Advertisement

ಭಾರತ-ಬಾಂಗ್ಲಾ 7 ಒಪ್ಪಂದ

11:04 AM Oct 07, 2019 | sudhir |

ಹೊಸದಿಲ್ಲಿ: ಭಾರತ ಭೇಟಿಯಲ್ಲಿರುವ ಬಾಂಗ್ಲಾ ದೇಶದ ಪ್ರಧಾನಿ ಶೇಖ್‌ ಹಸೀನಾ ಶನಿವಾರ ಪ್ರಧಾನಿ ನರೇಂದ್ರ ಮೋದಿ ಜತೆಗೆ ಸುದೀರ್ಘ‌ ಮಾತುಕತೆ ನಡೆಸಿದ್ದು, ಅಸ್ಸಾಂನಲ್ಲಿ ನಡೆಸಲಾಗುತ್ತಿರುವ ಎನ್‌ಆರ್‌ಸಿ(ರಾಷ್ಟ್ರೀಯ ಪೌರತ್ವ ನೋಂದಣಿ) ಬಗ್ಗೆಯೂ ಚರ್ಚಿಸಿದ್ದಾರೆ ಎನ್ನಲಾಗಿದೆ. ಆದರೆ ಎನ್‌ಆರ್‌ಸಿ ಪ್ರಕ್ರಿಯೆಯನ್ನು ಕಾನೂನು ಆದೇಶದ ಮೇರೆಗೆ ನಡೆಸಲಾಗುತ್ತಿದ್ದು, ಪ್ರಕ್ರಿಯೆ ಮುಗಿದ ಅನಂತರ ಯಾವ ಸನ್ನಿವೇಶ ನಿರ್ಮಾಣವಾಗುತ್ತದೆ ಎಂದು ತಿಳಿದಿಲ್ಲ ಎಂಬುದಾಗಿ ಮೋದಿ ತಿಳಿಸಿದ್ದಾರೆ ಎನ್ನಲಾಗಿದೆ.

Advertisement

ಇದೇ ವೇಳೆ, ಭಾರತ ಮತ್ತು ಬಾಂಗ್ಲಾದೇಶ ಒಟ್ಟು ಏಳು ಒಪ್ಪಂದಗಳಿಗೆ ಶನಿವಾರ ಅಂತಿಮ ಮುದ್ರೆ ಒತ್ತಿವೆ. ಬಾಂಗ್ಲಾದೇಶ ಮತ್ತು ಭಾರತ ಜಂಟಿಯಾಗಿ ಕರಾವಳಿ ನಿಗಾ ವ್ಯವಸ್ಥೆಯನ್ನು ರೂಪಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ.
ಈಶಾನ್ಯ ರಾಜ್ಯಗಳಿಗೆ ಬಾಂಗ್ಲಾದಿಂದ ಎಲ್‌ಪಿಜಿ: ಭಾರತ ಮತ್ತು ಬಾಂಗ್ಲಾದೇಶ ಏಳು ಒಪ್ಪಂದಗಳಿಗೆ ಸಹಿ ಹಾಕಿದ್ದು, ಈ ಪೈಕಿ ಭಾರತದ ಈಶಾನ್ಯ ರಾಜ್ಯಗಳಿಗೆ ಬಾಂಗ್ಲಾದೇಶದಿಂದ ಎಲ್‌ಪಿಜಿ ವಿತರಣೆ ಕುರಿತ ಒಪ್ಪಂದ ಮಹತ್ವದ್ದಾಗಿದೆ.

ಬಾಂಗ್ಲಾದೇಶದ ಟ್ರಕ್‌ಗಳನ್ನೇ ಬಳಸಿ ಈಶಾನ್ಯ ರಾಜ್ಯಗಳಿಗೆ ಎಲ್‌ಪಿಜಿ ವಿತರಿಸಲು ನಿರ್ಧರಿಸಲಾಗಿದ್ದು, ಇದು ಎರಡೂ ದೇಶಗಳಿಗೂ ಅನುಕೂಲಕರ. ಇನ್ನೊಂದೆಡೆ, ಈಗಾಗಲೇ ಪಶ್ಚಿಮಬಂಗಾಲದ ಸಿಲಿಗುರಿಯಿಂದ ಬಾಂಗ್ಲಾದೇಶದ ಪರ್ಬತಿಪುರಕ್ಕೆ 130 ಕಿ.ಮೀ ಮೈತ್ರಿ ಪೈಪ್‌ಲೈನ್‌ ಅನ್ನೂ ಉಭಯ ದೇಶಗಳ ಪ್ರಧಾನಿಗಳು ಉದ್ಘಾಟಿಸಿದ್ದಾರೆ.

ಮಾಲ್ಡೀವ್ಸ್‌ನಲ್ಲಿ ಭಾರತ ನಿರ್ಮಿಸಿದ ರೀತಿಯಲ್ಲಿಯೇ, ಬಾಂಗ್ಲಾದೇಶದಲ್ಲಿ ಕರಾವಳಿ ನಿಗಾ ವ್ಯವಸ್ಥೆಯನ್ನು ಭಾರತ ನಿರ್ಮಿಸಲಿದೆ. 20 ಘಟಕಗಳನ್ನು ಬಾಂಗ್ಲಾದೇಶ ಕರಾವಳಿ ಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದು ಬಾಂಗ್ಲಾದೇಶದ ಕರಾವಳಿ ವಿಚಕ್ಷಣೆಯಲ್ಲಿ ಅತ್ಯಂತ ಮಹತ್ವದ್ದಾಗಿರಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದೇ ವೇಳೆ ತ್ರಿಪುರಾಗೆ ಕುಡಿಯುವ ನೀರಿಗಾಗಿ ಫೇಣಿ ನದಿಯಿಂದ 1.82 ಕ್ಯೂಸೆಕ್‌ ನೀರನ್ನು ಒದಗಿಸುವ ಒಪ್ಪಂದವನ್ನೂ ಉಭಯ ದೇಶಗಳು ಮಾಡಿಕೊಂಡಿವೆ. ಕಳೆದ ಒಂದು ವರ್ಷದಲ್ಲಿ 12 ಪ್ರಾಜೆಕ್ಟ್ ಗಳನ್ನು ಉಭಯ ದೇಶಗಳು ಜಾರಿಗೊಳಿಸಲಾಗಿದ್ದು, ಶನಿವಾರ ಮತ್ತೆ 7 ಒಪ್ಪಂದ ಮಾಡಿಕೊಳ್ಳಲಾಗಿದೆ.

ಸಂಪರ್ಕವೇ ಪ್ರಧಾನ: ಭಾರತ ಮತ್ತು ಬಾಂಗ್ಲಾದೇಶದ ಮಧ್ಯೆ ಸಂಪರ್ಕ ಹೆಚ್ಚಳ ಕುರಿತಂತೆ ಮಾತುಕತೆಯಲ್ಲಿ ಪ್ರಮುಖವಾಗಿ ಪ್ರಸ್ತಾಪವಾಯಿತು. ಮೈತ್ರಿ ಎಕ್ಸ್‌ಪ್ರೆಸ್‌ ಇನ್ನು ವಾರಕ್ಕೆ ಐದು ಬಾರಿ ಸಂಚರಿಸಲಿದ್ದು, ಬಂಧನ್‌ ಎಕ್ಸ್‌ಪ್ರೆಸ್‌ ವಾರದಲ್ಲಿ ಎರಡು ಬಾರಿ ಸಂಚರಿಸಲಿದೆ. ಬಾಂಗ್ಲಾದೇಶ ಮತ್ತು ಭಾರತಕ್ಕೆ ಸರಕು ಸಾಗಣೆ ಮಾಡಲು ಚತ್ತೋಗ್ರಾಮ್‌ ಮತ್ತು ಮೊಂಗ್ಲಾ ಬಂದರಿನ ಬಳಕೆಗೆ ಕಾರ್ಯಸೂಚಿಯನ್ನು ರೂಪಿಸಲಾಗಿದೆ.

Advertisement

2020ರಲ್ಲಿ ಬಾಂಗ್ಲಾದೇಶಕ್ಕೆ ಮೋದಿ?: ಬಾಂಗ್ಲಾದೇಶದ ಪಿತಾಮಹ ಶೇಖ್‌ ಮುಜಿಬುರ್‌ ರೆಹಮಾನ್‌ 100ನೇ ಜಯಂತಿ 2020ರ ಮಾರ್ಚ್‌ನಲ್ಲಿ ನಡೆಯಲಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರಧಾನಿಗೆ ಬಾಂಗ್ಲಾದೇಶ ಆಹ್ವಾನ ನೀಡಿದ್ದು, ಪ್ರಧಾನಿ ಇದನ್ನು ಸಮ್ಮತಿಸಿದ್ದಾರೆ.

ಈರುಳ್ಳಿ ಚರ್ಚೆಯಾಗಿಲ್ಲ!
ಭಾರತದಲ್ಲಿ ಈರುಳ್ಳಿ ಬೆಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗಿದ್ದರಿಂದ ಈರುಳ್ಳಿ ರಫ್ತು ಮಾಡುವುದನ್ನು ಭಾರತ ನಿಷೇಧಿಸಿತ್ತು. ಈ ಬಗ್ಗೆ ಶುಕ್ರವಾರವಷ್ಟೇ ಮಾತನಾಡಿದ್ದ ಶೇಖ್‌ ಹಸೀನಾ, ನನ್ನ ಮನೆಯ ಅಡುಗೆಯವರಿಗೆ ಈರುಳ್ಳಿ ಬಳಸಬೇಡಿ ಎಂದಿದ್ದೇನೆ ಎಂದಿದ್ದರು. ಅಷ್ಟೇ ಅಲ್ಲ, ಈರುಳ್ಳಿ ಹಠಾತ್ತನೆ ರಫ್ತು ಮಾಡುವುದನ್ನು ನಿಲ್ಲಿಸಿದ್ದರಿಂದ ಸಮಸ್ಯೆಯಾಗಿದೆ ಎಂದಿದ್ದರು. ಆದರೆ ಶನಿವಾರ ಪ್ರಧಾನಿ ಮೋದಿ ಜತೆಗಿನ ಮಾತುಕತೆಯಲ್ಲಿ ಈ ವಿಚಾರ ಚರ್ಚೆಗೆ ಬಂದಿಲ್ಲ ಎನ್ನಲಾಗಿದೆ.

ರೊಹಿಂಗ್ಯಾ ನಿರಾಶ್ರಿತರಿಗೆ ನೆರವಿನ ಭರವಸೆ
ಮ್ಯಾನ್ಮಾರ್‌ನಿಂದ ಹೊರದಬ್ಬಲ್ಪಟ್ಟ ರೊಹಿಂಗ್ಯಾರನ್ನು ಪೋಷಿಸುತ್ತಿರುವ ಬಾಂಗ್ಲಾದೇಶದ ಕ್ರಮಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇ ರೀತಿ, 2017 ರಿಂದಲೂ ಭಾರತವು ರೊಹಿಂಗ್ಯಾ ನಿರಾಶ್ರಿತರಿಗಾಗಿ ಬಾಂಗ್ಲಾದೇಶಕ್ಕೆ ಇನ್ಸಾನಿಯತ್‌ ಹೆಸರಿನಡಿ ನೆರವಿನ ಹಸ್ತ ಚಾಚುತ್ತಿದೆ. ಅದೇ ರೀತಿ, ಎರಡನೇ ಕಂತಿನ ನೆರವನ್ನು ಶೀಘ್ರದಲ್ಲೇ ಒದಗಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next