Advertisement

By polls ಇಂಡಿಯಾ ಮೈತ್ರಿಕೂಟಕ್ಕೆ ಉತ್ತೇಜನ ; ವಿಪಕ್ಷಗಳಿಗೆ 4, ಬಿಜೆಪಿಗೆ 3

09:26 PM Sep 08, 2023 | Team Udayavani |

ಹೊಸದಿಲ್ಲಿ: ಆರು ರಾಜ್ಯಗಳ ಏಳು ವಿಧಾನಸಭಾ ಸ್ಥಾನಗಳಿಗೆ ಸೆಪ್ಟೆಂಬರ್ 5 ರಂದು ನಡೆದಿದ್ದ ಉಪಚುನಾವಣೆಯ ಮತ ಎಣಿಕೆ ಶುಕ್ರವಾರ ನಡೆಯಿತುದ್ದು, ದೊಡ್ಡ ಉತ್ತೇಜನ ಎಂಬಂತೆ ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಮೇಲುಗೈ ಸಾಧಿಸಿದ್ದು, ಬಿಜೆಪಿ 3 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

Advertisement

ತ್ರಿಪುರಾದ ಬೊಕ್ಸಾನಗರ ಮತ್ತು ಧನ್‌ಪುರ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದ್ದು, ಅಭ್ಯರ್ಥಿಗಳಾದ ತಫಜ್ಜಲ್ ಹೊಸೈನ್ ಮತ್ತು ಬಿಂದು ದೇಬನಾಥ್ ಅವರು ಕ್ರಮವಾಗಿ 30,237 ಮತ್ತು 18,871 ಮತಗಳ ಅಂತರದಿಂದ ಜಯಗಳಿಸಿದರು. ಉತ್ತರಾಖಂಡದ ಬಾಗೇಶ್ವರ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡಿದ್ದು, ಅಭ್ಯರ್ಥಿ ಪಾರ್ವತಿ ದಾಸ್ ಕಾಂಗ್ರೆಸ್‌ ಅಭ್ಯರ್ಥಿ ಬಸಂತ್ ಕುಮಾರ್ ಅವರನ್ನು 2,400 ಮತಗಳಿಂದ ಸೋಲಿಸಿದ್ದಾರೆ.

ಕೇರಳದಲ್ಲಿ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ 50 ವರ್ಷಗಳ ಕಾಲ ಪ್ರತಿನಿಧಿಸಿದ್ದ ಪುತ್ತುಪ್ಪಲ್ಲಿ ಕ್ಷೇತ್ರವನ್ನು ಕಾಂಗ್ರೆಸ್ ಉಳಿಸಿಕೊಂಡಿದೆ. ಉಮ್ಮನ್ ಚಾಂಡಿ ಅವರ ಪುತ್ರ 37ರ ಹರೆಯದ ಚಾಂಡಿ ಉಮ್ಮನ್ ಆಡಳಿತಾರೂಢ ಸಿಪಿಐ(ಎಂ) ಅಭ್ಯರ್ಥಿ ಜೈಕ್ ಸಿ ಥಾಮಸ್ ಅವರನ್ನು 36,000 ಮತಗಳಿಂದ ಸೋಲಿಸಿದ್ದಾರೆ. ಜುಲೈನಲ್ಲಿ ಉಮ್ಮನ್ ಚಾಂಡಿ ನಿಧನ ಹೊಂದಿದ್ದರು. ಇಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷಗಳ ನಡುವೆಯೇ ಸ್ಪರ್ಧೆ ನಡೆದಿದೆ. ಬಿಜೆಪಿ ಅಭ್ಯರ್ಥಿ ಲಿಜಿನ್ ಲಾಲ್ 6558 ಮತಗಳನ್ನು ಪಡೆದಿದ್ದಾರೆ.

ಜಾರ್ಖಂಡ್ ನಲ್ಲಿ ಇಂಡಿಯಾ ಮೈತ್ರಿಕೂಟದ ಮಿತ್ರ ಪಕ್ಷವಾಗಿರುವ ಜಾರ್ಖಂಡ್ ಮುಕ್ತಿ ಮೋರ್ಚಾದ ಬೇಬಿ ದೇವಿ ಅವರು ಡುಮ್ರಿ ಉಪಚುನಾವಣೆಯಲ್ಲಿ 17,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ, ಹತ್ತಿರದ ಪ್ರತಿಸ್ಪರ್ಧಿ AJSU ನ ಯಶೋದಾ ದೇವಿ ಅವರನ್ನು ಸೋಲಿಸಿದರು.

ಕೇರಳ ದಂತೇ ಇಂಡಿಯಾ ಮೈತ್ರಿಕೂಟಕ್ಕೆ ಸಂದಿಗ್ಧವಾಗಿದ್ದ ಪಶ್ಚಿಮ ಬಂಗಾಳದ ಧುಪ್ಗುರಿ ಕ್ಷೇತ್ರವನ್ನು ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಬಿಜೆಪಿಯಿಂದ ವಶಪಡಿಸಿಕೊಂಡಿದೆ. 4,300 ಮತಗಳಿಂದ ಸೋಲಿಸಿದೆ. ಕಾಂಗ್ರೆಸ್ ಸ್ಪರ್ಧಿಸಿರಲಿಲ್ಲ. ಸಿಪಿಐ(ಎಂ) ಅಭ್ಯರ್ಥಿ ಕಣದಲ್ಲಿದ್ದರು.

Advertisement

ಉತ್ತರ ಪ್ರದೇಶದ ಘೋಸಿ ಕ್ಷೇತ್ರದಲ್ಲಿ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವು ಇಂಡಿಯಾ ಮೈತ್ರಿಕೂಟದ ಪಾಲುದಾರರ ಬೆಂಬಲದೊಂದಿಗೆ ಗೆಲುವು ಸಾಧಿಸಿದೆ. ಬಿಜೆಪಿಯನ್ನು 42,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿ ಸಂಭ್ರಮಿಸಿದೆ.

ಈ ವರ್ಷಾಂತ್ಯದಲ್ಲಿ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು, 2024ರಲ್ಲಿ ನಡೆಯಲಿರುವ ನಿರ್ಣಾಯಕ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕೂಟ (ಇಂಡಿಯಾ) ಬಣಕ್ಕೆ ಉಪಚುನಾವಣೆ ಫಲಿತಾಂಶ ಪರೀಕ್ಷೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next