ಶಿರಸಿ: ಸ್ವಾತಂತ್ರ್ಯಕ್ಕಾಗಿ ಅಂದು ಘೋಷಣೆ ಮಾಡಿದ್ದೆವು. ಈಗ ದೇಶದ ಉಳಿವಿಗೋಸ್ಕರ ಎಲ್ಲರೂ ಒಟ್ಟಾಗಿ ಘೋಷಣೆ ಮಾಡಿ ಕಾರ್ಯತತ್ಪರಾಗಬೇಕು ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ನಗರದ ಮರಾಠಿಕೊಪ್ಪದ ಅಂಜನಾದ್ರಿ ಮಾರುತಿ ದೇವಸ್ಥಾನದಲ್ಲಿ ಹಿಂದೂ ಜಾಗರಣಾ ವೇದಿಕೆ ಹಮ್ಮಿಕೊಂಡಿದ್ದ ಅಖಂಡ ಭಾರತ ಸಂಕಲ್ಪ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
75 ವರ್ಷದ ಹಿಂದೆ ಬ್ರಿಟಿಷರೇ ಭಾರತ ಬಿಟ್ಟು ಹೋಗಿ, ನಮಗೆ ಸ್ವಾತಂತ್ರ್ಯ ಕೊಡಿ ಒಂದೇ ಘೊಷಣೆ ಇತ್ತು. 75 ವರ್ಷದ ನಂತರ ದೇಶ ಉಳಿಸಿ ಘೋಷಣೆ ಮಾಡಬೇಕಿದೆ ಎಂದರು.
ಆ.14ರ ರಾತ್ರಿಯನ್ನು ಕರಾಳ ರಾತ್ರಿ ಆಚರಿಸಬೇಕು ಎಂದು ಪ್ರಧಾನಿ ಮೋದಿ ಘೋಷಿಸಿದ್ದರು. ಅಂದಿನ ಆಘಾತಕಾರಿ ವಿಷಯ ನೆನಪು ಮಾಡಲು ಅವರು ಈ ಘೋಷಣೆ ಮಾಡಿದ್ದರು. ಅಖಂಡ ಭಾರತ ತುಂಡಾಗಿ ಪಾಕಿಸ್ತಾನ ಆದ ದಿನವೂ ಅದಾಗಿದ್ದು ಇದಕ್ಕೆ ಕಾರಣ. ನಮ್ಮ ನೆಲ, ಸಿಂಧು ನದಿ ಪಾಕಿಸ್ತಾನದ ಪಾಲಾಯಿತು. ಅದು ಮತ್ತೆ ಭಾರತಕ್ಕೆ ವಾಪಸ್ ಬರಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಅಖಂಡ ಭಾರತ ಸಂಕಲ್ಪ ದಿನವನ್ನು ಆಚರಿಸುತ್ತಾ ಬಂದಿದೆ ಎಂದರು.
ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆ ಮಾಡಬೇಕಾದದನ್ನು ಮಾಡಿಲ್ಲ ಎಂದು ದೂರಿದರು.
ಹಿಂದೂ ಪರ ದುಡಿದ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಬಿಜೆಪಿಯವರೇ ನಿಮ್ಮನ್ನು ಆಯ್ಕೆ ಮಾಡಿದ್ದು ಹಿಂದೂತ್ವಕ್ಕಾಗಿ, ಬಿಜೆಪಿ ನಿಮ್ಮದೊಂದೆ ಅಲ್ಲ ಅದರಲ್ಲಿ ಪ್ರತಿಯೊಬ್ಬ ಹಿಂದೂ ಕಾರ್ಯಕರ್ತರ ಬೆವರಿದೆ. ಹಿಂದೂಗಳ ಪರ ಕೆಲಸ ಮಾಡಿ, ಹಿಂದೂ ಸಮಜದ ತಾಕತ್ತು ಹಿಂದೂ ಸಂಘಟನೆಗಳಲ್ಲಿದೆ ಎಂದು ಪ್ರಮೋದ ಮುತಾಲಿಕ ಎಚ್ಚರಿಸಿದರು.
ಗೋಪಾಲ ದೇವಡಿಗ, ಕಿರಣ ಚಿತ್ರಗಾರ, ಸುಬೇದಾರ ರಾಮು, ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಟಾರ ಸೇರಿದಂತೆ ಇತರರು ಇದ್ದರು.