Advertisement

ಹೊರಗುತ್ತಿಗೆ ನೌಕರರಿಂದ ಅನಿರ್ದಿಷ್ಟ ಧರಣಿ

09:49 AM Oct 29, 2021 | Team Udayavani |

ಕಲಬುರಗಿ: ಜಿಲ್ಲೆಯ ವಸತಿ ನಿಲಯ ಗಳ ಹೊರಗುತ್ತಿಗೆ ನೌಕರರ ಬಾಕಿ ವೇತನ, ಕೊರೊನಾ ಸಂದರ್ಭದ ರಜೆ ವೇತನ ಮತ್ತು ಇಪಿಎಫ್‌ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ನಗರದ ಜಗತ್‌ ವೃತ್ತದಲ್ಲಿ ಗುರುವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗಿದೆ.

Advertisement

ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲೆಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಐದಾರು ತಿಂಗಳ ಬಾಕಿ ವೇತನ ಪಾವತಿಸಿಲ್ಲ. ವೇತನ ಕಡಿತ ಮಾಡಿದ ಇಪಿಎಫ್‌, ಇಎಸ್‌ಐ ಹಣ ನೌಕರರ ಹೆಸರಿಗೆ ಜಮೆ ಮಾಡಿಲ್ಲ. ಇದರಿಂದ ಹೊರಗುತ್ತಿಗೆ ನೌಕರರು ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದಿಂದ ವೇತನ ಹಣ ಬಿಡುಗಡೆಯಾಗಲು ವಿಳಂಬವಾದರೂ ಮ್ಯಾನ್‌ಪವರ್‌ ಏಜೆನ್ಸಿಗಳು ಕನಿಷ್ಟ ಮೂರು ತಿಂಗಳಾದರೂ ವೇತನ ಪಾವತಿಸಬೇಕೆಂಬ ನಿಯಮವಿದೆ. ಆದರೂ, ಏಜೆನ್ಸಿಗಳು ಐದಾರು ತಿಂಗಳ ಕಾಲ ವೇತನ ಕೊಡದೇ ಮೋಸ ಮಾಡಲಾಗುತ್ತಿದೆ. ಅಲ್ಲದೇ, ಏಜೆನ್ಸಿಗಳಿಗೆ ಪ್ರತಿ ತಿಂಗಳು ನೌಕರರ ಸೇವೆ ಸಲ್ಲಿಸಿದ ಬಗ್ಗೆ ಹಾಜರಾತಿ ಕೊಡದೇ ಇರುವುದರಿಂದ ಪ್ರತಿ ವರ್ಷದಲ್ಲಿ ಒಂದೆರಡು ತಿಂಗಳು ನೌಕರರ ವೇತನ ದುರುಪಯೋಗ ಆಗುತ್ತಿದೆ ಎಂದು ಆರೋಪಿಸಿದರು.

ಹೊರಗುತ್ತಿಗೆ ನೌಕರರ ಸಂಕಷ್ಟ ತಪ್ಪಿಸಲು ಪ್ರತಿ ತಿಂಗಳು 5ನೇ ತಾರೀಖೀನ ಒಳಗಾಗಿ ದುಡಿದ ನೌಕರರ ಹಾಜರಾತಿ ಕೊಡಬೇಕು. 10ನೇ ತಾರೀಖೀನ ಒಳಗಾಗಿ ವೇತನ ಪಾವತಿಸುವ ವ್ಯವಸ್ಥೆ ಮಾಡಬೇಕು. ಅಲ್ಲದೇ, ನೌಕರರಿಗೆ ವೇತನ ಪಾವತಿಸುತ್ತಿರುವ ಏಜೆನ್ಸಿಗಳಿಂದ 2020-21ನೇ ಸಾಲಿನ ತಾತ್ಕಾಲಿಕ ನೇಮಕಾತಿ ಆದೇಶ ಕೊಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಉಪಾಧ್ಯಕ್ಷ ಮೇಘರಾಜ ಕಠಾರೆ, ಕಾರ್ಯದರ್ಶಿ ಸುರೇಶ ದೊಡ್ಡಮನಿ, ಮುಖಂಡರಾದ ಭಾಗಣ್ಣ ದೇವನೂರ, ಮಾಳಪ್ಪ ಸಿರಸಗಿ, ರವಿ ಸಿರಸಗಿ, ಪರಶುರಾಮ ಹಡಲಗಿ, ಮಹೆಬೂಬಸಾಬ್‌, ಶೋಭಾ ಸುಲ್ತಾನ ಪೂರ ಹಾಗೂ ಇನ್ನಿತರ ನೌಕರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next