ವಾಡಿ: ನೇತಾಜಿ ಸುಭಾಶ್ಚಂದ್ರ ಬೋಸ್ ನೇತೃತ್ವದಲ್ಲಿ ಬ್ರಿಟಿಷರು ಸ್ವಾತಂತ್ರ್ಯ ನೀಡಿದ್ದರೆ, ಭಾರತ ಶೋಷಣೆ ಮುಕ್ತ ಸಮಾಜವಾದಿ ರಾಷ್ಟ್ರವಾಗಿರುತ್ತಿತ್ತು ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ಜಿಲ್ಲಾಧ್ಯಕ್ಷ ಮಲ್ಲಿನಾಥ ಸಿಂಘ ಹೇಳಿದರು.
ಹಳಕರ್ಟಿ ಗ್ರಾಮದಲ್ಲಿ ಆರ್‌ಕೆಎಸ್ ರೈತ ಸಂಘಟನೆ, ಎಐಡಿಎಸ್‌ಒ, ಎಐಡಿವೈಒ ಸಂಘಟನೆಗಳ ವತಿಯಿಂದ ಏರ್ಪಡಿಸಲಾಗಿದ್ದ ನೇತಾಜಿ ಸುಭಾಶ್ಚಂದ್ರ ಬೋಸ್‌ರ 122ನೇ ಜನ್ಮದಿನಾಚರಣೆಯ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಪರಕೀಯರಿಂದ ಮುಕ್ತಿ ಪಡೆದ ಭಾರತ ಸ್ವತಂತ್ರವಾಗಿ ಸ್ವದೇಶಿ ಬಂಡವಾಳಗಾರರ ತೆಕ್ಕೆಗೆ ಸಿಲುಕುವ ಮೂಲಕ ಮತ್ತೆ ಶೋಷಣೆಗೆ ದಾರಿಮಾಡಿಕೊಟ್ಟಂತಾಗಿದೆ. ಭಾರತ ಮತ್ತೆ ಶೋಷಕರ ಕೈಗೆ ಸಿಗಬಾರದು. ರಷ್ಯಾ ಮಾದರಿ ಸಮಾಜವಾದಿ ರಾಷ್ಟ್ರವಾಗಿ ಭಾರತ ನಿರ್ಮಾಣವಾಗುವ ಮೂಲಕ ಎಲ್ಲ ರೀತಿಯ ಶೋಷಣೆಗಳಿಂದ ಬಿಡುಗಡೆಯಾಗಬೇಕು ಎಂಬ ಮಹೋನ್ನತ ಕನಸು ಕಂಡಿದ್ದರು. ಆದರೆ, ಸ್ವಾತಂತ್ರ್ಯ ಸಿಗುವುದಕ್ಕೂ ಮುಂಚೆಯೇ ಬೋಸ್ ಹುತಾತ್ಮರಾದ ಕಾರಣ ನಮ್ಮ ದೇಶ ನಮ್ಮದೇ ಬಂಡವಾಳಶಾಹಿ ಶೋಷಕರ ಕೈಗೆ ಸಿಲುಕುವಂತಾಯಿತು ಎಂದು ವಿವರಿಸಿದರು.
ಸಂಧಾನಪರ ಹೋರಾಟಗಳಿಂದ ಜನರ ಬೇಡಿಕೆಗಳು ಈಡೇರುವುದಿಲ್ಲ. ಸಂಧಾನ ಎಂದರೆ ಅದೊಂದು ರೀತಿಯ ಗುಲಾಮಗಿರಿ ಒಪ್ಪಂದವೇ ಸರಿ. ಭಾರತ ಸ್ವಾತಂತ್ರ್ಯ ಚಳವಳಿಲ್ಲಿಯೂ ಇದೇ ಆಗಿದೆ. ಮಹಾತ್ಮ ಗಾಂಧಿ ನೇತೃತ್ವದಲ್ಲಿ ಸಂಧಾನಪರ ಪಂಥ ಸೃಷ್ಟಿಯಾಗಿ ಬ್ರಿಟಿಷರಿಗೆ ಕೈಮುಗಿದು ಸ್ವಾತಂತ್ರ್ಯ ಕೇಳುವಂತಾಗಿತ್ತು. ಆದರೆ, ನೇತಾಜಿ, ಭಗತಸಿಂಗ್, ಚಂದ್ರಶೇಖರ ಆಜಾದ್, ಅಶ್ಪಾಖುಲ್ಲಾ ಖಾನ್, ಖುದಿರಾಮ ಬೋಸ್ ಅವರಂತ ಕ್ರಾಂತಿಕಾರಿಗಳ ತಂಡದ ಸಂಧಾನತೀತ ಪಂಥದ ಹೋರಾಟಕ್ಕೆ ಬ್ರಿಟಿಷರು ಬೆದರಬೇಕಾಯ್ತು. ಎಚ್ಚೆತ್ತ ಬ್ರಿಟಿಷರು, ಕ್ರಾಂತಿಕಾರಿಗಳನ್ನು ದೂರವಿಟ್ಟು ಸಂಧಾನಪರ ಪಂಥದ ನಾಯಕರ ಕೈಗೆ ಸ್ವಾತಂತ್ರ್ಯವಿಟ್ಟು ಓಡಿ ಹೋದರು ಎಂದು ಕಳವಳ ವ್ಯಕ್ತಪಡಿಸಿದರು.
ಆರ್‌ಕೆಎಸ್ ರೈತ ಸಂಘದ ಮುಖಂಡ ರಾಘವೇಂದ್ರ ಅಲ್ಲಿಪುರ, ಮಲ್ಲಿನಾಥ ಹುಂಡೇಕಲ್, ಚೌಡಪ್ಪ ಗಂಜಿ, ಶಿವುಕುಮಾರ ಆಂದೋಲಾ, ಶರಣುಕುಮಾರ ದೋಶೆಟ್ಟಿ, ಗೌತಮ ಪರ್ತೂಕರ, ಸಿದ್ದು ಮದ್ರಿ, ನಾಗರಾಜ ಸೂಲಹಳ್ಳಿ, ನಾಗಣ್ಣ ಇಸಬಾ, ದೊಡ್ಡಪ್ಪ ಹೊಸೂರ, ದೇವಿಂದ್ರ ನಾಚವಾರ, ಭೀಮು ಮಾಟ್ನಳ್ಳಿ, ವಿರೇಶ ಮುತ್ತಗಿ, ಅಯ್ಯಪ್ಪ ಹುಳಗೋಳ, ಬಸವರಾಜ ನಾಲವಾರ ಮತ್ತಿತರರು ಇದ್ದರು.
ಏಳು ದಶಕಗಳ ಇತಿಹಾಸ ಇರುವ ಸ್ವಾತಂತ್ರ್ಯ ಭಾರತದಲ್ಲೂ ನಾವಿಂದು ಬಡತನ, ನಿರುದ್ಯೋಗ, ಅಸಮಾನತೆ, ಶೋಷಣೆ, ಜಾತಿಯತೆ, ಬೆಲೆ ಏರಿಕೆಯಂತಹ ಗಂಭೀರ ಸಮಸ್ಯೆಗಳು ಜೀವಂತವಾಗಿರುವುದನ್ನು ಕಾಣುತ್ತೇವೆ. ಹೀಗಾಗಿ ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ಕಂಡ ಕನಸಾಗಿರಲಿಲ್ಲ.
•ಮಲ್ಲಿನಾಥ ಸಿಂಘ, ಎಐಡಿಎಸ್‌ಒ ಜಿಲ್ಲಾಧ್ಯಕ್ಷ