Advertisement

ವೈಯಕ್ತಿಕ ಟೀಕೆ ಎದುರಿಸುತ್ತೇನೆ, ಜಾತಿ ರಾಜಕಾರಣ ಖಂಡಿಸುತ್ತೇನೆ

12:27 PM Apr 06, 2019 | Sriram |

ಬೆಂಗಳೂರು: ನನ್ನ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡಿದಾಗ ನೋವಾದರೂ ಅದನ್ನು ಎದುರಿಸುತ್ತೇನೆ. ಅಷ್ಟರ ಮಟ್ಟಿಗೆ ನನಗೆ ಮಾನಸಿಕ ಗಟ್ಟಿತನ ಇದೆ. ಆದರೆ, ಜಾತಿ ರಾಜಕಾರಣವನ್ನು ಒಪ್ಪಲು ಸಾಧ್ಯವೇ ಇಲ್ಲ. ಅದನ್ನು ಇದು ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ರ ದೃಢ ನುಡಿ.

Advertisement

ಬೆಂಗಳೂರು ಪ್ರಸ್‌ಕ್ಲಬ್‌ ಗುರುವಾರ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು. ನನ್ನ ನಡೆ ಸರಿಯೇ ಎಂಬ ಬಗ್ಗೆ ಆತಂಕದಿಂದ ಕಣ್ಣೀರು ಹಾಕುತ್ತಿದ್ದೆ. ಆದರೆ, ನನಗೆ ಈಗ ಯಾವುದೇ ಅಂಜಿಕೆ ಇಲ್ಲ. ಮಂಡ್ಯದ ಜನರ ಸಮಸ್ಯೆಗೆ ಸ್ಪಂದಿಸಲು ಹಾಗೂ ಅನ್ಯಾಯದ ವಿರುದ್ಧ ಹೋರಾಡಲು ದೇವರೇ ಶಕ್ತಿ ನೀಡಿ ಈ ಸಂದರ್ಭ ಸೃಷ್ಟಿಸಿದ್ದಾನೆ ಎನ್ನಿಸಿದೆ. ಚುನಾವಣೆಯಲ್ಲಿ ಗೆದ್ದರೆ ಮಂಡ್ಯದ ಜನರ ಅಭಿಪ್ರಾಯದಂತೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆಎಂದರು.

– ನಾನು ತಿರುಚಿದ ಹಾಗೂ ಕುತಂತ್ರದ ರಾಜಕಾರಣವನ್ನು ನಿರೀಕ್ಷಿಸಿರಲಿಲ್ಲ. ಅಂಬರೀಶ್‌, ಈ ರೀತಿಯ ರಾಜಕಾರಣ ಮಾಡಿಲ್ಲ. ಅವರು ನೇರ-ನಿಷ್ಠುರವಾಗಿದ್ದರು. ಅವರೇ ನನಗೆ ಸ್ಫೂರ್ತಿ.
– ಇದೊಂದು ಭಾವನಾತ್ಮಕ ಪಯಣ. ಮಂಡ್ಯ ಜನರ ಅಭಿಪ್ರಾಯದಂತೆ ಸ್ಪರ್ಧೆಗೆ ನಿರ್ಧರಿಸಿದೆ.
– ನಾನೀಗ ಕೆಲ ವಾರಗಳ ಹಿಂದಿನ ಸುಮಲತಾ ಅಲ್ಲ. ಮಂಡ್ಯ ಜನ ತೋರುತ್ತಿರುವ ಪ್ರೀತಿ, ಸ್ಪಂದನೆ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮಂಡ್ಯದ ಬಗೆಗಿನ ಅಂಬರೀಶ್‌ ಕನಸನ್ನು ನನಸು ಮಾಡುವುದೇ ನನ್ನ ಉದ್ದೇಶ.
– ನನಗೆ ಬಿಜೆಪಿ, ರಾಜ್ಯ ರೈತಸಂಘ ಬೆಂಬಲ ಸೂಚಿಸಿವೆ. ನಾನು ಮನವಿ ಮಾಡದಿದ್ದರೂ ಕಾಂಗ್ರೆಸ್‌ನ ಕೆಲ ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರಿಗೆ ಇದು ಅಳಿವು ಉಳಿವಿನ ಪ್ರಶ್ನೆಯಾಗಿದೆ.
– ನನಗೆ ಜೆಡಿಎಸ್‌ನಲ್ಲೂ ಆಪ್ತರಿದ್ದಾರೆ. ಅವರ ವಿರೋಧ ಕಟ್ಟಿಕೊಂಡು ಸ್ಪರ್ಧಿಸಬೇಕೇ ಎಂಬ ಗೊಂದಲವಿತ್ತು. ಅಂಬರೀಶ್‌ ಅಜಾತಶತ್ರುವಾಗಿದ್ದರು. ಆದರೀಗ ನನ್ನ ನಿರ್ಧಾರ ಸರಿ ಎನಿಸಿದೆ.
– ಪಕ್ಷೇತರಳಾಗಿ ನಾನು ಪ್ರಬಲ ಅಭ್ಯರ್ಥಿ ವಿರುದ್ಧ ಸ್ಪರ್ಧಿಸಿದ್ದೇನೆ. ಕಾಂಗ್ರೆಸ್‌ ನಾಯಕರು ಬೆಂ.ದಕ್ಷಿಣ, ಬೆಂ.ಉತ್ತರ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ನೀಡುವುದಾಗಿ ತಿಳಿಸಿದರು. ರಾಜ್ಯಸಭಾ ಸದಸ್ಯರನ್ನಾಗಿ ಮಾಡುವುದಾಗಿ ಭರವಸೆ ನೀಡಿದರು. ಜೆಡಿಎಸ್‌, ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿ ಅಗತ್ಯಬಿದ್ದರೆ ಸಚಿವೆ ಮಾಡುವ ಭರವಸೆ ನೀಡಿತ್ತು. ಆದರೆ, ಜನಾಭಿಪ್ರಾಯದಂತೆ ಪಕ್ಷೇತರಳಾಗಿ ಸ್ಪರ್ಧಿಸಲು ನಿರ್ಧರಿಸಿದೆ.
– ಆರು ತಿಂಗಳ ಕಾಲ ಸಂಸದರಾಗಿದ್ದ ಶಿವರಾಮೇಗೌಡರಿಗೆ ಪಕ್ಷದಲ್ಲಿ ಮಹತ್ವ ಸಿಗದ ಕಾರಣ ಹತಾಶೆಗೊಂಡಿದ್ದಾರೆ. ಅವರ ಮಾತುಗಳಿಗೆ ಹೆಚ್ಚು ಮಹತ್ವ ನೀಡುವ ಅಗತ್ಯವಿಲ್ಲ.
– ಟೀಕಿಸುವುದು, ಕೆಟ್ಟ ಮಾತನಾಡುವುದು ಸಭ್ಯತೆಯಲ್ಲ. ಅನ್ಯಾಯದ ವಿರುದ್ಧ ಹೋರಾಟ ಮಾಡುವ ಪ್ರತಿ ಮಹಿಳೆಯಲ್ಲಿ ಕಾಳಿ ಇರುತ್ತಾಳೆ. ನನ್ನ ತಾಳ್ಮೆ ಇಂದಿನದಲ್ಲ. ನಟನೆಯನ್ನೂ ಮಾಡುತ್ತಿಲ್ಲ. ಅಂಬರೀಶ್‌ ಅವರೊಂದಿಗೆ 27 ವರ್ಷ ಸಂಸಾರ ನಡೆಸಿದ್ದೇನೆ ಎಂದರೆ ನನಗೆಷ್ಟು ತಾಳ್ಮೆ ಇರಬೇಕು ಯೋಚಿಸಿ.
– ನಿಖೀಲ್‌ ನಾಮಪತ್ರದಲ್ಲಿ ಇದ್ದ ದೋಷ ಹಾಗೂ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ಆಯೋಗಕ್ಕೆ ದೂರು ನೀಡಿದ್ದೇನೆ. ಪರಿಶೀಲನೆ ನಡೆಯುತ್ತಿದೆ.
– ನಾನು ಶೀಘ್ರವೇ ಪ್ರಣಾಳಿಕೆ ಬಿಡುಗಡೆ ಮಾಡುತ್ತೇನೆ.
– ನನ್ನ ಐಡೆಂಟಿಟಿ ಪ್ರಶ್ನಿಸಿದವರಿಗೆ ಹುಚ್ಚೇಗೌಡರ ಸೊಸೆ, ಅಂಬರೀಶ್‌ ಧರ್ಮಪತ್ನಿ, ಅಭಿಷೇಕ್‌ ತಾಯಿ ಎಂದು ಹೇಳಿದೆ. ನಾನು ಮದುವೆಯಾದ ಮೇಲೆ ಪತಿಯಲ್ಲಿಯೇ ಸಂಪೂರ್ಣ ವಿಲೀನಳಾದ ಬಳಿಕ ಬೇರೆ ಪ್ರಶ್ನೆ ಮೂಡದು. ಆದರೂ, ಜಾತಿ ರಾಜಕಾರಣ ಸರಿಯಲ್ಲ.
– ಮಂಡ್ಯಕ್ಕೆ 5,000 ಕೋಟಿ ರೂ.ನೀಡಲಾಗಿದೆ ಎಂದು ಸಿಎಂ ಹೇಳುತ್ತಿದ್ದಾರೆ. ಇದು ಬಜೆಟ್‌ನಲ್ಲಿ ಘೋಷಣೆಯಾಗಿದೆಯೇ?. ಸಚಿವ ಸಂಪುಟದಿಂದ ಅನುಮೋದನೆಯಾಗಿದೆಯೇ?. ಡಿಪಿಆರ್‌ ಆಗಿದೆಯೇ ಪರಿಶೀಲಿಸಬೇಕು.
– ಪುತ್ರನನ್ನು ಗೆಲ್ಲಿಸಿದರೆ ಮಾತ್ರ ಅಭಿವೃದ್ಧಿಯಾಗುತ್ತದೆ ಎಂಬುದು ಎಷ್ಟು ಸರಿ. ಜೆಡಿಎಸ್‌ನ ಭದ್ರಕೋಟೆ ಎನ್ನುತ್ತಾರೆ. ಎಂಟು ಶಾಸಕರಿದ್ದಾರೆ, ಮೂವರು ಸಚಿವರಿದ್ದಾರೆ. ಹಾಗಾದರೆ ಅವರ ಪಾತ್ರವೇನು?.
– ದೇವೇಗೌಡರ ಬಗ್ಗೆ ಗೌರವವಿದೆ. ಈ ಹಿಂದೆ ಅಂಬರೀಶ್‌ ಪರ ಪ್ರಚಾರ ಮಾಡಿದ್ದರು. ಆದರೆ, ಅಂಬರೀಶ್‌ ವಿರುದ್ಧ ವೈಯಕ್ತಿಕವಾಗಿ ಟೀಕೆ ಮಾಡಿರಲಿಲ್ಲ.

ರಜನಿ, ಚಿರಂಜೀವಿ ಪ್ರಚಾರಕ್ಕೆ ಬರಲ್ಲ:
– ರಜನೀಕಾಂತ್‌, ಚಿರಂಜೀವಿ ನನ್ನ ಪರ ಪ್ರಚಾರ ನಡೆಸುತ್ತಾರೆ ಎಂಬುದೆಲ್ಲಾ ಊಹಾಪೋಹ. ನಟರಾದ ದರ್ಶನ್‌, ಯಶ್‌ ಅವರು ಕುಟುಂಬ ಸದಸ್ಯರಾಗಿ ಪ್ರಚಾರಕ್ಕೆ ಬರುತ್ತಿದ್ದಾರೆಯೇ ಹೊರತು ನಟರಾಗಿ ಅಲ್ಲ.
– ದರ್ಶನ್‌, ಯಶ್‌ ಅವರ ಅಭಿಮಾನಿಗಳು ಶೇ.100ರಷ್ಟು ಮತ ಹಾಕುತ್ತಾರೆ ಎಂದು ಹೇಳುತ್ತಿಲ್ಲ. ಆದರೆ, ನನ್ನ ವಿರುದ್ಧ ಮತ ಹಾಕುವುದಿಲ್ಲ ಎಂಬ ವಿಶ್ವಾಸವಿದೆ.
– ಸುದೀಪ್‌ ನಿಲುವನ್ನು ಗೌರವಿಸುತ್ತೇನೆ. ನಾನು ಪ್ರಚಾರ ನಡೆಸುವಂತೆ ಯಾರಿಗೂ ಒತ್ತಾಯ ಮಾಡಿಲ್ಲ. ದರ್ಶನ್‌, ಯಶ್‌ಗೂ ಒತ್ತಡ ಹೇರಿಲ್ಲ.
– ನನ್ನ ಪರವಾಗಿ ಪ್ರಚಾರಕ್ಕೆ ಬಂದ ನಟರ ಜಾತಿ ಪ್ರಸ್ತಾಪಿಸುವುದು, ಇತರ ನಟರಿಗೆ ಹೋಲಿಸುವುದು ಎಷ್ಟು ಸರಿ. ಇವರ ಸರ್ಟಿಫಿಕೇಟ್‌ ಅವರಿಗೆ ಬೇಕಿಲ್ಲ.

ಸಾಲಮನ್ನಾ ಮೋಸವಲ್ಲವೇ?
ಮುಖ್ಯಮಂತ್ರಿಯವರು ಸಾಲಮನ್ನಾ ಘೋಷಣೆ ಚಿಂತನೆ ನಡೆಸಿದ್ದರು. ಆ ಸಂದರ್ಭದಲ್ಲಿ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎನ್‌.ಎಸ್‌.ಪ್ರಸಾದ್‌ ಅವರು ನಮ್ಮ ಮನೆಗೆ ಬಂದಿದ್ದರು. ಅವರು, ಸರ್‌ ನಿಮ್ಮ ಸ್ನೇಹಿತರಿಗೆ ಸಾಲಮನ್ನಾ ಘೋಷಣೆ ಮಾಡದಂತೆ ಹೇಳಿ. ಈಗಾಗಲೇ ರಾಜ್ಯದ ಖಜಾನೆ ಖಾಲಿಯಾಗಿದೆ. ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣವಿಲ್ಲ. ನಮ್ಮಿಂದ ಇದು ಸಾಧ್ಯವಿಲ್ಲ. ಈ ಭರವಸೆ ನೀಡದಂತೆ ಹೇಳಿ ಎಂದು ಅಂಬರೀಶ್‌ ಬಳಿ ಮಾತನಾಡಿದ್ದರು. ವಾಸ್ತವ ಗೊತ್ತಿದ್ದು, ಘೋಷಣೆ ಮಾಡಿರುವುದು ಮೋಸವಲ್ಲವೇ?. ಇಂತಹ ಹಲವು ವಿಚಾರಗಳನ್ನು ಬಹಿರಂಗವಾಗಿ ಹೇಳಲಾಗದು.

Advertisement

ಸಚಿವ ಪುಟ್ಟರಾಜು ಹೇಳಿದಂತೆ ನಾನು ರಾಜಕೀಯ ಮಾಡಲು ಬಂದಿಲ್ಲ. ರಾಜಕೀಯ ಮಾಡಲು ಹೋಗುವುದೂ ಇಲ್ಲ. ಅನುದಾನ ಎಂದರೇನು ಎಂಬ ಬಗ್ಗೆ ಪುಟ್ಟರಾಜು ಅವರಿಗೆ ನಾನು ಉತ್ತರ ನೀಡಬೇಕಿಲ್ಲ. ಮಂಡ್ಯದ ಜನತೆಗೆ ಹೇಳುತ್ತೇನೆ.
– ಸುಮಲತಾ, ಮಂಡ್ಯ ಪಕ್ಷೇತರ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next