚೆಲ್ ಸ್ಯಾಂಟ್ನರ್ ಅವರದೇ ನ್ಯೂಜಿಲೆಂಡ್ ಸರದಿಯ ಅತ್ಯಧಿಕ ಗಳಿಕೆ. ಮೈಕಲ್ ಬ್ರೇಸ್ವೆಲ್ 14, ಆರಂಭಿಕರಾದ ಫಿನ್ ಅಲೆನ್ ಮತ್ತು ಡೇವನ್ ಕಾನ್ವೇ ತಲಾ 11 ರನ್ ಹೊಡೆದರು. ನ್ಯೂಜಿಲ್ಯಾಂಡ್ ಸರದಿಯಲ್ಲಿ ಸಿಡಿದದ್ದು 6 ಬೌಂಡರಿ ಮಾತ್ರ.
ಸರಣಿಯ ಆಂತಿಮ ಪಂದ್ಯ ಬುಧವಾರ ಅಹ್ಮದಾಬಾದ್ನಲ್ಲಿ ನಡೆಯಲಿದೆ. ಇದು ಫೈನಲ್ನಂತಾಗಿದೆ.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ – 99/8, 20 ಓವರ್. ಸ್ಯಾಂಟ್ನರ್ 19, ಚಾಂಪ್ಮನ್ 14. ಅರ್ಷದೀಪ್ 7/2, ಚಹಲ್ 4/1. ಭಾರತ – 101/4, 19.5. ಸೂರ್ಯಕುಮಾರ್ ಯಾದವ್ 26, ಇಶಾನ್ 19. ಬ್ರಾಸ್ವೆಲ್ 13/1, 24/1.