ಬರೋಬ್ಬರಿ ಆರು ವರ್ಷ … ಪ್ರೇಮ್ ನಿರ್ದೇಶನದಿಂದ ದೂರವಿದ್ದ ಅವಧಿ ಇದು. ಈಗ ಪ್ರೇಮ್ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಅದು “ದಿ ವಿಲನ್’ ಚಿತ್ರದ ಮೂಲಕ. ಸುದೀಪ್ ಹಾಗೂ ಶಿವರಾಜಕುಮಾರ್ ನಾಯಕರಾಗಿರುವ “ದಿ ವಿಲನ್’ ಚಿತ್ರದ ಫಸ್ಟ್‌ಲುಕ್ ಈಗಾಗಲೇ ಬಿಡುಗಡೆಯಾಗಿದೆ. ಅಭಿಮಾನಿಗಳು ಇಷ್ಟಪಟ್ಟಿದ್ದೂ ಆಗಿದೆ. ಇದೇ ಖುಷಿಯಲ್ಲಿ ಪ್ರೇಮ್ ಮೂರು ದಿನಗಳ ಚಿತ್ರೀಕರಣ ಮುಗಿಸಿದ್ದಾರೆ.
ಆರಂಭದಲ್ಲೇ ಮಿನರ್ವ ಮಿಲ್‌ನಲ್ಲಿ ಮಾಸ್ ಮಾದ ಸಾಹಸ ನಿರ್ದೇಶನದಲ್ಲಿ ಆ್ಯಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ ಪ್ರೇಮ್. ಸುದೀಪ್ ಹಾಗೂ ತೆಲುಗು ನಟ ಶ್ರೀಕಾಂತ್ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಚಿತ್ರ ಮೂಡಿಬರುತ್ತಿರುವ ರೀತಿ ಹಾಗೂ ಕಲಾವಿದರ ಪ್ರೋತ್ಸಾಹ ಪ್ರೇಮ್‌ಗೆ ಖುಷಿಕೊಟ್ಟಿದೆ. “ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ಬರಿ¤ದೆ ಬ್ರದರ್. ಸುದೀಪ್ ಕೂಡಾ ಖುಷಿಯಾಗಿದ್ದಾರೆ’ ಎನ್ನುತ್ತಾರೆ ಪ್ರೇಮ್.
ಆರು ವರ್ಷಗಳ ನಂತರ ಮತ್ತೆ ಆ್ಯಕ್ಷನ್ ಕಟ್ ಹೇಳುತ್ತಿರುವ ಅನುಭವ ಹೇಗಿದೆ ಎಂದರೆ, “ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ. ಒಂದು ವರ್ಷದಿಂದ ಕುಳಿತು ಪ್ಲಾನ್ ಮಾಡಿದ್ದೇವೆ. ಹಾಗಾಗಿ ಯಾವುದೇ ಟೆನ್ಶನ್ ಇಲ್ಲ’ ಎನ್ನುತ್ತಾರೆ. ಈ ಹಿಂದೆ “ಜೋಗಯ್ಯ’ದಲ್ಲಿ ನಂದ ಎಂಬ ಛಾಯಾಗ್ರಾಹಕನನ್ನು ಲಾಂಚ್ ಮಾಡಿದ ಪ್ರೇಮ್ ಈ ಬಾರಿ ಗಿರೀಶ್ ಎಂಬ ಹೊಸ ಛಾಯಾಗ್ರಾಹಕನನ್ನು “ವಿಲನ್’ನಲ್ಲಿ ಲಾಂಚ್ ಮಾಡುತ್ತಿದ್ದಾರೆ.
“ಛಾಯಾಗ್ರಾಹಕ ಗಿರಿ ಕೆಲಸ ಕೂಡಾ ತುಂಬಾ ಚೆನ್ನಾಗಿದೆ. ನಾನು ಏನು ಬಯಸುತ್ತೇನೆಂಬುದು ಗಿರಿಗೆ ಚೆನ್ನಾಗಿ ಗೊತ್ತಿದೆ. ಆತ ಹೊಸದಾಗಿ ಬಂದು ಸೇರಿಕೊಂಡಿಲ್ಲ. ಕಳೆದ ಒಂದು ವರ್ಷದಿಂದ ಆತ ಜೊತೆಗಿದ್ದಾನೆ. ನಾನು ಸ್ಕ್ರಿಪ್ಟ್ಗೆ ಓಂಕಾರ ಬರೆದ ದಿನದಿಂದಲೂ ಆತ ನನ್ನ ಜೊತೆಗಿದ್ದಾನೆ. ಹಾಗಾಗಿ, ಯಾವುದೇ ಕನ್‌ಫ್ಯೂಶನ್ ಇಲ್ಲ’ ಎನ್ನುವುದು ಪ್ರೇಮ್ ಮಾತು. ಚಿತ್ರಕ್ಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಿರೀಕ್ಷೆ ಕಂಡು ಪ್ರೇಮ್‌ಗೂ ಆಶ್ಚರ್ಯವಾಗಿದೆ.
“ಸಹಜವಾಗಿಯೇ ಸುದೀಪ್ ಹಾಗೂ ಶಿವಣ್ಣ ಸಿನಿಮಾ ಎಂದಾಗ ಒಂದು ಮಟ್ಟದ ನಿರೀಕ್ಷೆ ಇರುತ್ತದೆ ಎಂದುಕೊಂಡಿದ್ದೆ. ಆದರೆ, ಈ ಮಟ್ಟದ ನಿರೀಕ್ಷೆ ಹುಟ್ಟಿಕೊಳ್ಳುತ್ತದೆಂದು ನಾನಂದುಕೊಂಡಿರಲಿಲ್ಲ. ಫಸ್ಟ್‌ಲುಕ್ ಬಿಟ್ಟ ನಂತರವಂತೂ ಎಲ್ಲಾ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ, ಎಲ್ಲರೂ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಖುಷಿಯಿಂದ ಹೇಳುತ್ತಾರೆ. “ಇದೊಂದು ನೀಟಾದ, ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾವಾಗಿ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ’ ಎನ್ನಲು ಮರೆಯುವುದಿಲ್ಲ.