Advertisement

ಜಾಗತಿಕ ನಾಯಕನಾಗಿ ಭಾರತ

01:39 AM May 07, 2022 | Team Udayavani |

ಇತ್ತೀಚೆಗೆ ನಾವು 65 ಗಂಟೆಗಳು, 3 ದೇಶಗಳು, 25 ಸಭೆಗಳು ಮತ್ತು 8 ಪ್ರಮುಖ ನಾಯಕರೊಂದಿಗೆ ಸಂವಾದವನ್ನು ಒಳಗೊಂಡ ಪ್ರಧಾನಿ ಮೋದಿ ಅವರ ಯುರೋಪ್‌ ಭೇಟಿಯ ಬಗ್ಗೆ ನೋಡಿದ್ದೇವೆ. ಪ್ರಧಾನಿ ಮೋದಿ ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಮಯ ಮತ್ತು ಗಮನವನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆಯಾದರೂ, ಆದರೆ ಇದು ಪ್ರವಾಸದ ನಿಜವಾದ ಸಂದೇಶವನ್ನು ತೋರುವುದಿಲ್ಲ.

Advertisement

2022ರ ಫೆ.2ರಂದು, ಪ್ರಧಾನಿ ಮೋದಿ ಅವರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ, ಕೋವಿಡ್‌ ಸಾಂಕ್ರಾಮಿಕ ರೋಗದ ಅನಂತರ ಹಳೆಯ ಪ್ರಪಂಚದ ವ್ಯವಸ್ಥೆ ಹೇಗೆ ಬದಲಾಗುತ್ತಿದೆ ಎಂಬುದರ ಬಗ್ಗೆ ಹೇಳಿದ್ದರು. ಪ್ರಸ್ತುತದ ಜಾಗತಿಕ ಸನ್ನಿವೇಶದಲ್ಲಿ ವಿಸ್ತರಣಾವಾದಿ ಚೀನವು ಏಷ್ಯಾದಲ್ಲೇ ತಾನೇ ಸಾರ್ವಭೌಮ ಎಂದು ಬಿಂಬಿಸಿಕೊಳ್ಳುತ್ತಿದ್ದು, ಇದಕ್ಕೆ ಜಗತ್ತಿನ ಬೇರೆ ಬೇರೆ ದೇಶಗಳಿಂದ ಟೀಕೆ ವ್ಯಕ್ತವಾಗುತ್ತಿದೆ. ಇಂಥ ಹೊತ್ತಿನಲ್ಲಿ ಭಾರತವು ಎಲ್ಲರ ವಿಶ್ವಾಸದೊಂದಿಗೆ ಜಾಗತಿಕ ನಾಯಕನೆಂಬ ತನ್ನ ಹಕ್ಕನ್ನು ಪಡೆದುಕೊಳ್ಳಲು ಇದು ಸಕಾಲವಾಗಿದೆ ಎಂದು ತಿಳಿಸಿದ್ದರು.

ವಿಶ್ವ ನಾಯಕತ್ವವನ್ನು ಪ್ರತಿಪಾದಿಸುವ ಈ ದಿಕ್ಕಿನಲ್ಲಿ ಭಾರತ ನಿಜವಾಗಿಯೂ ಹೇಗೆ ಸಾಗಿದೆ ಎಂಬುದನ್ನು ಕಳೆದ ಎರಡು ವರ್ಷಗಳು ತೋರಿಸಿವೆ. ಕಠಿನ ಲಾಕ್‌ಡೌನ್‌ಗಳೊಂದಿಗೆ ಸಾಂಕ್ರಾಮಿಕ ರೋಗವನ್ನು ಹೇಗೆ ನಿಭಾಯಿಸುವುದು ಮತ್ತು ಮುಖ್ಯವಾಗಿ ಕೋಟ್ಯಂತರ ಭಾರತೀಯರಿಗೆ ಭಾರತದಲ್ಲಿ ತಯಾರಿಸಿದ ಲಸಿಕೆಯನ್ನು ನೀಡುವುದು ದೊಡ್ಡ ಮಟ್ಟದ ಸಾಧನೆಯೇ ಸರಿ. ಇದರಿಂದಾಗಿ ಭಾರತದ ಕೀರ್ತಿ ಅಂತಾರಾಷ್ಟ್ರೀಯ ಮಟ್ಟಕ್ಕೂ ವ್ಯಾಪಿಸಿದೆ. ಈ ಮೂಲಕ ಭಾರತವು ತನ್ನದೇ ಆದ ಸಮಸ್ಯೆಗಳನ್ನು ನಿಭಾಯಿಸಲು ಸಮರ್ಥವಾಗಿದೆ ಎಂಬ ಸಂದೇಶವನ್ನು ಸ್ಪಷ್ಟವಾಗಿ ಸಾರಿದೆ.

ಈಗಾಗಲೇ ಯೋಗ ದಿನ/ಮೇಕ್‌ ಇನ್‌ ಇಂಡಿಯಾ ಫ‌ಲ ನೀಡಲು ಪ್ರಾರಂಭಿಸಿದೆ. 2021-22ರಲ್ಲಿ 400 ಬಿಲಿಯನ್‌ ಮೌಲ್ಯದ ಸರಕುಗಳನ್ನು ರಫ್ತು ಮಾಡುವ ಮೂಲಕ ಭಾರತವು ರಫ್ತು ರಂಗದಲ್ಲಿ ಮೈಲಿಗಲ್ಲು ಸಾಧಿಸಿದೆ. ಡೆನ್ಮಾರ್ಕ್‌ನಲ್ಲಿ ನಡೆದ ಇಂಡೋ-ನಾರ್ಡಿಕ್‌ ಸಮ್ಮೇಳನ ಮತ್ತು ಜರ್ಮನಿಯ ಐಜಿಸಿ, ಫ್ರಾನ್ಸ್‌ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲು ಪ್ಯಾರಿಸ್‌ಗೆ ಭೇಟಿ ನೀಡಿದ್ದನ್ನು ಹೊರತುಪಡಿಸಿದರೆ, ಎರಡು ಪ್ರಮುಖ ಕಾರಣಗಳಿಗಾಗಿ ಮಹತ್ವದ್ದಾಗಿತ್ತು. ಉಕ್ರೇನ್‌ ಯುದ್ಧದ ವಿಚಾರದಲ್ಲಿ ಭಾರತದ ಸ್ವತಂತ್ರ ನಿಲುವು ವಿಶ್ವ ವ್ಯವಸ್ಥೆಯಲ್ಲಿ ಗಟ್ಟಿತನ ಪ್ರದರ್ಶಿಸಿದೆ. ರಷ್ಯನ್‌ ಆಮದನ್ನು ಕಡಿತಗೊಳಿಸುವಂತೆ ಭಾರತದ ಮೇಲೆ ಐರೋಪ್ಯ ಒಕ್ಕೂಟದ ಒತ್ತಡವು ಎಂದಿಗೂ ಕೆಲಸ ಮಾಡಲಿಲ್ಲ. ಸ್ವಹಿತಾಸಕ್ತಿಯನ್ನು ರಕ್ಷಿಸುವ ಭಾರತದ ಉದ್ದೇಶವು, ಜಾಗತಿಕ ಹಿತಾಸಕ್ತಿಗಳನ್ನು ಸಮತೋಲನಗೊಳಿಸಿ ಮಾತುಕತೆಯ ಮೂಲಕ ಯುದ್ಧವನ್ನು ಕೊನೆಗಾಣಿಸಲು ಕರೆ ನೀಡಲಾಯಿತು. ಎಷ್ಟೋ ಅವಧಿಯ ಬಳಿಕ ನಮ್ಮ ಸ್ವತಂತ್ರ ನಿಲುವನ್ನು ಹಲವಾರು ದೇಶಗಳು ನೋಡಿವೆ ಮತ್ತು ಒಪ್ಪಿಕೊಂಡಿವೆ.

ಪ್ರಧಾನಿ ಮೋದಿ ನೇತೃತ್ವದ ಭಾರತ ಉಜ್ವಲ ಭವಿಷ್ಯ ಹೊಂದಿದೆ. ಮೇಕ್‌ ಇನ್‌ ಇಂಡಿಯಾ, ಪಿಎಲ್ ಐ ಯೋಜನೆಗಳು ಮತ್ತು ಆತ್ಮನಿರ್ಭರ ಭಾರತ ದೃಷ್ಟಿಕೋನವು ಭಾರತವನ್ನು ಹಿಂದೆಂದಿಗಿಂತಲೂ ಹೆಚ್ಚು  ಸ್ವಾವಲಂಬಿಯಾಗಿಸಿದೆ. ಆದರೆ ಮೋದಿ ಅವರು ನಮ್ಮ ದೇಶದ ಭವಿಷ್ಯದ ಅಗತ್ಯಗಳ ಬಗ್ಗೆ ತಿಳಿದಿದ್ದಾರೆ. ಆದ್ದರಿಂದ ಕೃತಕ  ಬುದ್ಧಿಮತ್ತೆ, ಕ್ವಾಂಟಮ್‌ ಕಂಪ್ಯೂಟಿಂಗ್‌, ಭವಿಷ್ಯದ ಮೊಬೈಲ್‌ ಟೆಕ್‌, ಕ್ಲೀನ್‌ ಟೆಕ್‌ ಮತ್ತು ಸ್ಮಾರ್ಟ್‌ ಗ್ರಿಡ್‌ಗಳಂತಹ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಭಾರತ ಮತ್ತು  ಐರೋಪ್ಯ ಒಕ್ಕೂಟದ ನಡುವೆ ಉತ್ತಮ ಸಹಭಾಗಿತ್ವ ಇರಲಿದೆ. ಇದರ ಜತೆಯಲ್ಲೇ ನಾವು ಇಲ್ಲಿ ಹಸುರು ಇಂಧನವನ್ನು ಮರೆಯಬಾರದು. ಭಾರತದ ಮುಕ್ತ ವ್ಯಾಪಾರ ಒಪ್ಪಂದವು ಆರ್‌ಸಿಇಪಿ ತರಹ ಇರದೇ ಎಲ್ಲ ರಾಷ್ಟ್ರಗಳಿಗೂ ಅನುಕೂಲಕರವಾಗಲಿದೆ. ಆರ್‌ಸಿಇಪಿಯಿಂದ ಹೊರಬರುವುದರ ಮೂಲಕ ಭಾರತ ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಇಂಗಿತವನ್ನು ಜಗಜ್ಜಾಹೀರು ಮಾಡಿದೆ.

Advertisement

ಒಟ್ಟಾರೆಯಾಗಿ ಹೇಳುವುದಾದರೆ- ಪ್ರಧಾನಿ ಮೋದಿ ಐರೋಪ್ಯ ರಾಷ್ಟ್ರಗಳ ಜತೆಗಿನ ವ್ಯಾಪಾರ ಮತ್ತು ಸ್ನೇಹ ಹಸ್ತವನ್ನು ತಮ್ಮ ಸಾಮರ್ಥ್ಯದಿಂದ ವಿಸ್ತರಿಸಿದ್ದಾರೆಯೇ ಹೊರತು ದೌರ್ಬಲ್ಯ ಅಥವಾ ಅಸಹಾಯಕತೆಯ ಸ್ಥಾನದಿಂದಲ್ಲ. ಹೊಸ ಜಾಗತಿಕ ಕ್ರಮದಲ್ಲಿ ಭಾರತವು ವಿಶ್ವ ನಾಯಕನ ಸ್ಥಾನಕ್ಕೆ ಹಕ್ಕುದಾರವಾಗಿದೆ ಎಂಬ ಸಂದೇಶವು ಸ್ಪಷ್ಟವಾಗಿದೆ. ಈ 3 ದಿನಗಳಲ್ಲಿ ನಡೆದ ಇತರ ಘಟನೆಗಳು ಭಾರತೀಯ ಜಾಗತಿಕ ನಾಯಕತ್ವದ ಸಂದೇಶ ವಾಹಕಗಳಾಗಿವೆ.

ಭಾರತ ತನ್ನ ಹೊಸ ಸಾಮರ್ಥ್ಯವನ್ನು ಇತ್ತೀಚಿನ ದಿನಗಳಲ್ಲಿ ಹೀಗೆ ತೋರಿಸಿದೆ…ರಾಷ್ಟ್ರೀಯ ಸುರಕ್ಷತೆ ಪ್ರಶ್ನೆ ಬಂದಾಗ ಪಾಕಿಸ್ಥಾನ ಹಾಗು ಚೀನ ಎರಡಕ್ಕೂ ತಕ್ಕ ಉತ್ತರ ಕೊಟ್ಟು ಜಗತ್ತಿನ ಬೆಂಬಲವನ್ನು ಕೂಡ ಗಿಟ್ಟಿಸಿಕೊಂಡಿದೆ. 2030ರ ಒಳಗೆ 5 ಟ್ರಿಲಿಯನ್‌ ಡಾಲರ್‌ ಆರ್ಥಿಕ ವ್ಯವಸ್ಥೆ ಆಗುವ ಎಲ್ಲ ಹೆಜ್ಜೆಗಳನ್ನು ಇಟ್ಟಿದೆ. ಅಂತಾರಾಷ್ಟ್ರೀಯವಾಗಿ ಎಲ್ಲ ದೇಶಗಳೊಡನೆ ಸಂಬಂಧ ಬೆಳೆಸುತ್ತಾ 400 ಬಿಲಿಯನ್‌ ಡಾಲರ್‌ ರಫ್ತು¤ ಮಾಡಿದೆ. ಜಗತ್ತಿನ ಕೆಲವೇ ದೇಶಗಳಲ್ಲಿ ಒಂದಾಗಿ ತನ್ನ ಸ್ವಂತ ಬಲದ ಮೇಲೆ ಲಸಿಕೆ ತಯಾರಿಸಿ 190 ಕೋಟಿ ಲಸಿಕೆ ಕೊಟ್ಟಿದೆ. ಮುಖ್ಯವಾಗಿ ಅಂತಾರಾಷ್ಟ್ರೀಯವಾಗಿ ಯಾರ ಬಲವಂತಕ್ಕೂ ಮಣಿಯದೇ ನಿರ್ಧಾರಗಳನ್ನು ತನ್ನದೇ ಆದ ಸ್ವಂತಿಕೆಯನ್ನು ತೋರುತ್ತಾ ತೆಗೆದುಕೊಂಡಿದೆ.(ಉದಾ: ರಷ್ಯಾದಿಂದ ತೈಲ ಆಮದು ವಿಚಾರ) ಕಡೆಯದಾಗಿ ವಸುಧೈವ ಕುಟುಂಬಕಂ ಎಂಬ ಮಾತನ್ನು ನಿಜಗೊಳಿಸುತ್ತಾ ಲಸಿಕೆ, ಕೋವಿನ್‌ ಆ್ಯಪ್‌ ಗಳನ್ನೂ 70ಕ್ಕೂ ಮೀರಿ ದೇಶಗಳಿಗೆ ಸಹಾಯ ನೀಡಿದೆ.

ಈ ಎಲ್ಲದರ ಪರಿಣಾಮ ಭಾರತ ಇಂದು ನೂತನ ಜಾಗತಿಕ ಕ್ರಮದಲ್ಲಿ ತನ್ನದೇ ಆದ ಜಾಗವನ್ನು ಕಂಡುಹಿಡಿಯುವುದರತ್ತ ದಾಪುಗಾಲು ಹಾಕಿದೆ. ಇದರ ಒಂದು ಅಂಗವೇ ಮೂರು ದಿನಗಳ ಯುರೋಪ್‌ ಪ್ರವಾಸ. ಜಗತ್ತಿಗೆ ತನ್ನ ಸಾತ್ವಿಕ ಶಕ್ತಿಯನ್ನು ತೋರಿಸುವ ವಿಶ್ವಾಸ ಹಾಗು ಅಶಾಂತಿಯನ್ನು ತಡೆಯುವ ಆಶ್ವಾಸನೆ – ಎರಡನ್ನೂ ಮೋದಿಯವರು ಜಗತ್ತಿನ ಹಿರಿಯಣ್ಣನ ಹಾಗೆ ತೋರಿದ್ದಾರೆ.

-ಡಾ| ಸಮೀರ್‌ ಕಾಗಲ್ಕರ್‌
ಆರ್ಥಿಕ ತಜ್ಞ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next